Bank online fraud: ಆನ್ಲೈನ್ ವಂಚನೆ ಪ್ರಕರಣದಲ್ಲಿ ಬ್ಯಾಂಕ್ ಹಾಗೂ ಗ್ರಾಹಕರ ಜವಾಬ್ದಾರಿ ಏನು?
ಬ್ಯಾಂಕಿಂಗ್ ವ್ಯವಹಾರದಲ್ಲಿ ಆನ್ಲೈನ್ ವಂಚನೆಯಾದಲ್ಲಿ ಬ್ಯಾಂಕ್ ಹಾಗೂ ಗ್ರಾಹಕರ ಜವಾಬ್ದಾರಿ ಏನು ಎಂಬ ಬಗ್ಗೆ ಗ್ರಾಹಕ ಕೋರ್ಟ್ ಆಸಕ್ತಿಕರವಾದ ಸಂಗತಿಯ ಕಡೆಗೆ ಗಮನ ಸೆಳೆದಿದೆ.
ನೀವು ಬ್ಯಾಂಕ್ ವಂಚನೆಯ ಸಂತ್ರಸ್ತರಾಗಿದ್ದೀರಾ ಅಥವಾ ಯಾರಾದರೂ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಮೋಸ ಮಾಡಿದ್ದಾರಾ? ನಿಮಗಾದ ನಷ್ಟಕ್ಕೆ ಬ್ಯಾಂಕ್ ಹೊಣೆ ಅಲ್ಲ ಎಂದು ಗುಜರಾತ್ನ ಗ್ರಾಹಕ ನ್ಯಾಯಾಲಯ ಹೇಳಿದೆ. ಗ್ರಾಹಕರಿಗೆ ಆದ ₹ 41,500 ನಷ್ಟಕ್ಕೆ ಪರಿಹಾರ ಸಾಧ್ಯವಿಲ್ಲ ಎಂದು ಅಮ್ರೇಲಿಯಲ್ಲಿರುವ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ತಿಳಿಸಿದೆ. ವೈಯಕ್ತಿಕ ನಿರ್ಲಕ್ಷ್ಯದಿಂದ ಆದ ವಂಚನೆಗೆ ಬ್ಯಾಂಕ್ ಯಾವ ರೀತಿಯಲ್ಲೂ ಜವಾಬ್ದಾರ ಅಲ್ಲ ಎಂದು ಕೋರ್ಟ್ ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.
ಅನಧಿಕೃತ ವ್ಯವಹಾರಗಳಿಗೆ ಬ್ಯಾಂಕ್ಗಳೇ ಹಣ ಪಾವತಿಗೆ ಜವಾಬ್ದಾರಿ ಎಂದು ಈ ಹಿಂದೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು (NCDRC) ಹೇಳಿತ್ತು. ಕೋರ್ಟ್ ಪ್ರಕಾರ, ಬ್ಯಾಂಕ್ ವ್ಯಾಪ್ತಿಗೆ ಬಾರದ ಜವಾಬ್ದಾರಿಯನ್ನೂ ಅದಕ್ಕೆ ಹೊರಿಸುವುದಕ್ಕೆ ಆಗುವುದಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಾರ, ಮೂರನೇ ವ್ಯಕ್ತಿಯು ಕನ್ನ ಹಾಕಿ, ಗ್ರಾಹಕರು ಅಥವಾ ಬ್ಯಾಂಕ್ ಹೊರತುಪಡಿಸಿ ಬೇರೆಯವರಿಂದ ವ್ಯವಹಾರ ನಡೆದಿದ್ದಲ್ಲಿ ಮೂರು ದಿನಗಳ ಒಳಗಾಗಿ (ಕಾರ್ಯ ನಿರ್ವಹಿಸುವ ದಿನಗಳು) ಬ್ಯಾಂಕ್ ಗಮನಕ್ಕೆ ಈ ಸುದ್ದಿಯನ್ನು ತರಬೇಕು. ಆಗ ಗ್ರಾಹಕರು ಯಾವ ರೀತಿಯಲ್ಲೂ ಜವಾಬ್ದಾರಿ ಆಗುವುದಿಲ್ಲ.
ವಂಚನೆಯಾಗಿ ಮೂರು ದಿನದೊಳಗಾಗಿ ವರದಿ ಮಾಡಿದಲ್ಲಿ ಗ್ರಾಹಕರ ಜವಾಬ್ದಾರಿ ಶೂನ್ಯ. ಆದರೆ ನಾಲ್ಕರಿಂದ ಏಳು ದಿನದೊಳಗೆ ವಂಚನೆ ಪ್ರಕರಣಗಳ ಬಗ್ಗೆ ತಿಳಿಸಿದಲ್ಲಿ ಆಗ ಗ್ರಾಹಕರ ಜವಾಬ್ದಾರಿ ರೂ 5000ದಿಂದ ರೂ 25,000 ಇರುತ್ತದೆ. ಏಳು ದಿನಗಳು ದಾಟಿದಲ್ಲಿ ಬ್ಯಾಂಕ್ನಿಂದ ಒಪ್ಪಿಕೊಂಡಿರುವಂತೆ ನಿಯಮಾವಳಿಗಳ ಪಾಲನೆ ಮಾಡಲಾಗುತ್ತದೆ.
