ಫೆಬ್ರುವರಿ 1, ಭಾನುವಾರ; ಅಂದೇ ಕೇಂದ್ರ ಬಜೆಟ್ ಮಂಡನೆ ಆಗುತ್ತಾ?
Union Budget 2026-27 to be presented on Feb 1st, Sunday: ಬಜೆಟ್ ಮಂಡನೆಯ ದಿನವಾದ ಫೆಬ್ರುವರಿ 1, ಸಮೀಪಿಸುತ್ತಿದೆ. ಅಂದು ವಾರಾಂತ್ಯ, ಅದರಲ್ಲೂ ಭಾನುವಾರವಾದ್ದರಿಂದ ಬೇರೆ ದಿನ ಬಜೆಟ್ ಮಂಡಿಸಬಹುದಾ ಎನ್ನುವ ಪ್ರಶ್ನೆ ಎದ್ದಿದೆ. ಆದರೆ, ಭಾನುವಾರವಾಗಲೀ, ಯಾವುದೇ ದಿನವಾಗಲೀ ಬಜೆಟ್ ಮಂಡನೆಯ ದಿನ ಬದಲಾಗುವುದಿಲ್ಲ ಎಂದು ಮೂಲಗಳು ಹೇಳುತ್ತಿವೆ. ಫೆಬ್ರುವರಿ 1, ಭಾನುವಾರದಂದೇ 2026-27ರ ಬಜೆಟ್ ಮಂಡನೆ ಆಗಲಿದೆ.

ನವದೆಹಲಿ, ಜನವರಿ 2: ಕೇಂದ್ರ ಬಜೆಟ್ (Union Budget) ಮಂಡನೆಯ ದಿನ ಸಮೀಪಿಸುತ್ತಿದೆ. ಕೆಲ ವರ್ಷಗಳಿಂದ ಫೆಬ್ರುವರಿ 1ರಂದು ಬಜೆಟ್ ಮಂಡಿಸುವ ಪರಿಪಾಟ ಬೆಳೆದಿದೆ. ಈ ಬಾರಿ ಫೆಬ್ರುವರಿ 1 ಭಾನುವಾರ ಇದೆ. ಹೀಗಾಗಿ, ಬಜೆಟ್ ಮಂಡನೆಯ ದಿನವನ್ನು ಒಂದು ದಿನ ಮುಂದೂಡುವುದೋ ಅಥವಾ ಹಿಂದೂಡುವುದೋ ಆಗಬಹುದಾ ಎನ್ನುವ ಪ್ರಶ್ನೆ ಇದೆ. ಆದರೆ, ವರದಿ ಪ್ರಕಾರ, ಫೆಬ್ರುವರಿ 1ರಂದೇ ಬಜೆಟ್ ಮಂಡನೆ ಆಗುವ ಸಾಧ್ಯತೆ ಹೆಚ್ಚು.
ನಿರ್ಮಲಾ ಸೀತಾರಾಮನ್ ಅವರಿಗೆ ಇದು 9ನೇ ಬಜೆಟ್
ಫೆಬ್ರುವರಿ 1ರಂದು ಮಂಡನೆ ಆಗಲಿರುವುದು 2026-27ರ ಸಾಲಿನ ಬಜೆಟ್. ಇದು ಸ್ವತಂತ್ರ ಭಾರತದ 80ನೇ ವಾರ್ಷಿಕ ಬಜೆಟ್ ಕೂಡ ಹೌದು. ನಿರ್ಮಲಾ ಸೀತಾರಾಮನ್ ಅವರಿಗೆ ಇದು 9ನೇ ಬಜೆಟ್ ಮಂಡನೆ. ಅದೂ ಸತತವಾದ ಬಜೆಟ್. ಸತತ ಎಂಟು ಬಜೆಟ್ ಮಂಡಿಸಿ ಬರೆದ ದಾಖಲೆಯನ್ನು ತಾವೇ ಅಳಿಸಿಹಾಕಲಿದ್ದಾರೆ. 2019ರಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ನಿಧನರಾದ ಬಳಿಕ ಆ ಸ್ಥಾನವನ್ನು ನಿರ್ಮಲಾ ಅವರು ಸತತವಾಗಿ ನಿಭಾಯಿಸಿದ್ದಾರೆ. ಪ್ರಧಾನಿ ಮೋದಿ ಅವರ ವಿಶ್ವಾಸ ಉಳಿಸಿಕೊಂಡು ಬರಲು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಡೆಡ್ಲೈನ್ ಮುಗೀತು? ಮತ್ತೆ ಲಿಂಕ್ ಮಾಡಬಹುದಾ? ಮುಂದೇನಾಗಬಹುದು?
ಮೊರಾರ್ಜಿ ದೇಸಾಯಿ 10 ಬಜೆಟ್ ಮಂಡನೆ
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಅತಿಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಅವರು 1959ರಿಂದ 1963ರವರೆಗೆ, ಹಾಗೂ 1967ರಿಂದ 1969ರವರೆಗೆ ಒಟ್ಟು ಹತ್ತು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಪಿ ಚಿದಂಬರಂ 9 ಬಜೆಟ್ ಮಂಡಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಮುಂಬರುವ ಬಜೆಟ್ ಮಂಡಿಸಿದರೆ ಚಿದಂಬರಂ ಸಾಧನೆ ಸರಿಗಟ್ಟಲಿದ್ದಾರೆ. ಆದರೆ, ಮೊರಾರ್ಜಿ, ಪಿ ಚಿದಂಬರಂ ಸೇರಿ ಯಾರೂ ಕೂಡ ಸತತ ಎಂಟು ಬಾರಿ ಬಜೆಟ್ ಮಂಡಿಸಿದ್ದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Fri, 2 January 26




