ಟ್ಯಾಕ್ಸ್ ಪಾಲು ಕರ್ನಾಟಕಕ್ಕೆ ಅತಿಹೆಚ್ಚು ಏರಿಕೆ ಆಗಿದ್ದು ಯಾಕೆ? ಇಲ್ಲಿದೆ ಕಾರಣ, ಮತ್ತು ವಿವಿಧ ರಾಜ್ಯಗಳ ತೆರಿಗೆ ಪಟ್ಟಿ
Tax devolution formula of 16th Finance Commission: 15ನೇ ಹಣಕಾಸು ಆಯೋಗದಲ್ಲಿ ಶೇ. 3.647 ತೆರಿಗೆ ಪಾಲು ಪಡೆದಿದ್ದ ಕರ್ನಾಟಕ್ಕೆ 16ನೇ ಹಣಕಾಸು ಆಯೋಗ ಶೇ. 4.13 ಪಾಲು ಕೊಟ್ಟಿದೆ. ಅತಿಹೆಚ್ಚು ಟ್ಯಾಕ್ಸ್ ಪಾಲು ಪಡೆಯುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 13ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಏರಿದೆ. 16ನೇ ಹಣಕಾಸು ಆಯೋಗದ ಟ್ಯಾಕ್ಸ್ ಡೆವಲ್ಯೂಶನ್ ಫಾರ್ಮುಲಾ 15ನೇ ಆಯೋಗದಕ್ಕಿಂತ ಹೇಗೆ ಭಿನ್ನ ಎಂಬುದು ಸೇರಿದಂತೆ ವಿವಿಧ ಮಾಹಿತಿ ಇಲ್ಲಿದೆ.

ನವದೆಹಲಿ, ಫೆಬ್ರುವರಿ 2: ನಿನ್ನೆಯ ಬಜೆಟ್ನಲ್ಲಿ (Union Budget 2026) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 16ನೇ ಹಣಕಾಸು ಆಯೋಗದ ಶಿಫಾರಸ್ಸನ್ನು (16th Finance Commission) ಸರ್ಕಾರ ಒಪ್ಪಿರುವುದಾಗಿ ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಲಂಬ ತೆರಿಗೆ ಹಂಚಿಕೆ ಸೂತ್ರದ ಪ್ರಕಾರ ಶೇ. 41ರಷ್ಟು ತೆರಿಗೆ ರಾಜ್ಯಗಳಿಗೆ ನೀಡಲಾಗುತ್ತದೆ. ಇದು 15ನೇ ಹಣಕಾಸು ಆಯೋಗದ ಶಿಫಾರಸ್ಸನ್ನೇ ಪುನರುಚ್ಚರಿಸಿದೆ. ಆದರೆ, ಈ ತೆರಿಗೆಯನ್ನು ರಾಜ್ಯ ರಾಜ್ಯಗಳ ನಡುವೆ ಹಂಚಿಕೆ ಮಾಡುವ ಸಮ ತೆರಿಗೆ ಹಂಚಿಕೆ ಸೂತ್ರದಲ್ಲಿ ಬದಲಾವಣೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕಕ್ಕೆ ಶುಭ ಸುದ್ದಿ ಇದೆ. 15ನೇ ಹಣಕಾಸು ಆಯೋಗದಿಂದ ಶೇ. 3.647 ಪಾಲು ಪಡೆದಿದ್ದ ಕರ್ನಾಟಕದ ಪಾಲು ಈ ಬಾರಿ 4.13ಕ್ಕೆ ಏರಿದೆ. ಎಲ್ಲಾ ದಕ್ಷಿಣ ರಾಜ್ಯಗಳ ಪಾಲೂ ಏರಿಕೆ ಆಗಿರುವುದು ಗಮನಾರ್ಹ.
