ಸೋಲಾರ್ ಸೆಲ್​ಗೆ ಚೀನಾ ಮೇಲೆ ಅವಲಂಬನೆ ಇನ್ಮುಂದೆ ಕಡಿಮೆ; ಸ್ವಾವಲಂಬನೆ ಹಾದಿಯಲ್ಲಿ ಭಾರತ

|

Updated on: Jun 25, 2024 | 4:50 PM

Solar cell self-sufficiency for India: ಸೋಲಾರ್ ಸೆಲ್​ಗಳ ತಯಾರಿಕೆ ಭಾರತದಲ್ಲಿ ಕ್ಷಿಪ್ರವಾಗಿ ಹೆಚ್ಚುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಹಲವು ಪಟ್ಟು ಉತ್ಪಾದನೆ ಹೆಚ್ಚಲಿದೆ. 2025ರಷ್ಟರಲ್ಲಿ 30 ಗಿಗಾವ್ಯಾಟ್ ಸಾಮರ್ಥ್ಯಕ್ಕೆ ಹೆಚ್ಚಿಸುವ ಗುರಿ ಇದೆ. ಸೌರ ಫಲಕಗಳನ್ನು ತಯಾರಿಸುವ ಕಂಪನಿಗಳಿಗೆ ಅವುಗಳ ಬಿಡಿಭಾಗಗಳನ್ನು ಭಾರತದಲ್ಲೇ ಲಭ್ಯ ಇರುವಂತೆ ವ್ಯವಸ್ಥೆ ಮಾಡಲು ಸರ್ಕಾರ ಸೂಚಿಸಿದೆ.

ಸೋಲಾರ್ ಸೆಲ್​ಗೆ ಚೀನಾ ಮೇಲೆ ಅವಲಂಬನೆ ಇನ್ಮುಂದೆ ಕಡಿಮೆ; ಸ್ವಾವಲಂಬನೆ ಹಾದಿಯಲ್ಲಿ ಭಾರತ
ಸೌರ ಫಲಕ
Follow us on

ನವದೆಹಲಿ, ಜೂನ್ 25: ಭಾರತದಲ್ಲಿ ಸೌರಶಕ್ತಿ ಹಿಡಿದಿಡಲು ಬೇಕಾದ ಪ್ರಮುಖ ಭಾಗವಾದ ಸೋಲಾರ್ ಸೆಲ್​ಗಳನ್ನು (Solar cell) ಭಾರತದಲ್ಲಿ ಹೆಚ್ಚೆಚ್ಚು ಉತ್ಪಾದಿಸಲು ಸರ್ಕಾರ ಉತ್ತೇಜನ ನೀಡುತ್ತಿದೆ. ವರದಿ ಪ್ರಕಾರ ಮುಂಬರುವ ದಿನಗಳಲ್ಲಿ ದೇಶೀಯ ಸೌರ ಕೋಶ ತಯಾರಿಕೆಯ ಸಾಮರ್ಥ್ಯ ಗಣನೀಯವಾಗಿ ಹೆಚ್ಚಲಿದೆ. ಕೇಂದ್ರ ಮರುಬಳಕೆ ಅಥವಾ ನವೀಕರಣ ಇಂಧನ (renewable energy) ಸಚಿವಾಲಯದ ಕಾರ್ಯದರ್ಶಿ ಭೂಪಿಂದರ್ ಸಿಂಗ್ ಭಲ್ಲಾ ಅವರ ಪ್ರಕಾರ 2025ರ ಮಾರ್ಚ್​ನಷ್ಟರಲ್ಲಿ ಭಾರತದಲ್ಲಿ ಸೋಲಾರ್ ಸೆಲ್ ಸಾಮರ್ಥ್ಯ 30 ಗಿಗಾವ್ಯಾಟ್​ಗೆ ಏರಲಿದೆ. ಅಂದರೆ, ಈಗಿರುವ ಕೆಪಾಸಿಟಿ ಐದು ಪಟ್ಟು ಹೆಚ್ಚಲಿದೆ.

