ವರ್ಷಕ್ಕೆ 90 ದಿನ ಕೆಲಸ ಮಾಡಿದರೂ ಸಾಕು, ಅರೆಕಾಲಿಕ ಕಾರ್ಮಿಕರಿಗೆ ಅನುಕೂಲವಾಗಲಿರುವ ಸರ್ಕಾರದ ಹೊಸ ರೂಲ್ಸ್
Centre drafts social security rules for gig workers: ಓಲಾ, ಜೊಮಾಟೊದಂತಹ ಪ್ಲಾಟ್ಫಾರ್ಮ್ಗಳಲ್ಲಿ ಕೆಲಸ ಮಾಡುವ, ಗಿಗ್ ವರ್ಕರ್ಸ್ ಎನ್ನಲಾಗುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸೌಲಭ್ಯ ಸಿಗುತ್ತದೆ. ಈ ಸೌಲಭ್ಯಕ್ಕೆ ಅರ್ಹರಾಗಲು ಗಿಗ್ ವರ್ಕರ್ವೊಬ್ಬ ಒಂದು ವರ್ಷದಲ್ಲಿ ಕನಿಷ್ಠ 90 ದಿನ ಕೆಲಸ ಮಾಡಬೇಕು. ಇಂಥದ್ದೊಂದು ಕರಡು ಪ್ರಸ್ತಾಪವನ್ನು ಸರ್ಕಾರ ರೂಪಿಸಿದೆ.

ನವದೆಹಲಿ, ಜನವರಿ 2: ಓಲಾ, ಊಬರ್, ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ ಇತ್ಯಾದಿ ಪ್ಲಾಟ್ಫಾರ್ಮ್ಗಳಲ್ಲಿ ಕೆಲಸ ಮಾಡುವ ಡ್ರೈವರ್ಗಳು ಹಾಗೂ ಅರೆಕಾಲಿಕ ಕಾರ್ಮಿಕರಿಗೆ (Gig Workers) ಸಾಮಾಜಿಕ ಭದ್ರತಾ ಸಂಹಿತೆಯ ಸೌಲಭ್ಯ ಸಿಗುವ ಸಂಬಂಧ ಸರ್ಕಾರ ಹೊಸ ನಿಯಮಗಳನ್ನು ಪ್ರಸ್ತಾಪಿಸಿದೆ. ಸರ್ಕಾರ ರೂಪಿಸಿರುವ ಕರಡು ನಿಯಮಗಳ ಪ್ರಕಾರ, ಗಿಗ್ ಕಾರ್ಮಿಕರು ಒಂದು ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ಕೆಲಸ ಮಾಡಿದರೂ, ಅವರು ಸೋಷಿಯಲ್ ಸೆಕ್ಯೂರಿಟಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.
ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಪ್ಲಾಟ್ಫಾರ್ಮ್ಗಳಿಗೆ ಕೆಲಸ ಮಾಡುತ್ತಿದ್ದರೆ..?
ಈಗ ಒಬ್ಬ ಆಟೊಚಾಲಕ ಅಥವಾ ಕ್ಯಾಬ್ ಚಾಲಕರಾಗಿದ್ದರೆ ನಮ್ಮ ಯಾತ್ರಿ, ಓಲಾ, ಊಬರ್ ಪ್ಲಾಟ್ಫಾರ್ಮ್ಗಳಿಗೆ ಸಬ್ಸ್ಕ್ರೈಬ್ ಆಗಿರುವುದುಂಟು. ಎಲ್ಲವನ್ನೂ ಆನ್ನಲ್ಲಿಟ್ಟುಕೊಂಡು ಗ್ರಾಹಕರಿಗಾಗಿ ಕಾಯುವುದುಂಟು. ಹಾಗೆಯೇ, ಸ್ವಿಗ್ಗಿ, ಜೊಮಾಟೊ ಎರಡಕ್ಕೂ ಕೆಲಸ ಮಾಡುವ ಡೆಲಿವರಿ ಪಾರ್ಟ್ನರ್ಸ್ ಕಾರ್ಮಿಕರಿರುತ್ತಾರೆ. ಹೀಗೆ, ಒಂದಕ್ಕಿಂತ ಹೆಚ್ಚು ಪ್ಲಾಟ್ಫಾರ್ಮ್ಗಳಲ್ಲಿ ಸಕ್ರಿಯವಾಗಿರುವ ಕಾರ್ಮಿಕರು ಸೋಷಿಯಲ್ ಸೆಕ್ಯೂರಿಟಿ ಸೌಲಭ್ಯ ಪಡೆಯಲು 120 ದಿನಗಳ ಕೆಲಸದ ಮಾನದಂಡ ಮುಟ್ಟಬೇಕು.
