ನೀತಿ ಮುಂದುವರಿಕೆಯ ಹಠ ಇರಲ್ಲ: ಹೊಸ ಹಾದಿ ಸವೆಸುವ ಮುನ್ಸೂಚನೆ ನೀಡಿದ ಹೊಸ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ
RBI governor Sanjay Malhotra first press conference: ಆರ್ಬಿಐನ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅವರು ಚೊಚ್ಚಲ ಸುದ್ದಿಗೋಷ್ಠಿ ಉದ್ದೇಶಿಸಿ ಇಂದು ಮಾತನಾಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಲ್ಲಿಟ್ಟುಕೊಂಡು ಪ್ರತಿಯೊಂದು ನಿರ್ಧಾರಗಳನ್ನು ಆರ್ಬಿಐ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ನೀತಿಯಲ್ಲಿ ಸ್ಥಿರತೆ ಮತ್ತು ಮುಂದುವರಿಕೆ ಮುಖ್ಯವಾದರೂ ಅದೇ ರೀತಿ ಇರಬೇಕೆಂಬ ಹಠ ಇರುವುದಿಲ್ಲ ಎಂದ ಅವರು, ನೀತಿ ಬದಲಾವಣೆ ಸುಳಿವು ನೀಡಿದ್ದಾರೆ.
ನವದೆಹಲಿ, ಡಿಸೆಂಬರ್ 11: ಆರ್ಬಿಐ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಆದ್ಯತೆಯಾಗಿರುತ್ತದೆ ಎಂದು ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಇಂದು ಆರ್ಬಿಐನ 26ನೇ ಗವರ್ನರ್ ಆಗಿ ಪದಗ್ರಹಣ ಮಾಡಿದ ಬಳಿಕ ಮೊದಲ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡುತ್ತಿದ್ದರು. ಆರ್ಬಿಐನ ನೀತಿಗಳಲ್ಲಿ ಸ್ಥಿರತೆ ಮತ್ತು ಮುಂದುವರಿಕೆಗೆ ಬದ್ಧವಾಗಿರುವುದು ಮುಖ್ಯ. ಆದರೆ, ಜಾಗತಿಕ ಆರ್ಥಿಕತೆ ಮತ್ತು ರಾಜಕೀಯ ವಾತಾವರಣಗಳಿಂದಾಗಿ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಜಾಗರೂಕರಾಗಿರುವ ಅವಶ್ಯಕತೆ ಇರುತ್ತದೆ ಎಂದಿದ್ದಾರೆ.
‘ನೀತಿಯಲ್ಲಿ ಸ್ಥಿರತೆ ಮತ್ತು ಮುಂದುವರಿಕೆ ಇರುತ್ತದಾದರೂ ಅವುಗಳಿಗೇ ಬದ್ಧವಾಗಿರಲು ಸಾಧ್ಯವಿಲ್ಲ. ಸವಾಲುಗಳನ್ನು ಎದುರಿಸಲು ನಾವು ಜಾಗರೂಕರಾಗಿರಬೇಕು ಮತ್ತು ಚುರುಕಾಗಿರಬೇಕು,’ ಎಂದು ಆರ್ಬಿಐ ಗವರ್ನರ್ ಆಗಿ ತಮ್ಮ ಚೊಚ್ಚಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಮೂಲಕ ಅವರು ಆರ್ಬಿಐನ ಕೆಲ ನೀತಿಗಳಲ್ಲಿ ಸಡಿಲಿಕೆ ಅಥವಾ ಬದಲಾವಣೆಗಳಾಗಬಹುದಾದ ಸಾಧ್ಯತೆ ಹೆಚ್ಚಿರುವುದನ್ನು ಪರೋಕ್ಷವಾಗಿ ಅಭಿವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇವತ್ತು ಆರ್ಬಿಐ ಹೊಸ ಗವರ್ನರ್ ಸಂಜಯ್ ಮಲ್ಹೋತ್ರಾ ಪದಗ್ರಹಣ; ಮುಂದಿನ ಎಂಪಿಸಿಯಿಂದ ಬಡ್ಡಿದರ ಇಳಿಸುವ ನಿರೀಕ್ಷೆ
ಎಲ್ಲಾ ಜ್ಞಾನಗಳ ಅಧಿಪತ್ಯ ನಮಗಿಲ್ಲ. ಸಂಬಂಧಿಸಿದವರ ಜೊತೆ ಸಮಾಲೋಚನೆ ನಡೆಸುವುದು ಮುಖ್ಯ. ಹಣಕಾಸು ನಿಯಂತ್ರಕರು, ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ ಮೊದಲಾದವರುಗಳೊಂದಿಗೆ ಸಮಾಲೋಚನೆ ನಡೆಸುವ ಸಂಪ್ರದಾಯವನ್ನು ತಪ್ಪದೇ ಮುಂದುವರಿಸುತ್ತೇವೆ ಎಂದು ಹೇಳಿದ ಆರ್ಬಿಐನ ನೂತನ ಗವರ್ನರ್, ತಮಗೆ ಸಿಕ್ಕಿರುವ ಹುದ್ದೆ ಬಹು ದೊಡ್ಡ ಜವಾಬ್ದಾರಿ ಎಂಬ ಸಂಗತಿಯನ್ನು ತಿಳಿಸಿದ್ದಾರೆ.
ಸಂಜಯ್ ಮಲ್ಹೋತ್ರಾ ಅವರು ಆರ್ಬಿಐ ಗವರ್ನರ್ ಆಗಿ ನೇಮವಾಗಿರುವ ಈ ಕಾಲಘಟ್ಟ ಬಹಳ ಮುಖ್ಯ ಎನಿಸಿದೆ. ಆರ್ಥಿಕತೆಯಲ್ಲಿ ಎಲ್ಲವೂ ಸರಿ ಇದೆ ಎನ್ನುವ ಹೊತ್ತಲ್ಲಿ ಅಸ್ವಾಭಾವಿಕವಾಗಿ ಬೆಳವಣಿಗೆ ವೇಗ ಮಂದಗೊಳ್ಳುತ್ತಿದೆ. ಹಣದುಬ್ಬರ ಎಷ್ಟೇ ಪ್ರಯತ್ನಿಸಿದರೂ ನಿರೀಕ್ಷಿತ ಮಟ್ಟಕ್ಕೆ ನಿಯಂತ್ರಣಕ್ಕೆ ಸಿಗುತ್ತಿಲ್ಲ.
ಇದನ್ನೂ ಓದಿ: MSSC scheme: ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್; ಠೇವಣಿ ಮೊತ್ತ, ಅವಧಿ, ಬಡ್ಡಿ ಇತ್ಯಾದಿ ವಿವರ
ಹಿಂದಿನ ಆರ್ಬಿಐ ಗವರ್ನರ್ ಶಕ್ತಿಕಾಂತದಾಸ್ ಅವರು ರುಪಾಯಿ ಕರೆನ್ಸಿ ಮೌಲ್ಯ ಕುಸಿಯುವ ಭೀತಿಯಲ್ಲಿ ರಿಪೋ ದರ ಕಡಿಮೆ ಮಾಡಲು ಹಿಂದೇಟು ಹಾಕಿದ್ದರು. ಆದರೆ, ಜಿಡಿಪಿ ಬೆಳವಣಿಗೆ ಕುಂಠಿತಗೊಳ್ಳುತ್ತಿವುದರಿಂದ ಹೊಸ ಆರ್ಬಿಐ ಗವರ್ನರ್ ಅವರು ಬಡ್ಡಿದರ ಇಳಿಸುವ ರಿಸ್ಕ್ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಫೆಬ್ರುವರಿ ಮೊದಲ ವಾರದಲ್ಲಿ ಆರ್ಬಿಐನ ಮುಂದಿನ ಎಂಪಿಸಿ ಸಭೆ ನಡೆಯಲಿದ್ದು ಅಲ್ಲಿ ರಿಪೋ ದರ ಇತ್ಯಾದಿ ವಿಚಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