Fake Loan App: ವಂಚಕ ಸಾಲದ ಆ್ಯಪ್ಗಳನ್ನು ಪತ್ತೆ ಹಚ್ಚುವುದು ಹೇಗೆ? ಇಲ್ಲಿವೆ 6 ಟಿಪ್ಸ್
ಆನ್ಲೈನ್ನಲ್ಲಿ ಆ್ಯಪ್ ಮೂಲಕ ಸಾಲ ನೀಡುವುದಾಗಿ ತಿಳಿಸುವಂಥದ್ದರ ಪೈಕಿ ವಂಚನೆ ಮಾಡುವಂಥವು ಯಾವುವು ಎಂಬುದನ್ನು ಪತ್ತೆ ಮಾಡುವುದಕ್ಕೆ ಇಲ್ಲಿವೆ 6 ಟಿಪ್ಸ್.
ಕೊರೊನಾ ಬಿಕ್ಕಟ್ಟು ಆರೋಗ್ಯ ಸಮಸ್ಯೆಯೊಂದನ್ನೇ ಅಲ್ಲ, ಆರ್ಥಿಕ ಸಮಸ್ಯೆಯನ್ನೂ ತಂದೊಡ್ಡಿದೆ. ಉದ್ಯೋಗಗಳನ್ನು ಕಳೆದುಕೊಳ್ಳುವವರು, ವ್ಯಾಪಾರ ಇಲ್ಲದಂತಾಗಿರುವವರು, ಆಟೋ, ಕಾರು ಓಡಿಸುತ್ತಿದ್ದು ಈಗ ದಿಕ್ಕು ತೋಚದಂತೆ ಆಗಿರುವವರು ಅದೆಷ್ಟೋ ಮಂದಿ. ತಮ್ಮ ತಕ್ಷಣದ ಆರ್ಥಿಕ ಬಿಕ್ಕಟ್ಟಿಗೆ ಅಂತ ಸಾಲವನ್ನು ಎದುರು ನೋಡುತ್ತಿರುವವರು ಬೇಕಾದಷ್ಟು ಮಂದಿ ಇದ್ದಾರೆ. ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಒಂದಿಷ್ಟು ಹಣ ಕೆಲ ದಿನಗಳಿಗೆ ಮಟ್ಟಿಗೆ ಸಿಕ್ಕರೂ ಸಾಕು ಎಂಬ ಮನಸ್ಥಿತಿ ಅವರದು. ಇಂಥ ಸನ್ನಿವೇಶದಲ್ಲಿ ಹತ್ತಾರು ಲಕ್ಷ ಭಾರತೀಯರು ಸಾಲ ನೀಡುವಂಥ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಇದೇ ಸಮಯ ಅಂದುಕೊಂಡು ಸೈಬರ್ ಅಪರಾಧಿಗಳು ಪರಿಸ್ಥಿತಿಯ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ಬಳಕೆದಾರರನ್ನೇ ಗುರಿ ಮಾಡಿಕೊಳ್ಳುತ್ತಿದ್ದಾರೆ.
ನಿಮಗೆ ಗೊತ್ತಿರಲಿ, ನಂಬಿಕೆಗೆ ಅರ್ಹವಾದಂಥವೇ ಬೇಕಾದಷ್ಟು ಫಿನ್ಟೆಕ್ ಕಂಪೆನಿಗಳು ಸಣ್ಣ ಪ್ರಮಾಣದ ಸಾಲವನ್ನು ನೀಡಲು ಸಿದ್ಧವಾಗಿವೆ. ಆದರೆ ಸಾಲ ಪಡೆಯುವವರು ಮಾತ್ರ ವಂಚಕ ಆ್ಯಪ್ಗಳ ಬಲೆಗೆ ಬೀಳುತ್ತಿದ್ದಾರೆ. ತಕ್ಷಣವೇ ಸಾಲ ನೀಡುತ್ತೇವೆಂದು ಹೇಳುತ್ತಾ, ಬಲೆಗೆ ಬೀಳಿಸುವ ಮೋಸಗಾರ ಆ್ಯಪ್ಗಳು ಯಾವುವು ಎಂಬ ಬಗ್ಗೆಯೇ ಜನರಿಗೆ ತಿಳಿಯುತ್ತಿಲ್ಲ. ದಿನದಿನಕ್ಕೂ ವಂಚನೆ ಪ್ರಕರಣಗಳು ಜಾಸ್ತಿ ಆಗುತ್ತಿರುವ ಈ ಸಮಯದಲ್ಲಿ ವಂಚಕರಿಂದ ಹುಷಾರಾಗಿ ಇರುವುದು ಹೇಗೆ ಎಂಬುದರ ಮಾಹಿತಿ ಈ ಲೇಖನದಲ್ಲಿದೆ.
