ಈ 8 ಬ್ಯಾಂಕ್​ಗಳ ಚೆಕ್​ಬುಕ್, ಪಾಸ್​ಬುಕ್ ಏಪ್ರಿಲ್ 1ರಿಂದ ಚಾಲ್ತಿಯಲ್ಲಿ ಇರಲ್ಲ

ಈ ಎಂಟು ಬ್ಯಾಂಕ್​ಗಳ ಪಾಸ್​ಬುಕ್, ಚೆಕ್​ಬುಕ್ ಏಪ್ರಿಲ್ 1, 2021ರಿಂದ ಮಾನ್ಯವಲ್ಲ. ನೀವು ಇವುಗಳ ಪೈಕಿ ಯಾವುದಾದರೂ ಬ್ಯಾಂಕ್​ನ ಗ್ರಾಹಕರಾಗಿದ್ದಲ್ಲಿ ಕಡ್ಡಾಯವಾಗಿ ಈ ಅಂಶಗಳನ್ನು ಗಮನಿಸಿ.

ಈ 8 ಬ್ಯಾಂಕ್​ಗಳ ಚೆಕ್​ಬುಕ್, ಪಾಸ್​ಬುಕ್ ಏಪ್ರಿಲ್ 1ರಿಂದ ಚಾಲ್ತಿಯಲ್ಲಿ ಇರಲ್ಲ
ಸಾಂದರ್ಭಿಕ ಚಿತ್ರ
Follow us
Srinivas Mata
| Updated By: ಸಾಧು ಶ್ರೀನಾಥ್​

Updated on: Mar 16, 2021 | 3:13 PM

ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಆಂಧ್ರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅಲಹಾಬಾದ್ ಬ್ಯಾಂಕ್​ನ ಗ್ರಾಹಕರ ಬ್ಯಾಂಕ್ ಖಾತೆ ಸಂಖ್ಯೆಯು ಏಪ್ರಿಲ್ 1, 2021ರಿಂದ ಬದಲಾವಣೆ ಆಗಲಿದೆ. ಈ ಬ್ಯಾಂಕ್​ಗಳು ಇತರ ದೊಡ್ಡ ಬ್ಯಾಂಕ್ಗಳ ಜತೆಗೆ ವಿಲೀನ ಆಗಿದ್ದರಿಂದ ಈ ಬೆಳವಣಿಗೆ ಆಗಿದೆ. ಹೊಸ ಚೆಕ್ ಪುಸ್ತಕ ಮತ್ತು ಪಾಸ್​ಬುಕ್ ವಿತರಣೆ ಮಾಡಲಾಗುವುದು ಹಾಗೂ ಈ ಬ್ಯಾಂಕ್​ಗಳ ಖಾತೆದಾರರ ಹಳೆಯ ಪಾಸ್​ಪುಸ್ತಕ ಹಾಗೂ ಚೆಕ್​​ಪುಸ್ತಕ ಏಪ್ರಿಲ್ 1ನೇ ತಾರೀಕಿನಿಂದ ಮಾನ್ಯವಲ್ಲ.

ಪಂಜಾಬ್ ನ್ಯಾಷನಲ್ ಬ್ಯಾಂಕ್​ನಿಂದ ಈಗಾಗಲೇ ಸೂಚನೆ ನೀಡಿದ್ದು, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಸದ್ಯಕ್ಕಿರುವ ಚೆಕ್​​ಪುಸ್ತಕ ಹಾಗೂ ಪಾಸ್​​ಪುಸ್ತಕ ಮಾರ್ಚ್ 31ನೇ ತಾರೀಕಿನವರೆಗೆ ಮಾತ್ರ ಮಾನ್ಯತೆ ಹೊಂದಿದೆ. ಏಪ್ರಿಲ್ 1ರಿಂದ ಇವುಗಳ ಬಳಕೆ ಸಾಧ್ಯವಿಲ್ಲ ಎಂದು ತಿಳಿಸಿದೆ.