16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳ ಪಾಲು
- ಉತ್ತರಪ್ರದೇಶ: ಶೇ 17.6
- ಬಿಹಾರ: ಶೇ. 9.9
- ಮಧ್ಯಪ್ರದೇಶ: ಶೇ. 7.35
- ಪಶ್ಚಿಮ ಬಂಗಾಳ: ಶೇ. 7.2
- ಮಹಾರಾಷ್ಟ್ರ: ಶೇ. 6.44
- ರಾಜಸ್ಥಾನ: ಶೇ. 5.9
- ಒಡಿಶಾ: ಶೇ. 4.33
- ಆಂಧ್ರಪ್ರದೇಶ: ಶೇ. 4.21
- ಕರ್ನಾಟಕ: ಶೇ. 4.13
- ತಮಿಳುನಾಡು: ಶೇ. 4.09
- ಅಸ್ಸಾಮ್: ಶೇ. 3.26
- ಗುಜರಾತ್: ಶೇ. 3.75
- ಜಾರ್ಖಂಡ್: ಶೇ. 3.36
- ಕೇರಳ: ಶೇ. 2.38
- ತೆಲಂಗಾಣ: ಶೇ. 2.17
- ಪಂಜಾಬ್: ಶೇ. 1.9
- ಅರುಣಾಚಲಪ್ರದೇಶ: ಶೇ. 1.6
- ಹರ್ಯಾಣ: ಶೇ. 1.36
- ಉತ್ತರಾಖಂಡ್: ಶೇ. 1.1
- ಹಿಮಾಚಲಪ್ರದೇಶ: ಶೇ 0.9
- ಮೇಘಾಲಯ: ಶೇ. 0.75
- ಮಣಿಪುರ್: ಶೇ. 0.70
- ತ್ರಿಪುರ: ಶೇ. 0.70
- ನಾಗಾಲ್ಯಾಂಡ್: ಶೇ. 0.55
- ಮಿಝೋರಾಂ: ಶೇ. 0.48
- ಸಿಕ್ಕಿಂ: ಶೇ. 0.38
- ಗೋವಾ: ಶೇ. 0.37
ಇದನ್ನೂ ಓದಿ: 16ನೇ ಹಣಕಾಸು ಆಯೋಗದ ಸೂತ್ರದಡಿ ಕರ್ನಾಟಕಕ್ಕೆ ಅತಿ ಹೆಚ್ಚು ಲಾಭ; ರಾಜ್ಯಕ್ಕೆ 63,050 ಕೋಟಿ ರೂ. ತೆರಿಗೆ ಪಾಲು
15ನೇ ಹಣಕಾಸು ಆಯೋಗಕ್ಕಿಂತ 16ನೆಯದ್ದರ ಸೂತ್ರದ್ದು ಏನು ಭಿನ್ನ?
ಅಧಿಕ ತೆರಿಗೆ ಆದಾಯ ಸೃಷ್ಟಿಸುವ ರಾಜ್ಯಗಳು ತಮಗೆ ತೆರಿಗೆ ಹಂಚಿಕೆಯಲ್ಲಿ ತೀರಾ ಕಡಿಮೆ ಸಿಗುತ್ತಿದೆ ಎಂದು ಹಲವಾರು ವರ್ಷಗಳಿಂದ ಟೀಕಿಸುತ್ತಾ ಬರುತ್ತಿದ್ದವು. 16ನೇ ಹಣಕಾಸು ಆಯೋಗದ ಅಧಿಕಾರಿಗಳು ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚಿಸಿ, ಸೂತ್ರದಲ್ಲಿ ತುಸು ಬದಲಾವಣೆ ಮಾಡಿದೆ. ಸೂತ್ರದ ಲೆಕ್ಕಾಚಾರಕ್ಕೆ ಜಿಡಿಪಿ ಅಂಶವನ್ನು ಸೇರಿಸಲಾಗಿದೆ. ಜಿಡಿಪಿಗೆ ಶೇ. 10 ವೈಟೇಜ್ ನೀಡಲಾಗಿದೆ. ಇದರಿಂದ ಅಧಿಕ ಜಿಡಿಪಿ ಇರುವ ದಕ್ಷಿಣದ ರಾಜ್ಯಗಳು, ಮಹಾರಾಷ್ಟ್ರ ಮೊದಲಾದವಕ್ಕೆ ತೆರಿಗೆ ಪಾಲು ಹೆಚ್ಚಿದೆ.
