ವಿಶ್ವ ಬ್ಯಾಂಕ್ನ ಮೇಲ್ಮಧ್ಯಮ ಆದಾಯ ಮಟ್ಟ ದಾಟಿದ ಕರ್ನಾಟಕ; ತಮಿಳುನಾಡನ್ನೂ ಮೀರಿಸಿದ ಕರುನಾಡು; ಟಾಪ್-5ನಲ್ಲಿ ದಕ್ಷಿಣ ರಾಜ್ಯಗಳೇ ಹೆಚ್ಚು
Karnataka among 5 states at rose to upper middle income level by World Bank report: ವಿಶ್ವಬ್ಯಾಂಕ್ನಿಂದ ವಿಶ್ವದ ವಿವಿಧ ದೇಶಗಳ ಆದಾಯ ವರ್ಗೀಕರಣದ ದತ್ತಾಂಶ ಬಿಡುಗಡೆಯಾಗಿದೆ. ಭಾರತ ಕೆಳ ಮಧ್ಯಮ ಆದಾಯ ಗುಂಪಿನಲ್ಲೇ ಮುಂದುವರಿದಿದೆ. ಆದರೆ, ಕರ್ನಾಟಕ ಸೇರಿ ಐದು ಭಾರತೀಯ ರಾಜ್ಯಗಳು ಮೇಲ್ಮಧ್ಯಮ ಆದಾಯ ಗುಂಪಿಗೆ ಏರಿವೆ. ಇನ್ನೂ ಮೂರು ರಾಜ್ಯಗಳು ಸ್ವಲ್ಪದರಲ್ಲಿ ಈ ಉನ್ನತ ಮಟ್ಟದಿಂದ ವಂಚಿತಗೊಂಡಿವೆ.

ಮುಖ್ಯಾಂಶಗಳು
- ವಿಶ್ವಬ್ಯಾಂಕ್ನಿಂದ ವಿಶ್ವದ ವಿವಿಧ ದೇಶಗಳ ಆದಾಯ ವರ್ಗೀಕರಣದ ದತ್ತಾಂಶ ಬಿಡುಗಡೆಯಾಗಿದೆ.
- ಭಾರತ ಕೆಳ ಮಧ್ಯಮ ಆದಾಯ ಗುಂಪಿನಲ್ಲೇ ಮುಂದುವರಿದಿದೆ.
- ಕರ್ನಾಟಕ ಸೇರಿ ಐದು ಭಾರತೀಯ ರಾಜ್ಯಗಳು ಮೇಲ್ಮಧ್ಯಮ ಆದಾಯ ಗುಂಪಿಗೆ ಏರಿವೆ.
ಬೆಂಗಳೂರು, ಜುಲೈ 8: ಮೇಲ್ಮಧ್ಯಮ ಆದಾಯ ಮಟ್ಟ ದಾಟಿದ ಕೆಲವೇ ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಇದೆ. ಅತಿಹೆಚ್ಚು ತಲಾದಾಯ ಇರುವ ಭಾರತೀಯ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ರಾಷ್ಟ್ರರಾಜಧಾನಿ ದೆಹಲಿಯನ್ನು ಬಿಟ್ಟರೆ ಕರ್ನಾಟಕವೇ (Karnataka) ಅತಿಹೆಚ್ಚು ತಲಾದಾಯ ಹೊಂದಿರುವುದು. ವಿಶ್ವಬ್ಯಾಂಕ್‌ನ ಆದಾಯ ವರ್ಗೀಕರಣದ ಪ್ರಕಾರ, ಭಾರತ ವಿಶ್ವಬ್ಯಾಂಕ್‌ನ ‘ಕೆಳ-ಮಧ್ಯಮ ಆದಾಯ’ (Lower-Middle Income) ಮಟ್ಟದಲ್ಲಿದ್ದರೂ 5 ರಾಜ್ಯಗಳು ‘ಮೇಲ್ಮಧ್ಯಮ ಆದಾಯದ’ (Upper-Middle Income) ಮಿತಿಯನ್ನು ದಾಟಿ ಮುನ್ನಡೆದಿವೆ. ದೆಹಲಿ, ಕರ್ನಾಟಕ ಬಿಟ್ಟರೆ ಈ ಸಾಧನೆ ಮಾಡಿರುವುದು ತೆಲಂಗಾಣ, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳು ಮಾತ್ರ. ಇತರ 3 ರಾಜ್ಯಗಳು ಅತ್ಯಲ್ಪ ಅಂತರದಿಂದ ಈ ಮೈಲಿಗಲ್ಲನ್ನು ತಲುಪಲು ಸಾಧ್ಯವಾಗಿಲ್ಲ. ಅವರು ಮಹಾರಾಷ್ಟ್ರ, ಹರ್ಯಾಣ ಮತ್ತು ಕೇರಳ ರಾಜ್ಯಗಳು.
