Health Insurance: ಕೆಲಸ ತ್ಯಜಿಸುತ್ತಿದ್ದೀರಾ? ಕಂಪನಿ ಮಾಡಿಸಿದ ಆರೋಗ್ಯ ವಿಮೆ ಉಳಿಸಿಕೊಳ್ಳುವುದು ಹೇಗೆಂದು ತಿಳಿದುಕೊಳ್ಳಿ
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್ಡಿಎಐ) 2016ರ ಆರೋಗ್ಯ ವಿಮೆ ನಿಯಮಗಳಲ್ಲಿ ಕಂಪನಿಯ ಆರೋಗ್ಯ ವಿಮೆ ಪಾಲಿಸಿಯನ್ನು ವೈಯಕ್ತಿಕ ಅಥವಾ ಕುಟುಂಬದ ವಿಮೆಯಾಗಿ ಪರಿವರ್ತಿಸಿಕೊಳ್ಳಲು ಅವಕಾಶ ನೀಡಿದೆ.
ವೈಯಕ್ತಿಕ ಆರೋಗ್ಯ ವಿಮೆ (Health Insurance) ಇಲ್ಲದೇ ಇರುವಂಥ ಸಂದರ್ಭದಲ್ಲಿ ಕೆಲಸ ಬಿಡುವುದು ಅಥವಾ ಉದ್ಯೋಗ ಕಳೆದುಕೊಳ್ಳುವ ಸಂದರ್ಭ ಬಂದರೆ ಮುಂದೆ ಸಮಸ್ಯೆ ಎದುರಾಗಬಹುದು. ಯಾಕೆಂದರೆ ಕೆಲಸ ಮಾಡುತ್ತಿರುವ ಸಂಸ್ಥೆಯನ್ನು ತೊರೆದ ನಂತರ ಅಲ್ಲಿ ಮಾಡಿಸಿಕೊಂಡಿರುವ ಆರೋಗ್ಯ ವಿಮೆ ಪ್ರಯೋಜನಕ್ಕೆ ಬರುವುದಿಲ್ಲ. ಕೇವಲ ಕಂಪನಿ ಮಾಡಿಸಿಕೊಟ್ಟಿರುವ ಆರೋಗ್ಯ ವಿಮೆಯನ್ನೇ ನೆಚ್ಚಿಕೊಂಡಿರುವುದು ಒಳ್ಳೆಯದಲ್ಲ. ಉದ್ಯೋಗದಿಂದ ವಜಾಗೊಂಡ, ಕೆಲಸ ತ್ಯಜಿಸಬೇಕಾದ ಅನಿವಾರ್ಯತೆಯ ಸಂದರ್ಭಗಳಲ್ಲಿ ಹೊಸದಾಗಿ ಆರೋಗ್ಯ ವಿಮೆ ಮಾಡಿಸಿದರೆ ಮತ್ತೆ ಷರತ್ತು ಮತ್ತು ನಿಬಂಧನೆಗಳು, ಕಾಯುವಿಕೆ ಅವಧಿ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ, ಕೆಲಸ ತ್ಯಜಿಸುವ ಹಂತದಲ್ಲಿ ಕಂಪನಿ ಮಾಡಿಸಿಕೊಟ್ಟಿರುವ ಆರೋಗ್ಯ ವಿಮೆಯನ್ನೇ ವೈಯಕ್ತಿಕ ಆರೋಗ್ಯ ವಿಮೆಯನ್ನಾಗಿ ಪರಿವರ್ತಿಸಿಕೊಳ್ಳುವ ಅವಕಾಶವಿದೆ. ಈ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲದಿರುವುದರಿಂದ ಇಲ್ಲಿ ಮಾಹಿತಿ ನೀಡಲಾಗಿದೆ.
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್ಡಿಎಐ) 2016ರ ಆರೋಗ್ಯ ವಿಮೆ ನಿಯಮಗಳಲ್ಲಿ ಕಂಪನಿಯ ಆರೋಗ್ಯ ವಿಮೆ ಪಾಲಿಸಿಯನ್ನು ವೈಯಕ್ತಿಕ ಅಥವಾ ಕುಟುಂಬದ ವಿಮೆಯಾಗಿ ಪರಿವರ್ತಿಸಿಕೊಳ್ಳಲು ಅವಕಾಶ ನೀಡಿದೆ.
ಪ್ರಯೋಜನವೇನು?
ಉದ್ಯೋಗದಾತ ಕಂಪನಿ ಮಾಡಿಸಿಕೊಟ್ಟಿದ್ದ ಆರೋಗ್ಯ ವಿಮೆಯನ್ನು ಕೆಲಸ ಬಿಟ್ಟ ನಂತರ ಕುಟುಂಬದ ವಿಮೆಯನ್ನಾಗಿ ಪರಿವರ್ತಿಸಿಕೊಳ್ಳುವುದರಿಂದ ವಿಮೆಯ ಆರಂಭದ ದಿನ ಹಾಗೆಯೇ ಉಳಿದುಕೊಳ್ಳಲಿದೆ. ಕಾಯುವಿಕೆ ಅವಧಿಯೂ (Waiting Period) ಇರುವುದಿಲ್ಲ. ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ (ಹರ್ನಿಯಾ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳು) ಹೊಸದಾಗಿ ವಿಮೆ ಮಾಡಿಸಿದಾಗ ಕಾಯುವಿಕೆ ಅವಧಿ ಇರುತ್ತದೆ. ಉದ್ಯೋಗ ಬಿಟ್ಟ ನಂತರ ಹೊಸದಾಗಿ ಆರೋಗ್ಯ ವಿಮೆ ಮಾಡಿಸಿಕೊಂಡರೆ ಇಂಥ ಆರೋಗ್ಯ ಸಮಸ್ಯೆಗಳಿಗೆ ಪಾಲಿಸಿಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಸ್ತಿತ್ವದಲ್ಲಿರುವ ಪಾಲಿಸಿಯನ್ನೇ ವೈಯಕ್ತಿಕ ಆರೋಗ್ಯ ವಿಮೆಯಾಗಿ ಪರಿವರ್ತಿಸಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.