ಕರ್ನಾಟಕ ಕೇಳಿದಷ್ಟು ಸಿಕ್ಕಿದೆಯಾ ತೆರಿಗೆ ಪಾಲು?
2015ರಿಂದ 2020ರವರೆಗೂ ಚಾಲನೆಯಲ್ಲಿದ್ದ 14ನೇ ಹಣಕಾಸು ಆಯೋಗವು ರಾಜ್ಯಗಳಿಗೆ ನೀಡಿದ ತೆರಿಗೆ ಹಂಚಿಕೆ ಸೂತ್ರದ ಪ್ರಕಾರ ಕರ್ನಾಟಕಕ್ಕೆ ಶೇ. 4.71 ಪಾಲು ನೀಡಲಾಗಿತ್ತು. ಆದರೆ, 15ನೇ ಹಣಕಾಸು ಆಯೋಗವು ಅದನ್ನು ಶೇ. 3.647ಕ್ಕೆ ಇಳಿಸಿತ್ತು. ಬಹುತೇಕ ಎಲ್ಲಾ ದಕ್ಷಿಣ ರಾಜ್ಯಗಳಿಗೂ ಇದೇ ರೀತಿಯ ಹಣೆಬರಹ ಬರೆಯಲಾಗಿತ್ತು. ಕರ್ನಾಟಕ ಪದೇ ಪದೇ ತಕರಾರು ಎತ್ತುತ್ತಿದ್ದುದು ಇದೇ ವಿಚಾರಕ್ಕೆ.
ತೆರಿಗೆ ಪಾಲನ್ನು 14ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಹಾಕಿ ಎಂಬುದು ಕರ್ನಾಟಕದ ಆಗ್ರಹವಾಗಿತ್ತು. ಕರ್ನಾಟಕಕ್ಕೆ ಈ ಹಿಂದೆ ಇದ್ದ ಶೇ. 4.71 ಪಾಲನ್ನು ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು. 16ನೇ ಹಣಕಾಸು ಆಯೋಗವು ಕರ್ನಾಟಕ್ಕೆ ತೆರಿಗೆ ಪಾಲನ್ನು ಶೇ. 3.647ರಿಂದ ಶೇ. 4.13ಕ್ಕೆ ಏರಿಸಿದೆ.
ಕೇಂದ್ರದಿಂದ ರಾಜ್ಯಗಳಿಗೆ ಯಾವ್ಯಾವ ತೆರಿಗೆಗಳು ಸಿಗುತ್ತವೆ?
- ಕಾರ್ಪೊರೇಶನ್ ಟ್ಯಾಕ್ಸ್
- ಆದಾಯ ತೆರಿಗೆ
- ಸೆಂಟ್ರಲ್ ಜಿಎಸ್ಟಿ
- ಕಸ್ಟಮ್ಸ್
- ಕೇಂದ್ರ ಅಬಕಾರಿ ಸುಂಕ
ಮೇಲಿನ ಈ ಎಲ್ಲಾ ತೆರಿಗೆಗಳನ್ನು ಪಡೆಯುವ ಕೇಂದ್ರ ಸರ್ಕಾರ, ಇದರಲ್ಲಿ ಶೇ. 41ರಷ್ಟನ್ನು ರಾಜ್ಯಗಳಿಗೆ ಹಂಚುತ್ತದೆ.
ಜಿಎಸ್ಟಿಯ ಭಾಗವಾಗಿರುವ ಎಸ್ಜಿಎಸ್ಟಿ ಸಂಪೂರ್ಣವಾಗಿ ಆಯಾ ರಾಜ್ಯಗಳಿಗೆ ಹೋಗುತ್ತದೆ. ಅಂತರರಾಜ್ಯ ವಹಿವಾಟು ವೇಳೆ ಸಂಗ್ರಹವಾಗುವ ಐಜಿಎಸ್ಟಿ ಅದರದ್ದೇ ಸೂತ್ರದೊಂದಿಗೆ ಎರಡು ರಾಜ್ಯಗಳ ನಡುವೆ ಹಂಚಿಕೆ ಆಗುತ್ತದೆ. ಕೇಂದ್ರಕ್ಕೆ ಹೋಗುವ ಸಿಜಿಎಸ್ಟಿಯನ್ನು ಮಾತ್ರ ರಾಜ್ಯಗಳ ತೆರಿಗೆ ಹಂಚಿಕೆಗೆ ಬಳಸಲಾಗುತ್ತದೆ.
ಇದನ್ನೂ ಓದಿ: ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹ; ಈ ವರ್ಷ 18 ಲಕ್ಷ ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್
2026-27ರಲ್ಲಿ ಕೇಂದ್ರದಿಂದ ವಿವಿಧ ರಾಜ್ಯಗಳಿಗೆ ಸಿಗಬಹುದಾದ ತೆರಿಗೆ ಹಣ (ಅಂದಾಜು)
- ಉತ್ತರಪ್ರದೇಶ: 2,68,928.38 ಕೋಟಿ ರೂ
- ಬಿಹಾರ: 1,51,841.75 ಕೋಟಿ ರೂ
- ಮಧ್ಯಪ್ರದೇಶ: 1,12,141.28 ಕೋಟಿ ರೂ
- ಪಶ್ಚಿಮ ಬಂಗಾಳ: 1,10,126.49 ಕೋಟಿ ರೂ
- ಮಹಾರಾಷ್ಟ್ರ: 98,312.5 ಕೋಟಿ ರೂ
- ರಾಜಸ್ಥಾನ: 90,451.78 ಕೋಟಿ ರೂ
- ಒಡಿಶಾ: 67,464.88 ಕೋಟಿ ರೂ
- ಆಂಧ್ರಪ್ರದೇಶ: 64,366.38 ಕೋಟಿ ರೂ
- ಕರ್ನಾಟಕ: 63,053.71 ಕೋಟಿ ರೂ
- ತಮಿಳುನಾಡು: 62,534.75 ಕೋಟಿ ರೂ
- ಗುಜರಾತ್: 57,314.62 ಕೋಟಿ ರೂ
- ಜಾರ್ಖಂಡ್: 51,239.73 ಕೋಟಿ ರೂ
- ಛತ್ತೀಸ್ಗಡ್: 50,430.75 ಕೋಟಿ ರೂ
- ಅಸ್ಸಾಮ್: 49,728.63 ಕೋಟಿ ರೂ
- ಕೇರಳ: 36,357.77 ಕೋಟಿ ರೂ
- ತೆಲಂಗಾಣ: 33,182.95 ಕೋಟಿ ರೂ
- ಪಂಜಾಬ್: 30,466.05 ಕೋಟಿ ರೂ
- ಹರ್ಯಾಣ: 20,773.68 ಕೋಟಿ ರೂ
- ಅರುಣಾಚಲಪ್ರದೇಶ: 20,666.83 ಕೋಟಿ ರೂ
- ಉತ್ತರಾಖಂಡ್: 17,415.71 ಕೋಟಿ ರೂ
- ಹಿಮಾಚಲಪ್ರದೇಶ: 13,950.88 ಕೋಟಿ ರೂ
- ತ್ರಿಪುರಾ: 9,783.92 ಕೋಟಿ ರೂ
- ಮೇಘಾಲಯ: 9,631.3 ಕೋಟಿ ರೂ
- ಮಣಿಪುರ್: 9,554.99 ಕೋಟಿ ರೂ
- ಮಿಜೋರಾಂ: 8,608.64 ಕೋಟಿ ರೂ
- ನಾಗಾಲ್ಯಾಂಡ್: 7,341.76 ಕೋಟಿ ರೂ
- ಗೋವಾ: 5,571.2 ಕೋಟಿ ರೂ
- ಸಿಕ್ಕಿಂ: 5,113.29 ಕೋಟಿ ರೂ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




