ಅಮೆರಿಕದ ನಿಷೇಧದ ನಡುವೆಯೂ ರಷ್ಯನ್ ತೈಲ ಖರೀದಿ ಮುಂದುವರಿಸಲಿರುವ ಭಾರತ
India Prioritizes Energy: ಅಮೆರಿಕದ ನಿರ್ಬಂಧಗಳ ನಡುವೆಯೂ ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರಿಸಲಿದೆ ಎಂದು ವರದಿಯಾಗಿದೆ. ದೇಶದ ಇಂಧನ ಭದ್ರತೆಯನ್ನು ಖಾತ್ರಿಪಡಿಸುವುದು ಭಾರತದ ಪ್ರಮುಖ ಆದ್ಯತೆಯಾಗಿದೆ. ಕಚ್ಚಾ ತೈಲ ಮತ್ತು ಎಲ್‌ಪಿಜಿ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಭಾರತವು ರಷ್ಯಾದ ಮೇಲೆ ಅವಲಂಬಿತವಾಗಿದೆ. ಅಮೆರಿಕದ ನಿಲುವು ಅಸ್ಪಷ್ಟವಾಗಿದ್ದು, ಭಾರತವು ಪರ್ಯಾಯ ಇಂಧನ ಮೂಲಗಳನ್ನು ಹುಡುಕುತ್ತಿದೆ.

ನವದೆಹಲಿ, ಏಪ್ರಿಲ್ 17: ಅಮೆರಿಕದ ನಿಷೇಧ ಕ್ರಮ ಜಾರಿಯಲ್ಲಿದ್ದರೂ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಲಿದೆ ಎಂದು ದಿ ಮಿಂಟ್ನಲ್ಲಿ ವರದಿಯಾಗಿದೆ. ಅಧಿಕೃತ ಮೂಲಗಳು ತಿಳಿಸಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಆದರೆ, ಭಾರತದ ವತಿಯಿಂದ ಈ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ಬಿಡುಗಡೆ ಆಗಿಲ್ಲ. ಭಾರತವು ರಷ್ಯಾದಿಂದ ತೈಲ ಖರೀದಿ ಮಾಡಲಾಗುತ್ತಿರುವುದು ದೇಶದ ಹಿತದೃಷ್ಟಿಯಿಂದ ತೆಗೆದುಕೊಂಡ ಸ್ವಂತ ನಿರ್ಧಾರವೇ ಹೊರತು ಇನ್ನೊಂದು ರಾಷ್ಟ್ರದ ಕೃಪೆಯಿಂದಲ್ಲ ಎಂಬರ್ಥದಲ್ಲಿ ಸರ್ಕಾರವು ಈ ಹಿಂದೆ ಹೇಳಿದ್ದಿದೆ.
ಇರಾನ್ ಯುದ್ಧ ಶುರುವಾದ ಬಳಿಕ ಗಲ್ಫ್ ರಾಷ್ಟ್ರಗಳಿಂದ ತೈಲ ಸರಬರಾಜು ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ರಷ್ಯನ್ ತೈಲ ಪೂರೈಕೆ ಅತ್ಯಗತ್ಯವೆನಿಸಿತ್ತು. ಈ ಹಿನ್ನೆಲೆಯಲ್ಲಿ ರಷ್ಯಾ ಮೇಲೆ ಅಮೆರಿಕ ಹಾಕಿದ್ದ ತೈಲ ನಿಷೇಧವನ್ನು ಸಡಿಲಿಸಲಾಗಿತ್ತು. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸಲು ಸಾಧ್ಯವಾಗಿತ್ತು. ಅಮೆರಿಕ ಘೋಷಿಸಿದ್ದ 30 ದಿನಗಳ ವಿನಾಯಿತಿ ಏಪ್ರಿಲ್ 11ಕ್ಕೆ ಮುಗಿದಿದೆ. ಅಮೆರಿಕವು ಈ ವಿನಾಯಿತಿಯನ್ನು ಮುಂದುವರಿಸದೇ ಇರುವುದರಿಂದ, ಅಲ್ಲಿಂದ ಮತ್ತೆ ನಿಷೇಧ ಕ್ರಮ ಜಾರಿಯಲ್ಲಿದ್ದಂತಾಗಿದೆ.
ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್
ಇರಾನ್ನ ಚಟುವಟಿಕೆಗಳಿಗೆ ಬೆಂಬಲ ನೀಡುವಂತಹ ಯಾವುದೇ ದೇಶದ ವಿರುದ್ಧ ಹೆಚ್ಚುವರಿ ನಿಷೇಧಗಳನ್ನು ಹೇರಲಾಗುತ್ತದೆ ಎಂದು ಅಮೆರಿಕದ ಟ್ರೆಷರಿ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಆದರೆ, ರಷ್ಯನ್ ತೈಲ ಖರೀದಿಯನ್ನು ನಿರ್ದಿಷ್ಟವಾಗಿ ಹೇಳಿಲ್ಲದಿರುವುದು ಅಮೆರಿಕದ ನಿಲುವು ಅಸ್ಪಷ್ಟಗೊಳ್ಳುವಂತೆ ಮಾಡಿದೆ.
ಇಂಧನ ಬಿಕ್ಕಟ್ಟಿನಿಂದ ಪಾರಾಗುವುದು ಭಾರತದ ಗುರಿ
ಆಸ್ಟ್ರೇಲಿಯಾ, ರಷ್ಯಾ ಮತ್ತು ಅಮೆರಿಕದಿಂದ ಭಾರತ ಎಂಟು ಲಕ್ಷ ಟನ್ಗಳಷ್ಟು ಎಲ್‌ಪಿಜಿ ಪೂರೈಕೆ ಭದ್ರಪಡಿಸಿಕೊಂಡಿದೆ. ರಷ್ಯಾದಿಂದ ಕಚ್ಚಾ ತೈಲ ಪೂರೈಕೆಯನ್ನು ಭಾರತ ಹೆಚ್ಚಿಸಿಕೊಂಡಿದೆ. 2023-24, 2024-25ರಲ್ಲಿ ರಷ್ಯಾದಿಂದ ಶೇ. 35ಕ್ಕೂ ಹೆಚ್ಚು ತೈಲವನ್ನು ಭಾರತ ಪಡೆದಿತ್ತು. ಚೀನಾ ನಂತರ ರಷ್ಯನ್ ತೈಲ ಅತಿಹೆಚ್ಚು ಪಡೆಯುತ್ತಿರುವ ದೇಶ ಭಾರತವಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಟ್ರಂಪ್ 40 ನಿಮಿಷ ಫೋನ್ ಸಂಭಾಷಣೆ; ಹಾರ್ಮುಜ್ ಕುರಿತು ಚರ್ಚೆ
ಭಾರತಕ್ಕೆ ಈಗ ಕಚ್ಚಾ ತೈಲಕ್ಕಿಂತ ಹೆಚ್ಚಾಗಿ ಎಲ್‌ಪಿಜಿ ಸಮಸ್ಯೆ ಇದೆ. ಸದ್ಯ ಎಲ್ಪಿಜಿಗಾಗಿ ಅಮೆರಿಕದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಪಶ್ಚಿಮ ಏಷ್ಯಾ ವಾತಾವರಣ ತಿಳಿಯಾದರೆ, ಗಲ್ಫ್ ರಾಷ್ಟ್ರಗಳಿಂದ ಎಲ್‌ಪಿಜಿ ಪೂರೈಕೆಯಾಗಲು ಶುರುವಾಗತೊಡಗಿದಾಗ ಸಮಸ್ಯೆ ಕಡಿಮೆ ಆಗಬಹುದು. ಇದೇ ವೇಳೆ, ಎಲ್‌ಪಿಜಿ ಪೂರೈಕೆಗಾಗಿ ಭಾರತವು ಕೆಲವೇ ದೇಶಗಳ ಮೇಲೆ ಅವಲಂಬಿತವಾಗುವ ಬದಲು ಮೂಲಗಳನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:43 pm, Fri, 17 April 26




