Women’s Day: ಮಹಿಳೆಯರ ಸಬಲೀಕರಣಕ್ಕೆ ಸ್ವಾಧಾರ್, ಹಾಸ್ಟೆಲ್, ಉಜ್ವಲ ಇತ್ಯಾದಿ ಸರ್ಕಾರಿ ಯೋಜನೆಗಳು
Govt Schemes For Women Empowerment: ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಹಲವು ಯೋಜನೆಗಳ ಮೂಲಕ ಪ್ರಯತ್ನ ನಡೆಸುತ್ತಿದೆ. ಹೆಣ್ಮಕ್ಕಳ ಅಭ್ಯುದಯಕ್ಕಾಗಿ ಸರ್ಕಾರ ರೂಪಿಸಿರುವ ಕೆಲ ಪ್ರಮುಖ ಯೋಜನೆಗಳಲ್ಲಿ ಉಜ್ವಲ, ಸ್ವಾಧಾರ್ ಗೃಹ್ ಮೊದಲಾದ ಸ್ಕೀಮ್ಗಳಿವೆ. ಉದ್ಯೋಗಸ್ಥ ಮಹಿಳೆಯರು ಅಪರಿಚಿತ ಊರಿನಲ್ಲಿ ಅಸುರಕ್ಷಿತ ಪರಿಸರಕ್ಕೆ ಸಿಲುಕುವುದನ್ನು ತಪ್ಪಿಸಲು ಸರ್ಕಾರವು ಹಾಸ್ಟೆಲ್ ಸ್ಕೀಮ್ ನಡೆಸುತ್ತದೆ. ಇಂಥ ಮಹಿಳೆಯರಿಗೆ ಉಳಿದುಕೊಳ್ಳಲು ವಸತಿ, ಅವರ ಮಕ್ಕಳ ಆರೈಕೆಗೆ ಡೇಕೇರ್ ಸೆಂಟರ್ ಸೌಲಭ್ಯ ನೀಡಲಾಗುತ್ತದೆ.
ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳೆಯರ ದಿನ (International Women’s Day) ಇದೆ. ವಿಶ್ವದ ಅರ್ಧದಷ್ಟು ಜನಸಂಖ್ಯೆ ಮಹಿಳೆಯರದ್ದು. ಪುರುಷರಿಗೆ ಸರಿಸಮಾನ ಸಂಖ್ಯೆಯಲ್ಲಿರುವ ಮಹಿಳೆಯರು ಕಾರಣಾಂತರಗಳಿಂದ ತಲೆ ತಲಾಂತರಗಳಿಂದ ನಿರ್ದಿಷ್ಟ ಪಾತ್ರಗಳಿಗೆ ಸೀಮಿತವಾಗಿದ್ದಾರೆ. ಹೀಗಾಗಿ, ಇವತ್ತಿನ ಕಾಲಘಟ್ಟದ ಅಗತ್ಯತೆಗಳಿಗೆ ತಕ್ಕಂತೆ ಮಹಿಳಾ ಸಂಪನ್ಮೂಲದ ಕೊರತೆ ಇದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಮಹಿಳೆಯರು ಇನ್ನೂ ಹಿಂದುಳಿದಿರುವುದು ಹೌದು. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡ ಮಹಿಳೆಯರ ಸಬಲೀಕರಣಕ್ಕೆ ಹಲವು ಯೋಜನೆಗಳನ್ನು ನಡೆಸುತ್ತಿದೆ. ಇದರಲ್ಲಿ ಕೆಲ ಯೋಜನೆಗಳ ವಿವರ ಇಲ್ಲಿದೆ:
ಸ್ವಾಧಾರ್ ಗೃಹ ಯೋಜನೆ
ವಿವಿಧ ಅಪರಾಧ ಕೃತ್ಯಗಳಲ್ಲಿ ಬಾಧಿತರಾದ ಸಂತ್ರಸ್ತ ಮಹಿಳೆಯರಿಗೆ ಪುನಶ್ಚೇತನ ಸೇರಿದಂತೆ ಗೌರವಯುತ ಜೀವನ ನಡೆಸಲು ಬೇಕಾದ ಸಹಾಯವನ್ನು ಸ್ವಾಧಾರ್ ಗೃಹ ಯೋಜನೆ ಒದಗಿಸುತ್ತದೆ.
ಉಜ್ವಲ ಯೋಜನೆ
ಲೈಂಗಿಕ ಕಾರ್ಯಕರ್ತೆಯರ ರಕ್ಷಣೆ ಮತ್ತು ಪುನಶ್ಚೇತನಕ್ಕೆಂದು ಉಜ್ವಲ ಯೋಜನೆ ಇದೆ.
