ಮನಿ ಲಾಂಡರಿಂಗ್ ಶಂಕೆ; ದೇಶಾದ್ಯಂತ ಅಮೇಜಾನ್, ಫ್ಲಿಪ್ಕಾರ್ಟ್ ಮಾರಾಟಗಾರರ ಮೇಲೆ ಇಡಿ ಕಣ್ಣು
ED raids on Amazon, Flipkart sellers: ಇಕಾಮರ್ಸ್ ಪ್ಲಾಟ್ಫಾರ್ಮ್ಗಳನ್ನು ದುರುಪಯೋಗಿಸಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡಲಾಗುತ್ತಿದೆ ಎನ್ನುವ ಶಂಕೆಯ ಮೇಲೆ ಅಮೇಜಾನ್, ಫ್ಲಿಪ್ಕಾರ್ಟ್ ಇತ್ಯಾದಿಯಲ್ಲಿನ ಮಾರಾಟಗಾರರ ಮೇಲೆ ಇಡಿ ದಾಳಿ ಮಾಡುತ್ತಿದೆ. ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್ ನಗರಗಳಲ್ಲಿರುವ ವೆಂಡರ್ಗಳ ಸ್ಥಳಗಳ ಮೇಲೆ ರೇಡ್ ನಡೆಯುತ್ತಿದೆ.
ನವದೆಹಲಿ, ನವೆಂಬರ್ 7: ಅಮೇಜಾನ್, ಫ್ಲಿಪ್ಕಾರ್ಟ್ ಇತ್ಯಾದಿ ಇಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ನೊಂದಾಯಿಸಿಕೊಂಡಿರುವ ಮಾರಾಟಗಾರರ ಮೇಲೆ ಜಾರಿ ನಿರ್ದೇಶನಾಲಯ ಕಣ್ಣಿಟ್ಟಿದೆ. ಈ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳನ್ನು ಬಳಸಿ ಅಕ್ರಮ ಹಣ ವರ್ಗಾವಣೆ ನಡೆಯುತ್ತಿರಬಹುದು ಎನ್ನುವ ಶಂಕೆಯ ಮೇಲೆ ಈ ಮಾರಾಟಗಾರರನ್ನು ಇಡಿ ಅಧಿಕಾರಿಗಳು ಶೋಧಿಸುತ್ತಿದ್ದಾರೆ. ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್ಗಳಲ್ಲಿನ ವಿವಿಧ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ರೇಡ್ ನಡೆಸಿದ್ದಾರೆ ಎಂದು ಸಿಎನ್ಬಿಸಿ ಟಿವಿ18 ವೆಬ್ಸೈಟ್ನಲ್ಲಿ ವರದಿ ಮಾಡಲಾಗಿದೆ.
ಕೆಲ ಮಾರಾಟಗಾರರು ಅಮೇಜಾನ್, ಪ್ಲಿಪ್ಕಾರ್ಟ್ ಇತ್ಯಾದಿ ಇಕಾಮರ್ಸ್ ಪ್ಲಾಟ್ಫಾರ್ಮ್ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರಬಹುದು. ಅಕ್ರಮ ಹಣ ವರ್ಗಾವಣೆ ಮಾಡಲು ಅಥವಾ ಮುಚ್ಚಿಡಲು ಇಕಾಮರ್ಸ್ ಸೇಲ್ಸ್ ಅನ್ನು ಈ ಮಾರಾಟಗಾರರು ದುರುಪಯೋಗಿಸುತ್ತಿರಬಹುದು ಎನ್ನುವುದು ಜಾರಿ ನಿರ್ದೇಶನಾಲಯದ ಶಂಕೆ. ಈ ಹಿನ್ನೆಲೆಯಲ್ಲಿ ಅದು ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಜೆಟ್ ಏರ್ವೇಸ್ಗೆ ಅಂತಿಮ ವಿದಾಯ ಹೇಳಿದ ಸುಪ್ರೀಂಕೋರ್ಟ್; ಏರ್ಲೈನ್ಸ್ ಸಂಸ್ಥೆಯ ಸಮಾಪ್ತಿಗೆ ಕೋರ್ಟ್ ಆದೇಶ
ಭಾರತದಲ್ಲಿ ಇಕಾಮರ್ಸ್ ವಲಯ ಬಹಳ ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಇನ್ನಷ್ಟು ಪಾರದರ್ಶಕತೆ ನೆಲಸುವಂತೆ ಮಾಡಲು ಸರ್ಕಾರ ವಿವಿಧ ಕ್ರಮ ತೆಗೆದುಕೊಳ್ಳುತ್ತಿದೆ. ಈ ಕಾರಣಕ್ಕೆ ಇಕಾಮರ್ಸ್ ಸೆಕ್ಟರ್ನ ಮೇಲೆ ಕಾನೂನಿನ ಕಣ್ಣು ಹೆಚ್ಚು ನೆಟ್ಟಿದೆ.
ಕೆಲ ಮಾರಾಟಗಾರರಿಗೆ ಹೆಚ್ಚು ಆದ್ಯತೆ ನೀಡುವುದು ಇತ್ಯಾದಿ ನೀತಿಯನ್ನು ಇಕಾಮರ್ಸ್ ಪ್ಲಾಟ್ಫಾರ್ಮ್ಗಳು ಅನುಸರಿಸುತ್ತಿವೆ. ಇದು ಸ್ಪರ್ಧಾತ್ಮಕತೆಯನ್ನು ಹತ್ತಿಕ್ಕುತ್ತದೆ ಎನ್ನುವ ಆರೋಪಗಳು ಬಂದಿದ್ದವು. ಭಾರತದ ಸ್ಪರ್ಧಾ ಸಮಿತಿ (ಸಿಸಿಐ) ಈ ನಿಟ್ಟಿನಲ್ಲಿ ತನಿಖೆ ನಡೆಸಿತ್ತು. ಈ ಆರೋಪಗಳು ನಿಜವೆಂಬುದು ತನಿಖೆಯಿಂದ ಸಾಬೀತಾಗಿದೆ. ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ಹಾಗೂ ಇತರ ಇಕಾಮರ್ಸ್ ಕಂಪನಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಈ ಒಂದು ರೂಪಾಯಿ ನೋಟಿಗೆ ಬರೋಬ್ಬರಿ ಏಳು ಲಕ್ಷ ರೂ ಬೆಲೆ; ಏನಿದರ ವೈಶಿಷ್ಟ್ಯ ನೋಡಿ…
ಈಗ ಈ ಪ್ಲಾಟ್ಫಾರ್ಮ್ಗಳನ್ನು ದುರುಪಯೋಗಿಸಿಕೊಳ್ಳುತ್ತಿರುವ ಥರ್ಡ್ ಪಾರ್ಟಿ ಸೆಲ್ಲರ್ಗಳ ಮೇಲೆ ಇಡಿ ಕಣ್ಣು ಬಿದ್ದಿದೆ. ಅಂತೆಯೇ, ವಿವಿಧೆಡೆ ರೇಡ್ ಮಾಡಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