ಇದನ್ನೂ ಓದಿ: 21 ವರ್ಷದ ಬೆಂಗಳೂರು ಹುಡುಗ ಎಡ್ವರ್ಡ್ಗೆ ಎರಡೂವರೆ ಕೋಟಿ ರೂ ಸಂಬಳ ಆಫರ್
ಆದರೆ, ಇಲ್ಲೊಂದು ಅನುಕೂಲ ಇರುತ್ತದೆ. ಒಬ್ಬ ಕಾರ್ಮಿಕ ಒಂದು ದಿನದಲ್ಲಿ ಮೂರು ಪ್ಲಾಟ್ಫಾರ್ಮ್ಗಳಲ್ಲಿ ಲೈವ್ ಆಗಿದ್ದಾಗ, ಆತನ ಕೆಲಸದ ದಿನವನ್ನು ಒಂದು ಎಂದು ಪರಿಗಣಿಸದೆ ಮೂರು ಎಂದು ಪರಿಗಣಿಸಲಾಗುತ್ತದೆ. ಹೀಗೆ, ದಿನಕ್ಕೆ ಮೂರು ಪ್ಲಾಟ್ಫಾರ್ಮ್ಗಳಿಗೆ 40 ದಿನ ಕೆಲಸ ಮಾಡಿದರೂ ಸಾಕು, ಆತ ಸಾಮಾಜಿಕ ಭದ್ರತಾ ಸೌಲಭ್ಯ ಪಡೆಯಲು ಅರ್ಹನಾಗಿರುತ್ತಾನೆ. ಇಂಥದ್ದೊಂದು ಅವಕಾಶ ನೀಡುವ ಪ್ರಸ್ತಾವವನ್ನು ಸರ್ಕಾರ ಮಾಡಿದೆ.
ನೇರ ನೇಮಕಾತಿಯೇ ಆಗಬೇಕೆಂದಿಲ್ಲ…
ಅರೆಕಾಲಿಕ ಕಾರ್ಮಿಕ ಅಥವಾ ಗಿಗ್ ವರ್ಕರ್ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಯಾಗಲು ಕಂಪನಿಗೆ ನೇರವಾಗಿ ನೇಮಕಾತಿ ಆಗಿರಬೇಕೆಂದೇನಿಲ್ಲ. ಥರ್ಡ್ ಪಾರ್ಟಿ ಮೂಲಕ ಗುತ್ತಿಗೆ ಆಧಾರವಾಗಿ ಕೆಲಸ ಮಾಡುತ್ತಿದ್ದರೂ ಅವರಿಗೆ ಕವರೇಜ್ ಸಿಗಬೇಕು ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಭದ್ರತೆ ಸ್ಕೀಮ್ ಹೇಗಿರುತ್ತದೆ?
ಸರ್ಕಾರದ ಹೊಸ ಕಾರ್ಮಿಕ ಸಂಹಿತೆ ಪ್ರಕಾರ, ಅರೆಕಾಲಿಕ ಕಾರ್ಮಿಕರಿಗೆ ಹೆಲ್ತ್ ಇನ್ಷೂರೆನ್ಸ್, ಲೈಫ್ ಇನ್ಷೂರೆನ್ಸ್ ಮತ್ತು ಆಕ್ಸಿಡೆಂಟ್ ಇನ್ಷೂರೆನ್ಸ್ ಸೌಲಭ್ಯ ಕೊಡಬೇಕು. ಆಯುಷ್ಮಾನ್ ಭಾರತ್ ಸ್ಕೀಮ್ ಅಡಿಯಲ್ಲಿ ಅವರನ್ನು ಸೇರಿಸಬೇಕು ಎಂದಿದೆ.
ಇದನ್ನೂ ಓದಿ: ಪ್ಯಾಲೆಸ್ಟೀನ್ ಧ್ವಜದ ಸ್ಟಿಕರ್ ಅಂಟಿಸಿಕೊಂಡು ಆಡಿದ ಕಾಶ್ಮೀರೀ ಕ್ರಿಕೆಟಿಗ; ಪೊಲೀಸರಿಂದ ವಿಚಾರಣೆ
ಒಂದು ಅಂದಾಜು ಪ್ರಕಾರ, ಭಾರತದ ವಿವಿಧೆಡೆ ಒಟ್ಟು 1.27 ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಇಂಥ ಗಿಗ್ ವರ್ಕರ್ಸ್ ಇದ್ದಾರೆ ಎಂದು ಅಂದಾಜಿಸಲಾಗಿದೆ. ಮುಂದಿನ ಕೆಲ ವರ್ಷಗಳಲ್ಲಿ (2029-30) ಇಂಥ ಕಾರ್ಮಿಕರ ಸಂಖ್ಯೆ 2.35 ಕೋಟಿ ದಾಟುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