ಮೇಲ್ಮಧ್ಯಮ ಆದಾಯ ಮಿತಿ ದಾಟಿದ 5 ರಾಜ್ಯಗಳು
ವಿಶ್ವಬ್ಯಾಂಕ್ ಪ್ರಕಾರ ಮೇಲ್ಮಧ್ಯಮ ಆದಾಯದ ಗುಂಪಿಗೆ ಸೇರಲು ಕನಿಷ್ಠ $4,635 ತಲಾ ಆದಾಯದ ಅಗತ್ಯವಿದೆ. ಭಾರತದ ಈ ಐದು ರಾಜ್ಯಗಳು ಅದನ್ನು ಮೀರಿವೆ:
- ದೆಹಲಿ: $6,217 (ದೇಶದಲ್ಲೇ ಮೊದಲ ಸ್ಥಾನ)
- ಕರ್ನಾಟಕ: $5,579 (ಎರಡನೇ ಸ್ಥಾನ)
- ತೆಲಂಗಾಣ: $5,407
- ತಮಿಳುನಾಡು: $5,329
- ಗುಜರಾತ್: $4,734
ಸ್ವಲ್ಪದರಲ್ಲೇ ಮೈಲಿಗಲ್ಲು ವಂಚಿತಗೊಂಡ 3 ರಾಜ್ಯಗಳು
ಈ ರಾಜ್ಯಗಳು ಅತ್ಯಲ್ಪ ಡಾಲರ್‌ಗಳ ವ್ಯತ್ಯಾಸದಿಂದಾಗಿ ಮೇಲ್ಮಧ್ಯಮ ಆದಾಯದ ಪಟ್ಟಿಗೆ ಸೇರಲು ಬಾಕಿ ಉಳಿದಿವೆ:
- ಮಹಾರಾಷ್ಟ್ರ: $4,628 (ಕೇವಲ $8 ರಷ್ಟು ಬಾಕಿ)
- ಹರಿಯಾಣ: $4,627 (ಕೇವಲ $9 ರಷ್ಟು ಬಾಕಿ)
- ಕೇರಳ: $4,610 (ಕೇವಲ $26 ರಷ್ಟು ಬಾಕಿ)
ಇದನ್ನೂ ಓದಿ: ನಕಲಿ ವೆಬ್ಸೈಟ್ಗಳನ್ನು ಗುರುತಿಸುವುದು ಸುಲಭ; 5 ಉಪಾಯಗಳನ್ನು ಹಂಚಿಕೊಂಡಿದೆ ಸರ್ಕಾರದ ಪಿಐಬಿ ಫ್ಯಾಕ್ಟ್ಚೆಕ್
ಕನಿಷ್ಠ ಆದಾಯ ಹೊಂದಿರುವ ರಾಜ್ಯಗಳು
ದೇಶದಲ್ಲಿ ಆರ್ಥಿಕ ಅಸಮಾನತೆ ಇನ್ನೂ ಹೆಚ್ಚಿರುವುದನ್ನು ಈ ಅಂಕಿ-ಅಂಶಗಳು ತೋರಿಸುತ್ತವೆ:
- ಬಿಹಾರ: $984 (ದೇಶದಲ್ಲೇ ಅತ್ಯಂತ ಕಡಿಮೆ)
- ಉತ್ತರ ಪ್ರದೇಶ: $1,403
- ಜಾರ್ಖಂಡ್: $1,470
ವಿಶ್ವಬ್ಯಾಂಕ್ ವರ್ಗೀಕರಣ ಹೇಗೆ ಕೆಲಸ ಮಾಡುತ್ತದೆ?
- ಕಡಿಮೆ ಆದಾಯ (Low Income): $1,175 ಕ್ಕಿಂತ ಕಡಿಮೆ
- ಕೆಳ-ಮಧ್ಯಮ ಆದಾಯ (Lower-Middle Income): $1,175 ರಿಂದ $4,635 (ಭಾರತ ಒಟ್ಟಾರೆಯಾಗಿ ಈ ಗುಂಪಿನಲ್ಲಿದೆ)
- ಮೇಲ್ಮಧ್ಯಮ ಆದಾಯ (Upper-Middle Income): $4,635 ರಿಂದ $14,375
- ಹೆಚ್ಚಿನ ಆದಾಯ (High Income): $14,375 ಕ್ಕಿಂತ ಹೆಚ್ಚು
ಕೆಲ ರಾಜ್ಯಗಳ ಬೆಳವಣಿಗೆಗೆ ಪ್ರಮುಖ ಕಾರಣಗಳೇನು?
ವಿಶೇಷವಾಗಿ ಕರ್ನಾಟಕ, ದೆಹಲಿ, ಮತ್ತು ತೆಲಂಗಾಣದಂತಹ ರಾಜ್ಯಗಳ ಈ ಸಾಧನೆಗೆ ಅಲ್ಲಿನ ಮಾಹಿತಿ ತಂತ್ರಜ್ಞಾನ (IT), ಉತ್ಪಾದನಾ ವಲಯ (Manufacturing), ಆರ್ಥಿಕ ಸೇವೆಗಳು, ಕೈಗಾರಿಕಾ ಪ್ರಗತಿ ಹಾಗೂ ಹೆಚ್ಚಿನ ವಿದೇಶಿ ಹೂಡಿಕೆಗಳು ಪ್ರಮುಖ ಕಾರಣವಾಗಿವೆ. ಉದಾಹರಣೆಗೆ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ತಲಾ ಆದಾಯವು ಇಂದು ವಿಯೆಟ್ನಾಂ ಮತ್ತು ಇಂಡೋನೇಷ್ಯಾದಂತಹ ದೇಶಗಳಿಗಿಂತಲೂ ಅಧಿಕವಾಗಿದೆ.