ವಂಚನೆ ಹೇಗಾಯಿತು? ಆ ವ್ಯಕ್ತಿ ಹೆಸರು ಕುರ್ಜಿ ಜಾವಿಯಾ. ನಿವೃತ್ತ ಶಾಲಾ ಶಿಕ್ಷಕರು, ಸದ್ಯಕ್ಕೆ ವಕೀಲರಾಗಿದ್ದಾರೆ. ಅವರಿಗೆ 2018ರ ಏಪ್ರಿಲ್ 2ರಂದು ಫೋನ್ ಮಾಡಿದ ವ್ಯಕ್ತಿಯು, ತಾನು ಎಸ್ಬಿಐ ಶಾಖೆಯಿಂದ ಮಾತನಾಡುತ್ತಿರುವುದಾಗಿ ನಂಬಿಸಿದ್ದು, ಅವರಿಂದ ಎಟಿಎಂ ಕಾರ್ಡ್ ಮಾಹಿತಿಯನ್ನು ಪಡೆದುಕೊಂಡಿದ್ದಾನೆ. ಇದಾದ ಮರುದಿನ ಅವರ ಖಾತೆಗೆ 39,358 ಪೆನ್ಷನ್ ಬಂದಿದ್ದು, ಆ ನಂತರ ರೂ. 41,500 ವಿಥ್ಡ್ರಾ ಆಗಿದೆ.
ಈ ವ್ಯವಹಾರವನ್ನು ನೋಡಿ ಗಾಬರಿ ಬಿದ್ದ ಜಾವಿಯಾ ಬ್ಯಾಂಕ್ಗೆ ಕರೆ ಮಾಡಿದರೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆ ನಂತರ ಗೊತ್ತಾಗಿದ್ದೇನೆಂದರೆ, ಆ ಹಣವನ್ನು ವಂಚಕರು ಆನ್ಲೈನ್ ಶಾಪಿಂಗ್ಗೆ ಬಳಸಿದ್ದಾರೆ. ಬ್ಯಾಂಕ್ ಶೀಘ್ರವಾಗಿ ಪ್ರತಿಕ್ರಿಯಿಸಿದಿದ್ದರೆ ನಷ್ಟವನ್ನು ತಡೆಯಬಹುದಿತ್ತು ಎನ್ನುವುದು ಸಂತ್ರಸ್ತ ಗ್ರಾಹಕ ಜಾವಿಯಾ ಮಾತು. ಅದರ ಆಧಾರದಲ್ಲಿ, ತಾವು ಕಳೆದುಕೊಂಡ ಮೊತ್ತ ಹಾಗೂ ತಮಗಾದ ಮಾನಸಿಕ ಹಿಂಸೆಗೆ ರೂ. 30,000 ಪರಿಹಾರಕ್ಕೆ ಕೋರಿ ಪ್ರಕರಣ ದಾಖಲಿಸಿದರು.
ಬ್ಯಾಂಕ್ ಜವಾಬ್ದಾರಿ ಹೊರಬೇಕೆ? ಗ್ರಾಹಕ ಕೋರ್ಟ್ ಹೇಳಿದ ಪ್ರಕಾರ, ಬ್ಯಾಂಕ್ ಖಾತೆ ಮಾಹಿತಿ ಅಥವಾ ಎಟಿಎಂ ಕಾರ್ಡ್ ಮಾಹಿತಿಗಳನ್ನು ಯಾರ ಜತೆಗೂ ಹಂಚಿಕೊಳ್ಳದಂತೆ ಬ್ಯಾಂಕ್ಗಳಿಂದ ಸಾಕಷ್ಟು ಎಚ್ಚರಿಕೆ ನೀಡಲಾಗುತ್ತದೆ. ಅಷ್ಟೇ ಅಲ್ಲ, ಎಚ್ಚರಿಕೆ, ಮಾರ್ಗದರ್ಶಿ ಸೂತ್ರಗಳನ್ನು ನೋಟಿಸ್ ಬೋರ್ಡ್ನಲ್ಲಿ ಹಾಕುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲೂ ಎಚ್ಚರಿಕೆ ಸಂದೇಶಗಳನ್ನು ರವಾನಿಸಿವೆ. ಅಷ್ಟೇ ಅಲ್ಲ, ಬ್ಯಾಂಕ್ನ ಯಾವುದೇ ಸಿಬ್ಬಂದಿ ನಿಮ್ಮ ಬಳಿ ಎಟಿಎಂ ಕಾರ್ಡ್ ಮಾಹಿತಿಯನ್ನು ಕೇಳುವುದಿಲ್ಲ ಎಂಬ ಸಂದೇಶವನ್ನು ಸಹ ಕಳುಹಿಸಲಾಗುತ್ತದೆ ಎಂದು ಹೇಳಿದೆ.
ಕೋರ್ಟ್ ಹೇಳಿರುವ ಪ್ರಕಾರ, ಏನು ಮಾಡಬಾರದು ಎಂದು ಬ್ಯಾಂಕ್ ಹೇಳಿತ್ತೋ ಅದನ್ನೇ ಜಾವಿಯಾ ಮಾಡಿದ್ದಾರೆ. ಸುರಕ್ಷತಾ ವಹಿವಾಟು ನಡೆಸುವುದಕ್ಕೆ ಬ್ಯಾಂಕ್ನ ಮಾರ್ಗದರ್ಶಿ ಸೂತ್ರಗಳು ಯಾವುದನ್ನೂ ಅವರು ಪಾಲಿಸಿಲ್ಲ. ಆದ್ದರಿಂದ ಬ್ಯಾಂಕ್ ಕಡೆಯಿಂದ ನಿರ್ಲಕ್ಷ್ಯ ಆಗಿಲ್ಲ ಎಂದು ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: Debit Credit Card: ಆನ್ಲೈನ್ ಶಾಪಿಂಗ್ಗೆ ನೀವು ಕಾರ್ಡ್ ಬಳಸ್ತೀರಾ? ಮೋಸ ಆಗದಿರಲು ಹೀಗೆ ಮಾಡಿ