ಐಆರ್ಡಿಎಐ ಹೊಸ ಡಿಸ್ಟ್ರಿಬ್ಯೂಶನ್ ನಿಯಮಗಳಿಗೆ ಪ್ರಸ್ತಾಪ; ಇನ್ಷೂರೆನ್ಸ್ ಕಮಿಷನ್ ಇಳಿಕೆ ಇತ್ಯಾದಿ ಕ್ರಮ; ಗ್ರಾಹಕರಿಗೆ ಆಗುವ ಲಾಭಗಳೇನು?
ಇನ್ಷೂರೆನ್ಸ್ ಸೆಕ್ಟರ್ನ ಪ್ರಾಧಿಕಾರವಾದ ಐಆರ್ಡಿಎಐ ಹೊಸ ಸುಧಾರಣೆಗಳನ್ನು ಪ್ರಸ್ತಾಪಿಸಿದೆ. ಇನ್ಷೂರೆನ್ಸ್ ಡಿಸ್ಟ್ರಿಬ್ಯೂಶನ್ ನಿಯಮಗಳಲ್ಲಿ ಬದಲಾವಣೆ ತರಲು ಯೋಜಿಸಿದೆ. ಗ್ರಾಹಕರಿಗೆ ಅನುಕೂಲವಾಗಿರುವ ಮತ್ತು ಹೆಚ್ಚು ಕ್ಷಮತೆ ಇರುವ ವಿಮಾ ವಿತರಣಾ ಇಕೋಸಿಸ್ಟಂ ಸೃಷ್ಟಿಸಲು ಈ ಸುಧಾರಣೆಗಳು ನೆರವಾಗುವ ನಿರೀಕ್ಷೆ ಇದೆ. ಇನ್ಷೂರೆನ್ಸ್ ಕಮಿಷನ್ ವೆಚ್ಚ ತಗ್ಗಿಸುವುದು ಇತ್ಯಾದಿ ವಿವಿಧ ಪ್ರಸ್ತಾಪಗಳಿವೆ.

ನವದೆಹಲಿ, ಸೆಪ್ಟೆಂಬರ್ 24: ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಸಂಸ್ಥೆಯು ವಿಮಾ ಪಾಲಿಸಿಗಳ ಮಾರಾಟ ಮತ್ತು ವಿತರಣೆಗೆ ಸಂಬಂಧಿಸಿದಂತೆ ನೂತನ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರಲು ಮುಂದಾಗಿದೆ. ಈ ಹೊಸ ಪ್ರಸ್ತಾವಿತ ನಿಯಮಗಳು ವಿಮಾ ಏಜೆಂಟರ ಕಮಿಷನ್ ವ್ಯವಸ್ಥೆ ಮತ್ತು ಪಾಲಿಸಿದಾರರ (Policyholders) ಮೇಲೆ ಪರಿಣಾಮ ಬೀರಬಲ್ಲುವು. ಗ್ರಾಹಕ ಕೇಂದ್ರಿತವಾದ, ಸ್ಪರ್ಧಾತ್ಮಕವಾದ, ಪಾರದರ್ಶಕವಾದ ವಿತರಣಾ ವ್ಯವಸ್ಥೆ ನಿರ್ಮಿಸುವ ಉದ್ದೇಶದಿಂದ ಈ ಸುಧಾರಣೆಗಳನ್ನು ತರಲಾಗುತ್ತಿದೆ.
ವಿಮಾ ಸಂಸ್ಥೆಗಳು ಮತ್ತು ವಿತರಣಾ ಸಂಸ್ಥೆಗಳು ಕಮಿಷನ್ ನೀತಿ ಮತ್ತು ವ್ಯವಸ್ಥೆಯನ್ನು ಬಹಳ ಸರಳವಾಗಿ ವಿವರಿಸಬೇಕು. ಕೆಲ ಕಮರ್ಷಿಯಲ್ ಇನ್ಷೂರೆನ್ಸ್ ಪಾಲಿಸಿಗಳೂ ಕೂಡ ಕಮಿಷನ್ ಮಾಹಿತಿ ಬಹಿರಂಗಪಡಿಸಬೇಕು ಎಂದು ಹೇಳಲಾಗಿದೆ.
ಕಮಿಷನ್ ದರಗಳಲ್ಲಿ ಇಳಿತಾಯ ಸಾಧ್ಯತೆ
ನೂತನ ವಿಮಾ ವಿತರಣಾ ನಿಯಮಗಳ ಅಡಿಯಲ್ಲಿ ವಿಮಾ ಕಂಪನಿಗಳು ಏಜೆಂಟರು ಮತ್ತು ಮಧ್ಯವರ್ತಿಗಳಿಗೆ (Brokers) ನೀಡುವ ಕಮಿಷನ್ ಶೇಕಡಾವಾರು ಹಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ.
ವಿಮಾ ಸಂಸ್ಥೆಗಳ ಗರಿಷ್ಠ ನಿರ್ವಹಣಾ ವೆಚ್ಚದ (Expenses of Management – EoM) ನಿಯಮದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ವೆಚ್ಚದ ಮಿತಿಯನ್ನು ಕಡಿಮೆಗೊಳಿಸುವುದು ಇದರ ಮುಖ್ಯ ಅಂಶ.