ಕಾರ್ಯನಿರತ ಮಹಿಳೆಯರ ಹಾಸ್ಟೆಲ್
ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷಿತ ವಸತಿ ಕಲ್ಪಿಸಲು ಸರ್ಕಾರದ ಈ ಯೋಜನೆ ಇದೆ. ಇದರಲ್ಲಿ ವಸತಿ ಮಾತ್ರವಲ್ಲ, ಮಹಿಳೆಯ ಮಕ್ಕಳಿಗೆ ಡೇಕೇರ್ ಸೌಲಭ್ಯ ಕೂಡ ಒದಗಿಸಲಾಗುತ್ತದೆ.
ಇದನ್ನೂ ಓದಿ: ಪಿಸಿಓಎಸ್ ನಿಯಂತ್ರಣಕ್ಕೆ ಮಹಿಳೆಯರು ಬಳಸಬಹುದಾದ 5 ಗಿಡಮೂಲಿಕೆಗಳಿವು
ಸಖಿ ಕೇಂದ್ರ ಮತ್ತು ಮಹಿಳಾ ಸಹಾಯವಾಣಿ
ನಿರ್ಭಯಾ ನಿಧಿ ಅಡಿಯಲ್ಲಿ ಸಖಿ ಕೇಂದ್ರ ಮತ್ತು ಮಹಿಳಾ ಸಹಾಯವಾಣಿ ಯೋಜನೆಗಳನ್ನು ನಡೆಸಲಾಗುತ್ತಿದೆ. ಕೌಟುಂಬಿಕ ಹಿಂಸಾಚಾರ ಅಥವಾ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಕಾನೂನಿನ ನೆರವು ಸೇರಿದಂತೆ ಎಲ್ಲಾ ರೀತಿಯ ಸಹಾಯ ಒದಗಿಸುತ್ತವೆ ಸಖಿ ಕೇಂದ್ರಗಳು. ಹಾಗೆಯೇ, ಮಹಿಳಾ ಸಹಾಯವಾಣಿ 181 ಕೂಡ ಸೇವೆಯಲ್ಲಿದೆ. ಯಾವುದೇ ಕಷ್ಟಕ್ಕೊಳಗಾದ ಮಹಿಳೆಯರು ಈ ಸಹಾಯವಾಣಿಯ ನೆರವು ಪಡೆಯಬಹುದು.
ಬೇಟಿ ಬಚಾವೊ ಬೇಟಿ ಪಡಾವೊ
ಹೆಣ್ಣು ಭ್ರೂಣ ಹತ್ಯೆ ತಡೆಯಲು, ಮಹಿಳೆಯರ ವಿರುದ್ಧ ತಾರತಮ್ಯ ತೊಡೆದುಹಾಕಲು ಮತ್ತು ಅವರನ್ನು ಸುಶಿಕ್ಷಿತರನ್ನಾಗಿ ಮಾಡಿ ದೇಶದ ಬೆಳವಣಿಗೆಯತ್ತ ಕೊಡುಗೆ ನೀಡುವಂತಾಗಲು ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆ ಸಹಾಯವಾಗಿ ಇದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಯಾವಾಗ?; ಇದು ಶುರುವಾಗಿದ್ದು ಹೇಗೆ?
ಮಹಿಳಾ ಶಕ್ತಿ ಕೇಂದ್ರ
ಗ್ರಾಮೀಣ ಮಹಿಳೆಯರನ್ನು ಸಬಲೀಕರಿಸಲು ಮಹಿಳಾ ಶಕ್ತಿ ಕೇಂದ್ರ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗೆ ಇರುವ ವಿವಿಧ ವಲಯದ ಯೋಜನೆಗಳನ್ನು ಒಂದೇ ಕಡೆ ಲಭ್ಯ ಇರುವಂತಾಗಿಸುತ್ತದೆ ಈ ಸ್ಕೀಮ್.
ಪಿಎಂ ಮಾತೃ ವಂದನಾ ಯೋಜನೆ
ರಾಷ್ಟ್ರೀಯ ಮಾತೃತ್ವ ಹಿತದೃಷ್ಟಿ ಯೋಜನೆ ಅಥವಾ ಪಿಎಂ ಮಾತೃ ವಂದನಾ ಯೋಜನೆ ಎಲ್ಲಾ ಗರ್ಭಿಣಿ ಮತ್ತು ಬಾಣಂತಿಯರಿಗೆ ಸರ್ಕಾರದಿಂದ ಧನ ಸಹಾಯ ಕೊಡುವ ಸ್ಕೀಮ್ ಆಗಿದೆ. ಇವರಿಗೆ ಮೂರು ಕಂತುಗಳಲ್ಲಿ 6,000 ರೂ ಹಣ ನೀಡಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಮಹಿಳಾ ದಿನದ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