ವಿಶ್ವಾಸಾರ್ಹತೆ ಪರೀಕ್ಷಿಸಿಕೊಳ್ಳಬೇಕು ಯಾವ ಸಾಲ ನೀಡುವ ಸಂಸ್ಥೆಯಿಂದ ಹಣ ಪಡೆಯಲಾಗುತ್ತಿದೆಯೋ ಅದರ ವಿಶ್ವಾಸಾರ್ಹತೆ ಪರೀಕ್ಷಿಸಬೇಕು. ಅದು ಬ್ಯಾಂಕ್ ಆಗಿರಲಿ ಅಥವಾ ಎನ್ಬಿಎಫ್ಸಿ ಆಗಿರಲಿ, ಆರ್ಬಿಐ ಬಳಿ ನೋಂದಣಿ ಆಗಿದೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಇನ್ನು ಆ ಆ್ಯಪ್ನ ರೇಟಿಂಗ್ ಮತ್ತು ರಿವ್ಯೂ ಹೇಗಿದೆ ಅಂತ ಕಡ್ಡಾಯವಾಗಿ ನೋಡಿಕೊಳ್ಳಬೇಕು. ಸಾಲ ನೀಡುವ ಸಂಸ್ಥೆ ಹೇಗೆ ನಡೆದುಕೊಂಡಿದೆ ಎಂದು ಇತರರು ಹಂಚಿಕೊಂಡ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕು.
ವಯಕ್ತಿಕ ಮಾಹಿತಿಯ ಸಂಪರ್ಕ ನೀಡಬೇಡಿ ಕೆಲವು ಆ್ಯಪ್ಗಳು ನಿಮ್ಮ ಮೊಬೈಲ್ ಫೋನ್ನ ಗ್ಯಾಲರಿ, ಕಾಂಟ್ಯಾಕ್ಟ್ನ ಸಂಪರ್ಕಕ್ಕೂ ಅನುಮತಿ ಕೇಳುತ್ತದೆ. ಅವುಗಳಿಗೆ ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುವ ಮುಂಚೆ ಆಲೋಚಿಸಿ. ಆ ಸಂಪರ್ಕಕ್ಕೆ ಅವಕಾಶವಾದರೂ ಯಾಕೆ ನೀಡಬೇಕು? ಜವಾಬ್ದಾರಿಯುತವಾದ ಸಾಲ ನೀಡುವ ಸಂಸ್ಥೆಗಳು ಗ್ರಾಹಕರ ವಯಕ್ತಿಕ ಮಾಹಿತಿಯನ್ನು ಮೊದಲನೆಯದಾಗಿ ಕೇಳುವುದಿಲ್ಲ. ಇನ್ನು ಬೇರೆಯವರಿಗೆ ಮಾರಿಕೊಳ್ಳುವುದು ದೂರದ ಮಾತಾಯಿತು. ಆದ್ದರಿಂದ ನಿಮ್ಮ ವಯಕ್ತಿಕ ಮಾಹಿತಿ ಕೇಳಲಾಗುತ್ತಿದೆ ಅಥವಾ ಫೋನ್ನ ಮೂಲಕ ಯಾವುದಾದರೂ ಸಂಪರ್ಕಕ್ಕೆ ಅನುಮತಿ ಕೇಳಲಾಗುತ್ತಿದೆ ಎಂದಾದಲ್ಲಿ ಆ ಸಾಲದ ಮಟ್ಟಿಗೆ ಆ ಮಾಹಿತಿ ಅದೆಷ್ಟರ ಮಟ್ಟಿಗೆ ಮುಖ್ಯ ಅಥವಾ ಯಾಕೆ ಮುಖ್ಯ ಎಂದು ಪ್ರಶ್ನಿಸಿಕೊಳ್ಳಿ.
ಸಾಲ ನೀಡುವ ಸಂಸ್ಥೆಯ ವೆಬ್ಸೈಟ್ ಸುರಕ್ಷಿತವೇ? ಸಾಲ ನೀಡುವ ಸಂಸ್ಥೆಯ ವೆಬ್ಸೈಟ್ಗೆ ಭೇಟಿ ನೀಡುವಾಗ ಪ್ಯಾಡ್ ಲಾಕ್ ಐಕಾನ್ ಗಮನಿಸಿ. ಯಾವುದೇ ಪುಟ ನಿಮ್ಮ ವಯಕ್ತಿಕ ಮಾಹಿತಿ ಬಗ್ಗೆ ಪ್ರಶ್ನೆ ಮಾಡುತ್ತದೆಯೇ ನೋಡಿ. HTTP://websites ಸುರಕ್ಷಿತ. ಮಾಹಿತಿ ಕಳುವು ಮಾಡಿ, ಬೇರೆಯವರಿಗೆ ಅದನ್ನು ಮಾರುವುದರ ವಿರುದ್ಧ ಅವು ಸುರಕ್ಷಿತವಾಗಿರುತ್ತವೆ. ಗೌರವಾನ್ವಿತ ಸಾಲ ನೀಡುವ ಸಂಸ್ಥೆಗಳು ಹಗರಣಗಳಿಂದ ತನ್ನ ಗ್ರಾಹಕರನ್ನು ರಕ್ಷಿಸಿಕೊಳ್ಳುತ್ತವೆ. ಡೇಟಾ ಸುರಕ್ಷಿತವಾಗಿರುತ್ತದೆ ಮತ್ತು ಗ್ರಾಹಕರ ಮಾಹಿತಿಯನ್ನು ಇತರರು ಕದಿಯುವುದಕ್ಕೆ ಬಿಡಲ್ಲ.
