AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಬಿಐ ನೌಕರರ ಎರಡು ದಿನ ಮುಷ್ಕರ; ಏನು ಕಾರಣ, ಅವರ 16 ಬೇಡಿಕೆಗಳೇನು? ಇಲ್ಲಿದೆ ಮಾಹಿತಿ

SBI employees strike for 2 days in May 25 and 26th: ಎಸ್​ಬಿಐ ಉದ್ಯೋಗಿಗಳು ಮೇ 25 ಮತ್ತು 26ರಂದು ಎರಡು ದಿನಗಳ ಕಾಲ ಮುಷ್ಕರ ನಡೆಸುತ್ತಿರುವುದಾಗಿ ಘೋಷಿಸಿದ್ದಾರೆ. ವೇತನ ತಾರತಮ್ಯ, ಅಸಮರ್ಪಕ ಕೆಲಸದ ವಾತಾವರಣ, ಪೆನ್ಷನ್ ಫಂಡ್ ನಿರ್ವಹಣೆಯಲ್ಲಿ ಸ್ವಾತಂತ್ರ್ಯ ಇಲ್ಲದಿರುವುದು ಇತ್ಯಾದಿ ಬಗ್ಗೆ ಅಸಮಾಧಾನ ಇದೆ. ನೌಕರರು ಪ್ರಮುಖವಾಗಿ 16 ಬೇಡಿಕೆಗಳನ್ನು ಮುಂದಿಟ್ಟಿವೆ. ಬ್ಯಾಂಕ್ ಒಕ್ಕೂಟಗಳು ಈ ಮುಷ್ಕರಕ್ಕೆ ಬೆಂಬಲ ನೀಡಿವೆ.

ಎಸ್​ಬಿಐ ನೌಕರರ ಎರಡು ದಿನ ಮುಷ್ಕರ; ಏನು ಕಾರಣ, ಅವರ 16 ಬೇಡಿಕೆಗಳೇನು? ಇಲ್ಲಿದೆ ಮಾಹಿತಿ
ಎಸ್​ಬಿಐ ನೌಕರರ ಮುಷ್ಕರImage Credit source: AI/Mediaforge/TV9
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 06, 2026 | 12:37 PM

Share

ನವದೆಹಲಿ, ಮೇ 6: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೌಕರರು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರ (SBI employees strike) ನಡೆಸಲು ನಿರ್ಧರಿಸಿದ್ದಾರೆ. ಮೇ 25 ಮತ್ತು 26ರಂದು ಈ ಪ್ರತಿಭಟನೆಗಳು ನಡೆಯಲಿವೆ. ಪಿಂಚಣಿ, ನೇಮಕಾತಿ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿ ನೌಕರರು 16 ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿದ್ದಾರೆ. ಎಸ್​ಬಿಐ ದೇಶಾದ್ಯಂತ 50 ಕೋಟಿಗೂ ಅಧಿಕ ಸಂಖ್ಯೆಯಷ್ಟು ಗ್ರಾಹಕರ ಬಳಗ ಹೊಂದಿರುವುದರಿಂದ, ಈ ಎರಡು ದಿನಗಳ ಮುಷ್ಕರವು ಬಹಳ ಮಂದಿಯ ಮೇಲೆ ಪರಿಣಾಮ ಬೀರಬಹುದು.

ಎಸ್​ಬಿಐ ಉದ್ಯೋಗಿಗಳು ಮುಷ್ಕರ ನಡೆಸಲು ಪ್ರಮುಖ ಕಾರಣಗಳೇನು?

