ಬೆಂಗಳೂರು, ಮುಂಬೈನಲ್ಲಿ ರಾಜೇಶ್ ಎಕ್ಸ್ಪೋರ್ಟ್ಸ್ ಕಚೇರಿಗಳ ಮೇಲೆ ಇಡಿ ದಾಳಿ; ಮಹತ್ವದ ಸಾಕ್ಷ್ಯಗಳು ವಶಕ್ಕೆ
ED raids Bangalore and Mumbai offices of Rajesh Exports Ltd: ಹಲವು ಹಣಕಾಸು ಅಕ್ರಮಗಳ ಸುಳಿಗೆ ಸಿಲುಕಿರುವ ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಬೆಂಗಳೂರು ಹಾಗೂ ಮುಂಬೈನಲ್ಲಿರುವ ಆರ್ಇಎಲ್ ಕಚೇರಿಗಳ ಮೇಲೆ ಈ ರೇಡ್ ನಡೆದಿದೆ. ರಾಜೇಶ್ ಎಕ್ಸ್ಪೋರ್ಟ್ಸ್ ಸಂಸ್ಥೆ ವಿಶ್ವದ ಅತಿದೊಡ್ಡ ಒಡವೆ ರಫ್ತು ಕಂಪನಿ ಎನಿಸಿದೆ.

ಮುಖ್ಯಾಂಶಗಳು
- ಅಕ್ರಮಗಳ ಸುಳಿಗೆ ಸಿಲುಕಿರುವ ರಾಜೇಶ್ ಎಕ್ಸ್‌ಪೋರ್ಟ್ಸ್ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ.
- ಬೆಂಗಳೂರು ಹಾಗೂ ಮುಂಬೈನಲ್ಲಿರುವ ಆರ್ಇಎಲ್ ಕಚೇರಿಗಳ ಮೇಲೆ ಈ ರೇಡ್ ನಡೆದಿದೆ.
- ರಾಜೇಶ್ ಎಕ್ಸ್ಪೋರ್ಟ್ಸ್ ಸಂಸ್ಥೆ ವಿಶ್ವದ ಅತಿದೊಡ್ಡ ಒಡವೆ ರಫ್ತು ಕಂಪನಿ ಎನಿಸಿದೆ.
ಬೆಂಗಳೂರು, ಜೂನ್ 24: ಜಾರಿ ನಿರ್ದೇಶನಾಲಯವು (ED) ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮುಂಬೈನಲ್ಲಿರುವ ರಾಜೇಶ್ ಎಕ್ಸ್‌ಪೋರ್ಟ್ಸ್‌ನ (REL- Rajesh Exports Ltd) ಒಟ್ಟು 9 ಕಚೇರಿಗಳ ಮೇಲೆ ದಾಳಿ ನಡೆಸಿದೆ. ಆಭರಣಗಳನ್ನು ರಫ್ತು ಮಾಡುವ ಸಂಸ್ಥೆಯಾದ ರಾಜೇಶ್ ಎಕ್ಸ್ಪೋರ್ಟ್ಸ್ ಕೆಲ ಅಕ್ರಮಗಳನ್ನು ಎಸಗಿರುವುದು ತನಿಖೆಗಳಿಂದ ಬೆಳಕಿಗೆ ಬಂದಿದೆ. ವಿದೇಶದ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಕಂಪನಿ ವಿಫಲವಾಗಿದೆ.
ರಾಜೇಶ್ ಎಕ್ಸ್ಪೋರ್ಟ್ಸ್ ವಿಚಾರದಲ್ಲಿ ಇಡಿ ಪತ್ತೆಹಚ್ಚಿರುವ ಪ್ರಮುಖ ಅಕ್ರಮಗಳು
- ದಾಖಲೆಗಳ ಕೊರತೆ: ಕಂಪನಿಯು ತನ್ನ ವಿದೇಶಿ ವ್ಯವಹಾರಗಳಾದ ಆಮದು, ರಫ್ತು, ವಿದೇಶಿ ಹೂಡಿಕೆಗಳು ಮತ್ತು ವಹಿವಾಟುಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಒದಗಿಸಲು ವಿಫಲವಾಗಿದೆ.
- ಆಫ್ರಿಕನ್ ಗಣಿಗಳಲ್ಲಿ ಹೂಡಿಕೆ: ಆಫ್ರಿಕನ್ ಗಣಿಗಳಲ್ಲಿ 1,035 ಕೋಟಿ ರೂಪಾಯಿ ಹೂಡಿಕೆ ಮಾಡಿರುವುದಾಗಿ ಹೇಳಿಕೊಂಡಿದ್ದರೂ, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯವಿಲ್ಲ.