ಇದನ್ನೂ ಓದಿ: ಭಾರತದ ಮೂಲಸೌಕರ್ಯ ಕ್ರಾಂತಿ; ಸೇತುವೆ, ಸುರಂಗ, ಎಕ್ಸ್ಪ್ರೆಸ್ವೇಗಳಿಂದ ಮಿಂಚಿನ ಸಂಚಾರ; ಪ್ರಯಾಣ ಅವಧಿ ಗಣನೀಯವಾಗಿ ಇಳಿಕೆ
ಇಲ್ಲಿ ಇಒಎಂ ಎಂದರೆ ನಿರ್ವಹಣಾ ವೆಚ್ಚ. ಒಂದು ಇನ್ಷೂರೆನ್ಸ್ ಉತ್ಪನ್ನದ ಒಟ್ಟು ಬೆಲೆಯಲ್ಲಿ ವಿವಿಧ ಕಮಿಷನ್, ಜಾಹೀರಾತು, ಮಾರ್ಕೆಟಿಂಗ್ ಇತ್ಯಾದಿ ವೆಚ್ಚಗಳೂ ಸೇರಿರುತ್ತವೆ. ಈ ವೆಚ್ಚಗಳು ಒಟ್ಟು ಉತ್ಪನ್ನ ಬೆಲೆಯಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿರಬಾರದು. ಈಗ ಈ ಮಿತಿಯನ್ನು ಗಣನೀಯವಾಗಿ ಮತ್ತು ಹಂತ ಹಂತವಾಗಿ ಕಡಿಮೆ ಮಾಡುವ ಪ್ರಸ್ತಾಪ ಮಾಡಲಾಗಿದೆ.
ಪಾಲಿಸಿದಾರರಿಗೆ ಸಿಗುವ ಪ್ರಯೋಜನಗಳು
- ಕಡಿಮೆ ಪ್ರೀಮಿಯಂ ದರಗಳು: ಕಮಿಷನ್ ವೆಚ್ಚಗಳು ಕಡಿಮೆಯಾಗುವುದರಿಂದ, ವಿಮಾ ಕಂಪನಿಗಳು ಆ ಉಳಿತಾಯವನ್ನು ಗ್ರಾಹಕರಿಗೆ ತಲುಪಿಸುವ ಸಾಧ್ಯತೆಯಿದೆ. ಇದರಿಂದಾಗಿ ಹೊಸ ಪಾಲಿಸಿಗಳ ಪ್ರೀಮಿಯಂ ದರಗಳು ಸ್ಪರ್ಧಾತ್ಮಕವಾಗಿ ಕಡಿಮೆಯಾಗಬಹುದು.
- ಹೆಚ್ಚಿನ ಪಾರದರ್ಶಕತೆ: ಪ್ರೀಮಿಯಂ ಹಣದಲ್ಲಿ ಎಷ್ಟು ಭಾಗ ಕಮಿಷನ್‌ಗೆ ಹೋಗುತ್ತದೆ ಮತ್ತು ಎಷ್ಟು ಭಾಗ ಹೂಡಿಕೆ ಅಥವಾ ಕವರ್‌ಗೆ ಹೋಗುತ್ತದೆ ಎಂಬ ಸ್ಪಷ್ಟತೆ ಗ್ರಾಹಕರಿಗೆ ಸಿಗಲಿದೆ.
- ತಪ್ಪು ಮಾರಾಟಕ್ಕೆ ತಡೆ: ಹೆಚ್ಚಿನ ಕಮಿಷನ್ ಆಸೆಗೆ ಸೂಕ್ತವಲ್ಲದ ಪಾಲಿಸಿಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದನ್ನು (Mis-selling) ನಿಯಂತ್ರಿಸಲು ಈ ಹೊಸ ನಿಯಮಗಳು ನೆರವಾಗಲಿವೆ.
ಇದನ್ನೂ ಓದಿ: ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕುತ್ತಿದ್ದೀರಾ? ಇಷ್ಟು ದಂಡ ಬೀಳಬಹುದು, ನಿಯಮ ತಿಳಿಯಿರಿ
ಏಜೆಂಟರು ಮತ್ತು ವಿತರಣಾ ಜಾಲದ ಮೇಲಿನ ಪರಿಣಾಮ
- ಗುಣಮಟ್ಟಕ್ಕೆ ಆದ್ಯತೆ: ಕೇವಲ ಪಾಲಿಸಿ ಮಾರಾಟ ಮಾಡುವುದಷ್ಟೇ ಅಲ್ಲದೇ, ಗ್ರಾಹಕರಿಗೆ ನೀಡುವ ಸೇವೆ ಮತ್ತು ಪಾಲಿಸಿ ನವೀಕರಣದ ಆಧಾರದ ಮೇಲೆ ಏಜೆಂಟರ ಆದಾಯ ನಿರ್ಧಾರವಾಗಲಿದೆ.
- ಡಿಜಿಟಲ್ ಮಾರ್ಗಕ್ಕೆ ಪ್ರೋತ್ಸಾಹ: ಆನ್‌ಲೈನ್ ಮತ್ತು ನೇರ ವಿತರಣಾ ಮಾರ್ಗಗಳಿಗೆ ಹೆಚ್ಚು ಆದ್ಯತೆ ಸಿಗಲಿದ್ದು, ಮಧ್ಯವರ್ತಿಗಳಿಲ್ಲದೆ ನೇರವಾಗಿ ಪಾಲಿಸಿ ಖರೀದಿಸುವ ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ಸಿಗಲಿದೆ.
ಈ ಹೊಸ ಬದಲಾವಣೆಗಳು ಭಾರತೀಯ ವಿಮಾ ಕ್ಷೇತ್ರವನ್ನು ಹೆಚ್ಚು ಪಾರದರ್ಶಕಗೊಳಿಸಲು ಮತ್ತು ದೀರ್ಘಾವಧಿಯಲ್ಲಿ ಪಾಲಿಸಿದಾರರ ಹಿತರಕ್ಷಣೆಯನ್ನು ಕಾಯ್ದುಕೊಳ್ಳಲು ಪೂರಕವಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