  • ಸಿಬ್ಬಂದಿ ಕೊರತೆ ಇದ್ದರೂ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಇದರಿಂದ ಇರುವ ನೌಕರರ ಮೇಲೆ ಹೆಚ್ಚಿನ ಕೆಲಸದ ಹೊರೆ ಬೀಳುತ್ತಿದೆ ಎಂಬುದು ಒಂದು ಸಂಗತಿ.
  • ಪಿಂಚಣಿ ಸಂಬಂಧಿತ ಸೌಲಭ್ಯಗಳು ಏಕರೂಪದಲ್ಲಿ ಇಲ್ಲದೇ ಇರುವುದರಿಂದ ಪಿಂಚಣಿ ಸಮಾನತೆ ಇಲ್ಲ ಎಂದು ತಗಾದೆ ತೆಗೆಯಲಾಗಿದೆ.
  • ಕೆಲಸದ ಸ್ಥಳದಲ್ಲಿ ಇನ್ನೂ ಉತ್ತಮವಾದ ವಾತಾವರಣ ಕಲ್ಪಿಸಬೇಕು. ನೌಕರರ ಕ್ಷೇಮಕ್ಕೆ ಆದ್ಯತೆ ಕೊಡಬೇಕು ಎನ್ನುವ ಕೂಗು ಇದೆ.
  • ಬ್ಯಾಂಕಿನ ಬೆನ್ನೆಲುಬಿನಂತಿರುವ ಕಾಯಂ ಹುದ್ದೆಗಳನ್ನು ಹೊರಗುತ್ತಿಗೆ (Outsourcing) ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಎಸ್​ಬಿಐ ನೌಕರರ ಒಕ್ಕೂಟ ಆಗ್ರಹಿಸಿದೆ.
  • ಕಳೆದ ಮೂರು ದಶಕಗಳಿಂದ ಸಂದೇಶವಾಹಕರ (Messengers) ನೇಮಕಾತಿ ಸ್ಥಗಿತಗೊಂಡಿದೆ. ಇತ್ತೀಚೆಗೆ ಸೂರತ್‌ನ ಎಸ್‌ಬಿಐ ಶಾಖೆಯಲ್ಲಿ ನಡೆದ ದರೋಡೆಯನ್ನು ಉಲ್ಲೇಖಿಸಿ, ನೌಕರರು ಮತ್ತು ಗ್ರಾಹಕರ ಸುರಕ್ಷತೆಗಾಗಿ ಸಶಸ್ತ್ರ ರಕ್ಷಕರನ್ನು (Armed Guards) ನೇಮಿಸಬೇಕೆಂದು ಒತ್ತಾಯಿಸಲಾಗಿದೆ.
  • ರಾಷ್ಟ್ರೀಯ ಪೆನ್ಶನ್ ಯೋಜನೆಯಡಿ ಬರುವ ನೌಕರರಿಗೆ ತಮ್ಮ ‘ಪೆನ್ಶನ್ ಫಂಡ್ ಮ್ಯಾನೇಜರ್’ ಅನ್ನು ಆಯ್ಕೆ ಮಾಡಿಕೊಳ್ಳುವ ಅಥವಾ ಬದಲಾಯಿಸುವ ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ.
  • 12ನೇ ದ್ವೈಪಕ್ಷಿಕ ಒಪ್ಪಂದದ ಪ್ರಕಾರ ಎಲ್ಲ ನೌಕರರಿಗೆ ಶೇ. 17 ರಷ್ಟು ವೇತನ ಹೆಚ್ಚಳ ಮಾಡಬೇಕಿತ್ತಾದರೂ, ಅಧಿಕಾರಿಗಳಿಗೆ ಮಾತ್ರ ವಿಶೇಷ ಭತ್ಯೆ ನೀಡಿ ಅವರ ವೇತನವನ್ನು ಶೇ. 22 ರಷ್ಟು ಹೆಚ್ಚಿಸಲಾಗಿದೆ. ಈ ವೇತನ ತಾರತಮ್ಯವನ್ನು ಸರಿಪಡಿಸಬೇಕು ಎನ್ನುವ ಕೂಗು ಇದೆ.
  • 2019ರ ನಂತರ ಬ್ಯಾಂಕ್‌ಗೆ ಸೇರಿದ ನೌಕರರಿಗೆ ಅಂತರ-ವೃತ್ತ ವರ್ಗಾವಣೆಗೆ (Inter Circle Transfers) ಅವಕಾಶ ನೀಡಬೇಕು ಎನ್ನುವ ಬೇಡಿಕೆಯೂ ಇದೆ.