ಸೋಲಾರ್ ಸೆಲ್​ಗಳಿಗೆ ಚೀನಾದ ಮೇಲೆ ಭಾರತದ ಅವಲಂಬನೆ ಹೆಚ್ಚಿದೆ. ಈ ಸೆಲ್ ತಯಾರಿಕೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದೆ. ಚೀನಾದಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ತಪ್ಪಿಸುವುದು ಸರ್ಕಾರ ಉದ್ದೇಶ. ಒಂದೆಡೆ ದೇಶೀಯವಾಗಿ ಈ ಸೆಲ್​ಗಳ ತಯಾರಿಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೊಂದೆಡೆ, ಚೀನಾದ ಆಮದನ್ನು ತಪ್ಪಿಸಲು ಕೆಲ ಸೌರ ಫಲಕಗಳ ಬಿಡಿಭಾಗಗಳಿಗೆ ಆಮದು ಸುಂಕಗಳನ್ನು ಏರಿಸುವುದೂ ಸೇರಿದಂತೆ ವಿವಿಧ ಕ್ರಮ ಕೈಗೊಳ್ಳಲಾಗುತ್ತಿದೆ.

ಸೋಲಾರ್ ಪ್ಯಾನಲ್ ಅಥವಾ ಸೌರ ಫಲಕಗಳನ್ನು ಭಾರತದಲ್ಲೇ ತಯಾರಿಸಲಾಗುತ್ತಿದೆ. ಆದರೆ, ಅದಕ್ಕೆ ಬೇಕಾದ ಕೆಲ ಬ್ಯಾಕ್ ಎಂಡ್ ಉತ್ಪನ್ನಗಳಿಗೆ ಚೀನಾ ಮೇಲೆ ಅವಲಂಬನೆ ಈಗಲೂ ಇದೆ. ಈ ಉತ್ಪನ್ನಗಳಲ್ಲಿ ಸೋಲಾರ್ ಸೆಲ್​ಗಳೂ ಒಳಗೊಂಡಿವೆ. ದೇಶದಲ್ಲಿರುವ ಸೋಲಾರ್ ಪ್ಯಾನಲ್ ತಯಾರಕರಿಗೆ ಸರ್ಕಾರ ಎರಡು ವರ್ಷ ಕಾಲಾವಕಾಶ ಕೊಟ್ಟಿದ್ದು, ಅಷ್ಟರಲ್ಲಿ ಯಾವುದೇ ಬಿಡಿಭಾಗ ಆಮದು ಮಾಡಿಕೊಳ್ಳದ ರೀತಿಯಲ್ಲಿ ಸಂಪೂರ್ಣ ಇನ್​ಫ್ರಾಸ್ಟ್ರಕ್ಚರ್ ಭಾರತದಲ್ಲಿ ನಿರ್ಮಾಣ ಆಗಬೇಕು ಎಂದು ತಿಳಿಸಿದೆ.

ಇದನ್ನೂ ಓದಿ: ಬಜೆಟ್​ನಲ್ಲಿ ತೆರಿಗೆ ಪಾವತಿದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಿಸುವ ಸಾಧ್ಯತೆ; ಏನಿದು ಡಿಡಕ್ಷನ್?

ಈಗಾಗಲೇ ಸೋಲಾರ್ ಸೆಲ್​ಗಳ ತಯಾರಿಕೆಯ ಕೆಲಸಗಳು ವಿವಿಧೆಡೆ ನಡೆಯುತ್ತಿದೆ. ಇನ್ನೊಂದು ವರ್ಷದೊಳಗೆ ಸೋಲಾರ್ ಸೆಲ್ ಕೆಪಾಸಿಟಿ 30 ಗಿಗಾ ವ್ಯಾಟ್​ಗಳಷ್ಟಾಗುವ ಅಂದಾಜಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