ಜೆಟ್ ಏರ್ವೇಸ್ ಮುಚ್ಚಿದರೆ ಅದರ ಷೇರುದಾರರಿಗೆ ಸಿಗೋದೇನು? ಷೇರಿನ ಫೇಸ್ವ್ಯಾಲ್ಯೂ ಕೂಡ ಸಿಗಲ್ವಾ?
Jet Airways shareholders: ಜೆಟ್ ಏರ್ವೇಸ್ನ ಆಸ್ತಿ ಮಾರಿ ಕಂಪನಿಯನ್ನು ಪೂರ್ಣ ವಿಸರ್ಜನೆಗೊಳಿಸಲು ಸುಪ್ರೀಂಕೋರ್ಟ್ ಆದೇಶಿಸಿದೆ. ಜೆಟ್ ಏರ್ವೇಸ್ ಷೇರುಬೆಲೆ ಶೇ. 5ರಷ್ಟು ಕಡಿಮೆ ಆಗಿ 34.04 ರೂ ತಲುಪಿದೆ. 1.43 ಲಕ್ಷ ರೀಟೇಲ್ ಹೂಡಿಕೆದಾರರಿದ್ದು, ಅವರಿಗೆ ವೈಟ್ ವಾಶ್ ಆಗುವ ಭೀತಿ ಇದೆ. ಆಸ್ತಿ ಮಾರಿ ಬಂದ ಹಣವನ್ನು ಸಾಲಗಾರರು ಮತ್ತು ಷೇರುದಾರರಿಗೆ ಹಂಚಲಾಗುತ್ತದೆ. ಇದರಲ್ಲಿ ಕೊನೆಯ ಸರದಿಯಲ್ಲಿರುವವರು ಷೇರುದಾರರು.
ನವದೆಹಲಿ, ನವೆಂಬರ್ 7: ಜೆಟ್ ಏರ್ವೇಸ್ ಸಮಾಧಿಯಾಗುವುದು ಬಹುತೇಕ ನಿಶ್ಚಿತವಾಗಿದೆ. ಸಂಸ್ಥೆಯ ಆಸ್ತಿಗಳನ್ನು ಮಾರುವಂತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠ ಆದೇಶ ಮಾಡಿದೆ. ಸಂಸ್ಥೆಯನ್ನು ಖರೀದಿಸುವ ಜಲನ್ ಕಲ್ರಾಕ್ ಗುಂಪಿನ (ಜೆಕೆಸಿ) ಪ್ರಯತ್ನ ವಿಫಲವಾಗಿದೆ. ಕಂಪನಿ ಜೀವಂತವಾಗಿ ಉಳಿಯುತ್ತದೆ ಎನ್ನುವ ಆಸೆಯಲ್ಲಿದ್ದ ಷೇರುದಾರರಿಗೆ ಇದ್ದೊಂದು ಆಶಯವೂ ಹೊರಟುಹೋದಂತಾಗಿದೆ. 1.43 ಲಕ್ಷ ರೀಟೇಲ್ ಹೂಡಿಕೆದಾರರು ಎಲ್ಲವನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಜೆಟ್ ಏರ್ವೇಸ್ ಷೇರುಬೆಲೆ ಈಗ
ಜೆಟ್ ಏರ್ವೇಸ್ 2019ರಲ್ಲಿ ನೆಲಕಚ್ಚಿದ ಬಳಿಕ ಹತಾಶೆಗೊಂಡಿದ್ದ ಷೇರುದಾರರಿಗೆ, ಜೆಕೆಸಿ ಕನ್ಸಾರ್ಟಿಯಂ ಖರೀದಿಸಲು ಮುಂದಾದಾಗ ಒಂದಷ್ಟು ಭರವಸೆ ಮೂಡಿತ್ತು. ಅದೇ ಆಸೆಯಲ್ಲಿ ಷೇರುದಾರರಿದ್ದರು. 2022ರಲ್ಲಿ ಅದರ ಷೇರುಬೆಲೆ 63.15 ರೂ ಗರಿಷ್ಠ ಮಟ್ಟಕ್ಕೆ ಹೋಗಿತ್ತು. ಈಗ ಅದು 34 ರೂಗೆ ಇಳಿದಿದೆ. ಈ ವರ್ಷ ನಿತ್ಯವೂ ಸರಾಸರಿಯಾಗಿ 7 ಲಕ್ಷಕ್ಕೂ ಅಧಿಕ ಷೇರುಗಳ ವಹಿವಾಟು ನಡೆದಿತ್ತು. ಆದರೂ ಗಣನೀಯ ಕುಸಿತ ಕಂಡಿಲ್ಲ ಎನ್ನುವುದು ಗಮನಾರ್ಹ.
ಇದನ್ನೂ ಓದಿ: ಜೆಟ್ ಏರ್ವೇಸ್ಗೆ ಅಂತಿಮ ವಿದಾಯ ಹೇಳಿದ ಸುಪ್ರೀಂಕೋರ್ಟ್; ಏರ್ಲೈನ್ಸ್ ಸಂಸ್ಥೆಯ ಸಮಾಪ್ತಿಗೆ ಕೋರ್ಟ್ ಆದೇಶ
ಜೆಟ್ ಏರ್ವೇಸ್ ಷೇರುದಾರರಿಗೆ ಸಿಗೋದು ಸೊನ್ನೆ ಮಾತ್ರವಾ?