- ಸಂದೇಹದಾಯಕ ವ್ಯವಹಾರಗಳು: ಯುಎಇ (UAE) ಮತ್ತು ಇತರ ದೇಶಗಳಲ್ಲಿನ ಕೆಲವು ಅನುಮಾನಾಸ್ಪದ ಸಂಸ್ಥೆಗಳೊಂದಿಗೆ ಸುಮಾರು 3,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಹಿವಾಟುಗಳನ್ನು ಕಂಪನಿಯು ನಡೆಸಿದೆ.
- ಸ್ಟಾಕ್ ವ್ಯತ್ಯಾಸ: ಕಂಪನಿಯ ಫ್ಯಾಕ್ಟರಿ ರಿಜಿಸ್ಟರ್‌ನಲ್ಲಿ ದಾಖಲಾಗಿರುವ ಸ್ಟಾಕ್ ಮತ್ತು ವಾಸ್ತವವಾಗಿ ದಾಳಿಯ ವೇಳೆ ಪತ್ತೆಯಾದ ಸ್ಟಾಕ್ ನಡುವೆ ಸುಮಾರು 40% ವ್ಯತ್ಯಾಸವಿದೆ.
ಇದನ್ನೂ ಓದಿ: ಷೇರುಬಜಾರು ಕಂಬ್ಯಾಕ್; ನಿನ್ನೆ ಕುಸಿದಿದ್ದ ಮಾರುಕಟ್ಟೆ ಇವತ್ತು ಚೇತರಿಸಿಕೊಳ್ಳಲು ಏನು ಕಾರಣ?
ರಾಜೇಶ್ ಎಕ್ಸ್ಪೋರ್ಟ್ಸ್ ಕಂಪನಿಯ ಮ್ಯಾನೇಜ್ಮೆಂಟ್ನಲ್ಲಿರುವ ಅನುಮಾನಾಸ್ಪದ ಅಂಶಗಳು
ಕಂಪನಿಯ ವಾರ್ಷಿಕ ವಹಿವಾಟು ಸುಮಾರು 7.7 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದರೂ, ಉನ್ನತ ಸ್ತರದ ಮ್ಯಾನೇಜ್ಮೆಂಟ್ ಟೀಮ್ಗೆ ನೀಡುವ ವೇತನವು ಅಸಹಜವಾಗಿ ಕಡಿಮೆ ಇದೆ. ಮುಖ್ಯ ಹಣಕಾಸು ಅಧಿಕಾರಿ (CFO- Chief Financial Office) ಅವರು 2020ರಿಂದ ಯಾವುದೇ ವೇತನವನ್ನೇ ಪಡೆದಿಲ್ಲ. ಎಂಡಿಯವರಿಗಂತೂ ಮಾಸಿಕ 17,000 ರೂ ಮಾತ್ರವೇ ವೇತನ ಹೋಗುತ್ತಿರುವುದು. ಈ ವೈರುದ್ಧ್ಯಗಳನ್ನು ಇಡಿ ತನಿಖೆಯಲ್ಲಿ ಪತ್ತೆ ಹಚ್ಚಲಾಗಿದೆ.
ರಾಜೇಶ್ ಎಕ್ಸ್ಪೋರ್ಟ್ಸ್ನಿಂದ ಷೇರು ಮಾರುಕಟ್ಟೆ ಅಕ್ರಮಗಳು
NRI ಬೆನಾಮಿದಾರರನ್ನು ಬಳಸಿಕೊಂಡು ಷೇರು ಮರುಪಾವತಿಯ ಮೂಲಕ ಭಾರತದಿಂದ ಸುಮಾರು 600 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಅಕ್ರಮವಾಗಿ ಸಾಗಿಸಲಾಗಿದೆ (Siphoning of money) ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಸೂರ್ಯಾಸ್ತ ನಿಯಮ ತರಲು ಭಾರತದ ಯತ್ನ; ಏನಿದು ಸನ್ಸೆಟ್ ಕ್ಲಾಸ್?
ಅಲ್ಲದೆ, ಇಂಟರ್‌ನ್ಯಾಷನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ (ICIJ) ಲೀಕ್ ಮಾಡಿದ ಪಟ್ಟಿಯಲ್ಲಿರುವ ವ್ಯಕ್ತಿಗಳೊಂದಿಗೆ ಕಂಪನಿಯು ಸಂಪರ್ಕ ಹೊಂದಿರುವ ಅನುಮಾನಗಳಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.
ಪ್ರಸ್ತುತ, ಈ ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Wed, 24 June 26