ಗ್ರೂಪ್ ಇನ್ಶೂರೆನ್ಸ್ ಎಂದರೇನು?
ಗ್ರೂಪ್ ಇನ್ಶೂರೆನ್ಸ್ ಎಂದರೆ ಒಂದು ತಂಡಕ್ಕೆ ಅಥವಾ ಒಂದು ಕಂಪನಿಯ ಉದ್ಯೋಗಳಿಗೆ ಒಟ್ಟಾಗಿ ಮಾಡಿಸುವ ವಿಮೆ. ಇಲ್ಲಿ ಮಾಸ್ಟರ್ ಪಾಲಿಸಿಯನ್ನು ಉದ್ಯೋಗದಾತನಿಗೆ ನೀಡಲಾಗುತ್ತದೆ. ಎಲ್ಲ ಉದ್ಯೋಗಿಗಳು ಪಾಲಿಸಿಯ ಭಾಗವಾಗಿರುತ್ತಾರೆ. ಪ್ರತಿಯೊಬ್ಬ ಉಸ್ಯೋಗಿಗೂ ಆರೋಗ್ಯ ಕಾರ್ಡ್ ನೀಡಲಾಗುತ್ತದೆ. ಅದರ ಮೂಲಕ ಅವರು ವಿಮೆ ಕ್ಲೇಮ್ ಮಾಡಿಕೊಳ್ಳಬೇಕಾಗುತ್ತದೆ. ಕುಟುಬದ ಸದಸ್ಯರನ್ನು ವಿಮೆಯಲ್ಲಿ ಸೇರಿಸಿಕೊಳ್ಳಲೂ ಅವಕಾಶ ಇರುತ್ತದೆ. ಹೀಗಾಗಿ ಕಂಪನಿ ಅಥವಾ ಉದ್ಯೋಗ ಬಿಟ್ಟಾಗ ಈ ಪಾಲಿಸಿ ಪ್ರಯೋಜನಕ್ಕೆ ಬರುವುದಿಲ್ಲ.
ಇದನ್ನೂ ಓದಿ: ಆರೋಗ್ಯ ವಿಮೆ ಪೋರ್ಟ್ ಮಾಡುವುದು ಹೇಗೆ, ಪ್ರಯೋಜನವೇನು? ಇಲ್ಲಿದೆ ವಿವರ
ಆರೋಗ್ಯ ವಿಮೆ ವರ್ಗಾವಣೆ ಹೇಗೆ?
ಕಂಪನಿ ಆರೋಗ್ಯ ವಿಮೆ ಮಾಡಿಸಿಕೊಟ್ಟಿರುವ ಅದೇ ವಿಮಾ ಕಂಪನಿಯ ಮೂಲಕವೇ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಿದೆ. ಆರೋಗ್ಯ ವಿಮೆ ವರ್ಗಾವಣೆ ಮಾಡಿಸಿಕೊಳ್ಳಲು ವಿಮಾ ಕಂಪನಿಗೆ ಅರ್ಜಿ ಸಲ್ಲಿಸಬೇಕು. ಕಂಪನಿಯಲ್ಲಿ ಕೊನೆಯ ಕೆಲಸದ ದಿನಕ್ಕಿಂತ 45 ದಿನಗಳ ಮುಂಚಿತವಾಗಿ ವಿಮೆ ವರ್ಗಾಯಿಸಿಕೊಡುವಂತೆ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ನೀವು ಪ್ರಕ್ರಿಯೆ ಆರಂಭಿಸದಿದ್ದಲ್ಲಿ ಕೊನೆಯ ಕೆಲಸದ ದಿನದ ನಂತರ ಹೆಚ್ಚುವರಿಯಾಗಿ ಐದು ದಿನಗಳ ಕಾಲ ಅವಕಾಶ ಸಿಗುತ್ತದೆ.
ಕಂಪನಿ ಮಾಡಿಸಿಕೊಟ್ಟಿರುವ ವಿಮಾ ಮೊತ್ತಕ್ಕಿಂತಲೂ ಹೆಚ್ಚು ಮೊತ್ತದ ವಿಮೆ ಆಯ್ಕೆ ಮಾಡಿಕೊಳ್ಳಲೂ ವರ್ಗಾವಣೆ ವೇಳೆ ಅವಕಾಶ ದೊರೆಯುತ್ತದೆ. ಇದಕ್ಕಾಗಿ ಹೆಚ್ಚು ಪ್ರೀಮಿಯಂ ಪಾವತಿಸಬೇಕಾಗಬಹುದು. ಅದೇ ರೀತಿ ಹೆಚ್ಚು ಮಾಹಿತಿಯನ್ನೂ ನೀಡಬೇಕಾಗಬಹುದು.