ಇದನ್ನೂ ಓದಿ: ಮುಂದಿನ 9 ವರ್ಷದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ನಗರ ಬೆಂಗಳೂರು; ಸಾವಿಲ್ಸ್ ವರದಿ

ಎಸ್​ಬಿಐ ನೌಕರರ 16 ಪ್ರಮುಖ ಬೇಡಿಕೆಗಳಿವು

  1. ಉದ್ಯೋಗಿಗಳ ಎನ್​ಪಿಎಸ್ ಸ್ಕೀಮ್​ನಲ್ಲಿ ಯಾವ ಪೆನ್ಷನ್ ಫಂಡ್ ಮ್ಯಾನೇಜರ್ ಬೇಕು ಎಂಬುದನ್ನು ಆಯ್ದುಕೊಳ್ಳುವ ಆಯ್ಕೆ ಬೇಕು.
  2. ಉದ್ಯೋಗಿಗಳ ಪಿಂಚಣಿ ಸಮಾನತೆ ಇರಲಿ
  3. ಸಿಬ್ಬಂದಿ ಕೊರತೆ ಇಲ್ಲದಂತೆ ಸರಿಯಾಗಿ ನೇಮಕಾತಿ ಆಗಬೇಕು.
  4. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
  5. ಕೆಲಸದ ಹೊರೆಯ ಒತ್ತಡ ಕಡಿಮೆ ಮಾಡಬೇಕು.
  6. ಬಡ್ತಿ ನೀತಿ ಇನ್ನೂ ಉತ್ತಮವಿರಬೇಕು.
  7. ವರ್ಗಾವಣೆ ನೀತಿ ಸುಧಾರಿಸಬೇಕು.
  8. ಉತ್ತಮ ವೈದ್ಯಕೀಯ ಸೌಲಭ್ಯ ಇರಬೇಕು.
  9. ಸಂಬಳ ಸಮಸ್ಯೆ ಬಗೆಹರಿಸಬೇಕು.
  10. ಉದ್ಯೋಗಿಗಳ ಹಕ್ಕು ರಕ್ಷಿಸಬೇಕು.
  11. ಕೆಲಸದ ವಾತಾವರಣ ಸುಧಾರಿಸಬೇಕು
  12. ದೂರು ಪರಿಹಾರ ವ್ಯವಸ್ಥೆ ಉತ್ತಮವಾಗಿರಬೇಕು.
  13. ಎಲ್ಲಾ ನೌಕರ ವರ್ಗಗಳಲ್ಲಿ ನ್ಯಾಯಯುತ ನೀತಿ ಮತ್ತು ನಡವಳಿಕೆ ಇರಬೇಕು.
  14. ಶಾಖಾ ಮಟ್ಟದ ಸಿಬ್ಬಂದಿ ಬಲಪಡಿಸಬೇಕು.
  15. ನಿವೃತ್ತಿ ಸೌಲಭ್ಯ ಉತ್ತಮವಾಗಿರಬೇಕು.
  16. ಉದ್ಯೋಗಿಗಳ ಕಲ್ಯಾಣ ಮತ್ತು ಸೇವಾ ಭದ್ರತೆ ಸುಧಾರಣೆಗಳಾಗಬೇಕು.

ಗ್ರಾಹಕರ ಮೇಲೆ ಇದರ ಪರಿಣಾಮವೇನು?