ಆದಾಗ್ಯೂ, ಶ್ರೀಮಂತ ರಾಜ್ಯಗಳು ಮತ್ತು ಬಡ ರಾಜ್ಯಗಳ ನಡುವಿನ ಆರ್ಥಿಕ ಅಂತರವು (Interstate inequality) ಕಳೆದ ಮೂರು ದಶಕಗಳಲ್ಲಿ ಹೆಚ್ಚುತ್ತಿರುವುದು ಮತ್ತೊಂದು ಆತಂಕಕಾರಿ ವಿಷಯವಾಗಿದೆ ಎಂಬುದು ಗಮನಾರ್ಹ.
ಇದನ್ನೂ ಓದಿ: ಜೂನ್ನಲ್ಲಿ ಆಟೊಮೊಬೈಲ್ ಕ್ಷೇತ್ರಕ್ಕೆ ಸುಗ್ಗಿ; 25 ಲಕ್ಷಕ್ಕೂ ಅಧಿಕ ವಾಹನಗಳ ದಾಖಲೆ ಮಾರಾಟ
ಕರ್ನಾಟಕ ಮುಖ್ಯಮಂತ್ರಿ ಡಿಕೆಶಿ ಪ್ರತಿಕ್ರಿಯೆ
ವಿಶ್ವಬ್ಯಾಂಕ್‌ನ ಲೇಟೆಸ್ಟ್ ವರದಿಯಲ್ಲಿ ಕರ್ನಾಟಕವು ಮೇಲ್ಮಧ್ಯಮ ಆದಾಯ ಗುಂಪಿಗೆ ಬಡ್ತಿ ಪಡೆದಿರುವ ವಿಚಾರವನ್ನು ರಾಜ್ಯ ಸಿಎಂ ಡಿಕೆ ಶಿವಕುಮಾರ್ ಪ್ರಸ್ತಾಪಿಸಿ, ಇದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡಬೇಕಾದ ವಿಚಾರ ಎಂದಿದ್ದಾರೆ.
‘ನಮ್ಮ ರೈತರು, ಕಾರ್ಮಿಕರು, ಉದ್ದಿಮೆದಾರರು, ನವೋದ್ಯಮಗಳು, ಕೈಗಾರಿಕೆಗಳು, ಸಂಶೋಧಕರು, ಮಹಿಳೆಯರು, ಯುವಜನರ ಕಠಿಣ ಪರಿಶ್ರಮ ಮತ್ತು ಆಶೋತ್ತರಗಳನ್ನು ಇದು ಪ್ರತಿಬಿಂಬಿಸುತ್ತದೆ. ಇವರು ಕರ್ನಾಟಕವನ್ನು ತಂತ್ರಜ್ಞಾನ, ಉತ್ಪಾದನೆ, ನಾವೀನ್ಯತೆ ಮತ್ತು ಹೂಡಿಕೆಯಲ್ಲಿ ಮುಂಚೂಣಿಗೆ ಬರುವಂತೆ ಮಾಡಿದ್ದಾರೆ’ ಎಂದು ಡಿಕೆಶಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಅವರ ಎಕ್ಸ್ ಪೋಸ್ಟ್
When growth is driven by innovation and strengthened by inclusion, it creates lasting prosperity.
Karnataka crossing the World Bank’s Upper Middle Income threshold, with an estimated per capita income of US$5,579, is a testament to that journey and a proud moment for every… pic.twitter.com/4tvvkc1HzI
— DK Shivakumar (@DKShivakumar) July 7, 2026
‘ಕರ್ನಾಟಕದ ಅತಿದೊಡ್ಡ ಬಲವೇ ಅದರ ಜನರು. ಅವಕಾಶ, ನಾವೀನ್ಯತೆ ಮತ್ತು ಸಮಗ್ರ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಮುಂಚೂಣಿಗೆ ತರಬೇಕೆನ್ನುವುದು ನಮ್ಮ ದೃಷ್ಟಿ. ರಾಜ್ಯದ ಆರ್ಥಿಕ ಪ್ರಗತಿಯ ಲಾಭಗಳು ಪ್ರತಿಯೊಂದು ಮನೆ, ಪ್ರದೇಶ ಮತ್ತು ನಾಗರಿಕರನ್ನು ಮುಟ್ಟುವಂತಾಗಬೇಕು’ ಎಂದು ಮುಖ್ಯಮಂತ್ರಿಗಳು ಆಶಯ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:15 pm, Wed, 8 July 26




