
ನವದೆಹಲಿ, ನವೆಂಬರ್ 5: ಭಾರತದ ಷೇರು ಮಾರುಕಟ್ಟೆ ಸತತ ಎಂಟನೇ ಟ್ರೇಡಿಂಗ್ ಸೆಷನ್ ಪಾಸಿಟಿವ್ನಲ್ಲಿದೆ. ಈ ವರ್ಷ ಮಾರುಕಟ್ಟೆ ಇಷ್ಟು ದೀರ್ಘಾವಧಿ ಹಸಿರುಬಣ್ಣದಲ್ಲಿದ್ದದ್ದು ಇದೇ ಮೊದಲು. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಪ್ರಮುಖ ಸೂಚ್ಯಂಕಗಳು ಶೇ. 2ರಷ್ಟು ಹೆಚ್ಚಳ ಕಂಡಿವೆ. ಸೆನ್ಸೆಕ್ಸ್ ಇವತ್ತಿನ ಸೆಷನ್ನ ಒಂದು ಹಂತದಲ್ಲಿ 79,000 ಅಂಕಗಳ ಗಡಿ ದಾಟಿತು. ನಿಫ್ಟಿ ಕೂಡ ಒಂದು ಹಂತದಲ್ಲಿ 24,450 ಅಂಕಗಳವರೆಗೂ ಏರಿತ್ತು.
ಸೆನ್ಸೆಕ್ಸ್, ನಿಫ್ಟಿ ಮಾತ್ರವಲ್ಲ, ಬಿಎಸ್ಇ ಮತ್ತು ಎನ್ಎಸ್ಇಯ ಹೆಚ್ಚಿನ ಸೂಚ್ಯಂಕಗಳು ಉತ್ತಮವಾಗಿ ಸ್ಪಂದಿಸಿವೆ. ಆಟೊಮೊಬೈಲ್, ಐಟಿ, ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಇತ್ಯಾದಿ ಕೆಲ ಸೆಕ್ಟರ್ಗಳ ಸೂಚ್ಯಂಕಗಳು ಗರಿಷ್ಠ ಏರಿಕೆ ಪಡೆದಿವೆ.
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಮುಖಭಂಗವಾಗಿದೆ. ಭಾರತದ ರಾಜ್ಯಸಭೆ ಮತ್ತು ಲೋಕಸಭೆ ಇರವಂತೆ ಅಮೆರಿಕದ ಸೆನೇಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಡೆಮಾಕ್ರಾಟ್ ಪಕ್ಷದವರೇ ಬಹುಸಂಖ್ಯಾತರಾಗಿದ್ದಾರೆ. ಟ್ರಂಪ್ ಅವರು ಸದನಗಳಲ್ಲಿ ಸಂಖ್ಯಾಬಲ ಇಲ್ಲದ ಅಧ್ಯಕ್ಷರಾಗಿದ್ದಾರೆ. ನಿರ್ಣಾಯಕ ಸಂದರ್ಭಗಳಲ್ಲಿ ಅವರಿಗೆ ತಮ್ಮ ಕ್ರಮ ಜಾರಿಗೊಳಿಸಲು ಬೇಕಾದ ಸಂಖ್ಯಾಬಲ ಇರುವುದಿಲ್ಲ. ಅವರ ಕೈಕಟ್ಟಿದಂತಾಗುತ್ತದೆ. ಹೀಗಾಗಿ, ಅಮೆರಿಕ ಚುನಾವಣಾ ಫಲಿತಾಂಶವು ಜಾಗತಿಕವಾಗಿ ಪರಿಣಾಮ ಬೀರುತ್ತಿದೆ.
ಇದನ್ನೂ ಓದಿ: ಐದು ದೇಶಗಳ ಗೂಗಲ್ ಉದ್ಯೋಗಿಗಳಿಗೆ ಕೆಲಸಕ್ಕೆ ಸಂಚಕಾರ; ವಾಲಂಟರಿ ಎಕ್ಸಿಟ್ ಆಫರ್ನ ಸಂಕಟ
ಟ್ರಂಪ್ ಅವರು ಇರಾನ್ನಲ್ಲಿ ಯುದ್ಧ ಮುಂದುವರಿಸುವ ಸಾಹಸಕ್ಕೆ ಕೈಹಾಕುವ ಸಾಧ್ಯತೆ ಕಡಿಮೆ ಇದೆ. ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ತಿಳಿಗೊಳ್ಳುವ ಆಶಯ ಇದೆ. ಹೀಗಾಗಿ, ಕಚ್ಚಾ ತೈಲ ಬೆಲೆ ಗಣನೀಯವಾಗಿ ಇಳಿದಿದೆ. ಇದು ಷೇರು ಮಾರುಕಟ್ಟೆಗೆ ಒಟ್ಟಾರೆ ಸಕಾರಾತ್ಮಕ ಪರಿಣಾಮ ಬೀರಿದೆ.
ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಭಾರತದಲ್ಲಿ ಸತತವಾಗಿ ಹೂಡಿಕೆ ಮಾಡುವುದು ಮುಂದುವರಿದಿದೆ. ಡೆಮಾಕ್ರಾಟ್ ಗೆಲುವು ಅಮೆರಿಕದಲ್ಲಿ ಎಐ ಮೇಲೆ ಹೆಚ್ಚಿನ ಕಡಿವಾಣ ಬೀಳುವ ಸಾಧ್ಯತೆ ಹೆಚ್ಚಿಸಿದೆ. ಹೀಗಾಗಿ, ವಿದೇಶೀ ಹೂಡಿಕೆದಾರರು ಭಾರತದ ಷೇರುಗಳ ಮೇಲೆ ಹೂಡಿಕೆ ಮಾಡಲು ಮತ್ತಷ್ಟು ಮುಂದಾಗಬಹುದು.
ವಿಶ್ವದ ವಿವಿಧ ಷೇರು ಮಾರುಕಟ್ಟೆಗಳು ಪಾಸಿಟಿವ್ ಆಗಿವೆ. ಅಮೆರಿಕ ಡೋವ್ ಜೋನ್ಸ್ ಇಂಡಸ್ಟ್ರಿಯಲ್ ಆವರೇಜ್ ಶೇ. 3.03ರಷ್ಟು ಹೆಚ್ಚಿದೆ. ನಾಸ್ಡಾಕ್ ಕಾಂಪೊಸಿಟ್, ಎಸ್ ಅಂಡ್ ಪಿ 500 ಸೂಚ್ಯಂಕಗಳು ಶೇ 1ಕ್ಕಿಂತಲೂ ಹೆಚ್ಚಾಗಿವೆ.
ಜಪಾನ್, ಸೌತ್ ಕೊರಿಯಾ, ಜರ್ಮನಿ, ಬ್ರಿಟನ್ ಇತ್ಯಾದಿಯ ಮಾರುಕಟ್ಟೆಗಳೂ ಕೂಡ ಕಲರವ ಪಡೆಯುತ್ತಿವೆ.
ಇದನ್ನೂ ಓದಿ: ನೂರು ಕೋಟಿ ರೂ ಸ್ಟಾಕಲ್ ಹಗರಣ; ಹೂಡಿಕೆದಾರರಿಗೆ ಗೊತ್ತಿಲ್ಲದೇ ಆಪಲ್, ಎನ್ವಿಡಿಯೋ ಷೇರು ಮಾರಿ ನಷ್ಟ ತಂದಿತ್ತ ಆರೋಪ
ನಿಫ್ಟಿ ಸೂಚ್ಯಂಕವು 24,400 ಅಂಕಗಳ ಮಟ್ಟದಲ್ಲಿ ಪ್ರಮುಖ ರೆಸಿಸ್ಟೆನ್ಸ್ ಹೊಂದಿರುತ್ತದೆ. ಸದ್ಯ ಅದು ಆ ಶ್ರೇಣಿಯಲ್ಲಿದೆ. ಇವತ್ತು ಇದೇ ಮಟ್ಟದಲ್ಲಿ ದಿನಾಂತ್ಯಗೊಂಡರೆ, ನಿಫ್ಟಿ 24,600 ಅಂಕಗಳವರೆಗೆ ತಡೆ ಇಲ್ಲದೆ ಏರಬಹುದು ಎಂದು ಟೆಕ್ನಿಕಲ್ ಅನಾಲಿಸಿಸ್ ಬಲ್ಲವರು ಹೇಳುತ್ತಾರೆ. ಹೀಗಾಗಿ, ಮಾರುಕಟ್ಟೆಯ ಓಟ ಮುಂದಿನ ವಾರವೂ ಮುಂದುವರಿದರೆ ಅಚ್ಚರಿ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