ಎಸ್‌ಬಿಐ ದೇಶಾದ್ಯಂತ ಸುಮಾರು 50 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಪ್ರತಿದಿನ ಕೋಟ್ಯಂತರ ವಹಿವಾಟುಗಳು ನಡೆಯುತ್ತವೆ. ಮುಷ್ಕರದ ಕಾರಣದಿಂದ ಕೆಳಗಿನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಬಹುದು:

ಮೇ 25 ಮತ್ತು 26 ರಂದು ಬ್ಯಾಂಕ್‌ಗಳ ಒಳಗೆ ನಡೆಯುವ ನಗದು ಜಮೆ, ಚೆಕ್ ಕ್ಲಿಯರೆನ್ಸ್, ಲೋನ್ ಪ್ರಕ್ರಿಯೆಗಳು ಮತ್ತು ಲಾಕರ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಬಹುದು ಅಥವಾ ವಿಳಂಬವಾಗಬಹುದು.

ಎರಡು ದಿನಗಳ ಕಾಲ ಬ್ಯಾಂಕ್ ನೌಕರರು ಇರುವುದಿಲ್ಲವಾದ್ದರಿಂದ ಎಟಿಎಂಗಳಿಗೆ ನಗದು ಮರುತುಂಬಿಸುವ ಪ್ರಕ್ರಿಯೆಗೆ ಹಿನ್ನಡೆಯಾಗಿ ಎಟಿಎಂಗಳಲ್ಲಿ ಹಣ ಖಾಲಿಯಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ವಿಜಯ್​ನ ಪೋರ್ಟ್​ಫೋಲಿಯೋ ಇಂಟರೆಸ್ಟಿಂಗ್; ಹೂಡಿಕೆಯಲ್ಲಿ ಸಂಪ್ರದಾಯವಾದಿ; ಎಲ್ಲೆಲ್ಲಿದೆ ಅವರ 624 ಕೋಟಿ ರೂ ಹಣ?

ಮೇ 23 ನಾಲ್ಕನೇ ಶನಿವಾರ ಮತ್ತು ಮೇ 24 ಭಾನುವಾರ ಆಗಿರುವುದರಿಂದ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದರ ಬೆನ್ನಲ್ಲೇ ಮೇ 25, 26 ರಂದು ಮುಷ್ಕರ ನಡೆಯುವುದರಿಂದ ಸತತ 4 ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಲ್ಲಿ ಏರುಪೇರಾಗಬಹುದು. ಒಂದು ವೇಳೆ ಮುಷ್ಕರದ ದಿನ ಸಾರ್ವಜನಿಕ ರಜೆ ಬಂದರೆ, ಪ್ರತಿಭಟನೆಯನ್ನು ಮೇ 27ಕ್ಕೆ ಮುಂದೂಡಲಾಗುತ್ತದೆ.

ಗ್ರಾಹಕರಿಗೆ ಸಲಹೆಗಳು

ಮುಷ್ಕರದ ಅವಧಿಯಲ್ಲೂ **SBI YONO ಆಪ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು UPI (ಫೋನ್ ಪೇ, ಗೂಗಲ್ ಪೇ ಇತ್ಯಾದಿ) ಆನ್‌ಲೈನ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಮೇ 23 ಕ್ಕಿಂತ ಮುಂಚಿತವಾಗಿಯೇ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ನಗದು ಹಣವನ್ನು ಬ್ಯಾಂಕ್ ಅಥವಾ ಎಟಿಎಂನಿಂದ ಡ್ರಾ ಮಾಡಿ ಇಟ್ಟುಕೊಳ್ಳುವುದು ಉತ್ತಮ. ಚೆಕ್ ಕ್ಲಿಯರೆನ್ಸ್ ಅಥವಾ ಸಾಲದ ಕಂತುಗಳ ಪಾವತಿಯಂತಹ ಪ್ರಮುಖ ಕೆಲಸಗಳಿದ್ದಲ್ಲಿ ಮೇ 22ರ ಒಳಗಾಗಿಯೇ ಪೂರ್ಣಗೊಳಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us