ಸಾಮಾನ್ಯವಾಗಿ ಒಂದು ಕಂಪನಿ ದಿವಾಳಿ ಎದ್ದು ಮುಚ್ಚಿದರೆ ಅದರ ಆಸ್ತಿಪಾಸ್ತಿಯನ್ನು ಹರಾಜು ಹಾಕಲಾಗುತ್ತದೆ. ಅದರಿಂದ ಬಂದ ಹಣವನ್ನು ಆ ಕಂಪನಿಯ ಸಾಲಗಾರರಿಗೆ ಮತ್ತು ಷೇರುದಾರರಿಗೆ ಹಂಚಲಾಗುತ್ತದೆ.
ಮೊದಲಿಗೆ ಸಾಲಗಾರರಿಗೆ ಆದ್ಯತೆ ನೀಡಲಾಗುತ್ತದೆ. ಅದರಲ್ಲೂ ಸೆಕ್ಯೂರ್ಡ್ ಕ್ರೆಡಿಟರ್ಸ್ಗೆ ಮೊದಲು ಸಂದಾಯವಾಗುತ್ತದೆ. ಅನ್ಸೆಕ್ಯೂರ್ಡ್ ಕ್ರೆಡಿಟರ್ಸ್ರದ್ದು ನಂತರದ ಸರದಿ. ಆ ಬಳಿಕ ಹಣ ಉಳಿದರೆ ಅದನ್ನು ಷೇರುದಾರರಿಗೆ ಹಂಚಲಾಗುತ್ತದೆ. ಇಲ್ಲಿಯೂ ಕೂಡ ಆದ್ಯತೆಯ ಷೇರುದಾರರಿಗೆ ಮೊದಲ ಆದ್ಯತೆ ಇರುತ್ತದೆ. ಕಾಮನ್ ಷೇರ್ಹೋಲ್ಡರ್ಸ್ರ ಸರದಿ ಕೊನೆಯದ್ದು.
ಇಲ್ಲಿ ಷೇರಿನ ಮಾರುಕಟ್ಟೆ ಮೌಲ್ಯದ ಪ್ರಕಾರ ಷೇರುದಾರರಿಗೆ ಹಣ ಸಿಗುವುದಿಲ್ಲ. ಸಾಲಗಾರರಿಗೆ ಹಣ ಸಂದಾಯವಾಗಿ ಉಳಿದ ಹಣವನ್ನು ವಿತರಿಸಬಹುದು. ಒಂದು ರೂ ಫೇಸ್ವ್ಯಾಲ್ಯೂ, ಅಥವಾ ಮಾರ್ಕೆಟ್ ವ್ಯಾಲ್ಯೂ ಇವ್ಯಾವುದೂ ಲೆಕ್ಕಕ್ಕೆ ಇರುವುದಿಲ್ಲ. ಒಂದು ವೇಳೆ ಷೇರುದಾರರ ಅದೃಷ್ಟವೆಂಬಂತೆ ಸಾಕಷ್ಟು ಹಣ ಮಿಕ್ಕಿದರೆ ಆಗ ಮಾರುಕಟ್ಟೆ ಮೌಲ್ಯದ ಪ್ರಕಾರ ಷೇರುದಾರರಿಗೆ ಹಣ ಸಿಗಬಹುದು.
ಇದನ್ನೂ ಓದಿ: ಎಲ್ಸಿಡ್; ಭಾರತದ ಅತ್ಯಂತ ದುಬಾರಿ ಷೇರು ಈಗ ಮತ್ತಷ್ಟು ದುಬಾರಿ; ಬೆಲೆ 3 ಲಕ್ಷ ರೂಗೂ ಹೆಚ್ಚು; ಏನು ಕಾರಣ?
ಜೆಟ್ ಏರ್ವೇಸ್ ಷೇರುದಾರರು ಬಡಪಾಯಿಗಳು
ಆದರೆ, ಜೆಟ್ ಏರ್ವೇಸ್ ವಿಚಾರದಲ್ಲಿ ಹಾಗಾಗುವ ಸಾಧ್ಯತೆ ಇಲ್ಲವೇ ಇಲ್ಲ. ಅದು ಬರೋಬ್ಬರಿ 7,800 ಕೋಟಿ ರೂನಷ್ಟು ಬೃಹತ್ ಮೊತ್ತದ ಸಾಲ ಬಾಧ್ಯತೆ ಹೊಂದಿದೆ. ಹೀಗಾಗಿ, ಜೆಟ್ ಏರ್ವೇಸ್ನ ಅಲ್ಪಸ್ವಲ್ಪ ಆಸ್ತಿಪಾಸಿ ಮಾರಾಟದಿಂದ ಅಷ್ಟು ದೊಡ್ಡ ಮೊತ್ತ ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಒಂದು ವೇಳೆ, ಸರ್ವೋಚ್ಚ ನ್ಯಾಯಾಲಯವು ತನ್ನ ನಿಲುವು ಬದಲಾಯಿಸಿ ಜೆಕೆಸಿಗೆ ಜೆಟ್ ಏರ್ವೇಸ್ ಮಾಲಕತ್ವ ಸಿಗುವಂತೆ ಮಾಡಿದರೆ ಆಗ ಷೇರುದಾರರು ಒಂದಷ್ಟು ನಿರೀಕ್ಷೆ ಇಟ್ಟುಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