ಭೌತಿಕ ವಿಳಾಸ ಸಾಲ ಪಡೆಯುವ ಆ್ಯಪ್ ಅಥವಾ ಫಿನ್ಟೆಕ್ನದು ಭೌತಿಕ ವಿಳಾಸ ಇರಬೇಕು. ಒಂದು ವೇಳೆ ಸರಿಯಾದ ವಿಳಾಸ ಸಿಗದೆ ಇದ್ದಲ್ಲಿ ಅಂಥವುಗಳಿಂದ ಸಾಲ ಪಡೆಯುವುದರಿಂದ ದೂರ ಉಳಿಯಬೇಕು. ಕಾನೂನು ಸಮಸ್ಯೆಗಳು ಬಾರದಿರಲಿ ಎಂದು ಹಲವು ವಂಚಕರು ಅಜ್ಞಾತವಾಗಿರಲು ಬಯಸುತ್ತಾರೆ.
ಮುಂಚಿತವಾಗಿಯೇ ಶುಲ್ಕ ಕೆಲವು ಸಣ್ಣ ಹಣಕಾಸು ಸಾಲ ನೀಡು ಆ್ಯಪ್ಗಳು ಆರಂಭದಲ್ಲೇ ಅರ್ಜಿ ಶುಲ್ಕ ಅಥವಾ ಸದಸ್ಯತ್ವ ಶುಲ್ಕ ಎಂದು ರೂ. 100ರಿರಿಂದ 400ರ ತನಕ ಆಯಾ ಆ್ಯಪ್ನಲ್ಲಿ ಪಡೆದುಕೊಳ್ಳಲಾಗುತ್ತದೆ. ಒಂದು ಸಲ ಹಣ ಪಾವತಿಸಿದ ನಂತರ ಇತರ ಅಪ್ಲಿಕೇಷನ್ಗೆ ರೀಡೈರೆಕ್ಟ್ ಮಾಡುತ್ತದೆ ಹಾಗೂ ಅಲ್ಲಿ ಅಪ್ಲೈ ಮಾಡುವಂತೆ ಸೂಚಿಸುತ್ತವೆ. ಏಕೆಂದರೆ ಹಲವು ಸಣ್ಣ ಮಟ್ಟದ ಸಾಲ ನೀಡುವ ಆ್ಯಪ್ಗಳಿಗೆ ಸ್ವಂತ ವೆಬ್ಸೈಟ್ ಇಲ್ಲ ಹಾಗೂ ಲೈಸೆನ್ಸ್ ಕೂಡ ಇಲ್ಲ. ಅವರು ಇತರ ದೊಡ್ಡ ಆ್ಯಪ್ಗಳ ಜತೆ ಕೆಲಸ ಮಾಡುತ್ತಾರೆ.
ಗೂಗಲ್ ಪ್ಲೇ ಸ್ಟೋರ್ ನಿಯಮಾವಳಿ 60 ದಿನಗಳಿಗಿಂತ ಕಡಿಮೆ ಅವಧಿಯ ಸಾಲ ನೀಡುವ ಆ್ಯಪ್ಗಳಿಗೆ ಗೂಗಲ್ ಪ್ಲೇ ಅವಕಾಶ ನೀಡುವುದಿಲ್ಲ. ತುಂಬ ಶೀಘ್ರವಾಗಿ ಸಾಲ ನೀಡುವುದಾಗಿಯೂ ಹೆಚ್ಚು ಮೊತ್ತ ಮಂಜೂರು ಮಾಡುವುದಾಗಿ ಕೂಡ ಹೇಳಬಹುದು. ಆದರೆ ಅಂಥದ್ದರಿಂದ ಎಚ್ಚರಿಕೆಯಿಂದ ಇರಬೇಕು. ಆರ್ಬಿಐನಿಂದ ನೋಂದಣಿಯಾದ ಆ್ಯೊ್ಗಳಿಂದ ಮಾತ್ರ ಸಾಲ ಪಡೆಯಬೇಕು.
ಇದನ್ನೂ ಓದಿ: Bank online fraud: ಆನ್ಲೈನ್ ವಂಚನೆ ಪ್ರಕರಣದಲ್ಲಿ ಬ್ಯಾಂಕ್ ಹಾಗೂ ಗ್ರಾಹಕರ ಜವಾಬ್ದಾರಿ ಏನು?
(How To Find Fraud Online Lending App Here Are The 6 Tips)