ಈ ಬ್ಯಾಂಕ್​ಗಳ ಗ್ರಾಹಕರು ಏನು ಮಾಡಬೇಕು? * ನೀವು ಒಂದು ವೇಳೆ ಈ ಬ್ಯಾಂಕ್​ಗಳ ಗ್ರಾಹಕರಾಗಿದ್ದಲ್ಲಿ ಮೊಬೈಲ್ ಸಂಖ್ಯೆ, ವಿಳಾಸ, ನಾಮಿನಿ ಹೆಸರು ಮುಂತಾದವನ್ನು ಅಪ್​ಡೇಟ್ ಮಾಡಬೇಕಾಗುತ್ತದೆ. ಯಾವ ಬ್ಯಾಂಕ್ ಜತೆಗೆ ನಿಮ್ಮ ಬ್ಯಾಂಕ್ ವಿಲೀನ ಆಗಿದೆಯೋ ಆ ಬ್ಯಾಂಕ್​ನಿಂದ ಹೊಸ ಚೆಕ್ ಪುಸ್ತಕ ಮತ್ತು ಪಾಸ್​ಪುಸ್ತಕವನ್ನು ಪಡೆದುಕೊಳ್ಳಬೇಕು. * ಹೊಸ ಚೆಕ್ ಪುಸ್ತಕ ಹಾಗೂ ಪಾಸ್ ಪುಸ್ತಕವನ್ನು ಪಡೆದ ಮೇಲೆ ವಿವಿಧ ಫೈನಾನ್ಷಿಯಲ್ ಇನ್​ಸ್ಟ್ರುಮೆಂಟ್​ನಲ್ಲಿ ದಾಖಲಾಗಿರುವ ನಿಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ಅಪ್​​ಡೇಟ್ ಮಾಡಬೇಕಾಗುತ್ತದೆ.

ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಈ ಎರಡೂ ಬ್ಯಾಂಕ್ ಆಫ್ ಬರೋಡಾ ಜತೆಗೆ ಏಪ್ರಿಲ್ 1, 2019ರಂದು ವಿಲೀನವಾಗಿದೆ. ಒಬಿಸಿ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವು ಪಂಜಾಬ್ ನ್ಯಾಷನಲ್ ಬ್ಯಾಂಕ್ ಜತೆಗೆ ಕಳೆದ ವರ್ಷ ಏಪ್ರಿಲ್ 1, 2020ಕ್ಕೆ ಸೇರಿದೆ. ಇವುಗಳನ್ನು ಹೊರತುಪಡಿಸಿ, ಕೆನರಾ ಬ್ಯಾಂಕ್ ಜತೆಗೆ ಸಿಂಡಿಕೇಟ್ ಬ್ಯಾಂಕ್ ಹಾಗೂ ಆಂಧ್ರಾ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್​ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜತೆ ವಿಲೀನವಾಗಿವೆ. ಅದೇ ರೀತಿ ಅಲಹಾಬಾದ್ ಬ್ಯಾಂಕ್ ಅನ್ನು ಇಂಡಿಯನ್ ಬ್ಯಾಂಕ್ ಜತೆ ಸೇರಿಸಲಾಗಿದೆ.

2019ರ ಆಗಸ್ಟ್​​ನಲ್ಲಿ 10 ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳನ್ನು ಒಗ್ಗೂಡಿಸಿ ನಾಲ್ಕು ಅತಿ ದೊಡ್ಡ ಹಾಗೂ ಬಲಿಷ್ಠ ಬ್ಯಾಂಕ್ ಆಗಿ ರೂಪಿಸುವ ಕಸರತ್ತು ಆರಂಭಿಸಿತು. ಈ ಮೂಲಕ 2017ರಲ್ಲಿ 27ರಷ್ಟಿದ್ದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು ಹನ್ನೆರಡಕ್ಕೆ ಇಳಿದವು.

ಇದನ್ನೂ ಓದಿ:Axis Bank Wearble Contactless Payment Device: ಧರಿಸುವಂಥ ಸಾಧನ ಬಳಸಿ ಆಕ್ಸಿಸ್ ಬ್ಯಾಂಕ್ ವಹಿವಾಟು; ದೇಶದಲ್ಲಿ ಇದೇ ಮೊದಲು