ನೀವು ಸೈಬರ್ ಕ್ರೈಮ್ ಸಂತ್ರಸ್ತರಾಗಿದ್ದರೆ ಏನು ಮಾಡಬೇಕು? ದೂರು ನೀಡುವುದು ಹೇಗೆ?
ನಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಪರಿಶೀಲಿಸದೆಯೇ ನಾವು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಾಹಿತಿ ಶೇರ್ ಮಾಡುತ್ತಿದ್ದೇವೆ. ಅನುಚಿತವಾದ ವಿಡಿಯೊ ಥಂಬ್‌ನೇಲ್ ಅನ್ನು ರಚಿಸಲು ಯಾರಾದರೂ ನಿಮ್ಮ ಫೋಟೋವನ್ನು ಮಾರ್ಫ್ ಮಾಡಬಹುದು
ಸೈಬರ್ ಕ್ರೈಮ್ (cyber crime) ಎನ್ನುವುದು ಕಂಪ್ಯೂಟರ್, ನೆಟ್ವರ್ಕ್ನಿಂದ ಕೂಡಿದ ಡಿವೈಸ್ ಅಥವಾ ನೆಟ್‌ವರ್ಕ್ ಅನ್ನು ಒಳಗೊಂಡಿರುವ ಯಾವುದೇ ಅಪರಾಧ ಚಟುವಟಿಕೆಯಾಗಿದೆ. ಹೆಚ್ಚಿನ ಸೈಬರ್ ಕ್ರೈಮ್‌ಗಳನ್ನು ಸೈಬರ್ ಅಪರಾಧಿಗಳಿಗೆ ಲಾಭವನ್ನು ಗಳಿಸುವ ಸಲುವಾಗಿ ನಡೆಸುತ್ತಾರೆ, ಸೈಬರ್ ಅಪರಾಧದ ಪ್ರಾಥಮಿಕ ಪರಿಣಾಮವೇ ಆರ್ಥಿಕ ನಷ್ಟ. ಸೈಬರ್ ಅಪರಾಧವು ransomware ದಾಳಿಗಳು, ಇಮೇಲ್ ಮತ್ತು ಇಂಟರ್ನೆಟ್ ವಂಚನೆ, ಮತ್ತು ಗುರುತಿನ ವಂಚನೆ, ಹಾಗೆಯೇ ಹಣಕಾಸು ಖಾತೆ, ಕ್ರೆಡಿಟ್ ಕಾರ್ಡ್ ಅಥವಾ ಇತರ ಪಾವತಿ ಕಾರ್ಡ್ ಮಾಹಿತಿಯನ್ನು ಕದಿಯುವ ಪ್ರಯತ್ನಗಳನ್ನು ಒಳಗೊಂಡಂತೆ ವಿವಿಧ ರೀತಿಯ ಲಾಭ-ಚಾಲಿತ ಅಪರಾಧ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ಅಪ್ಲಿಕೇಶನ್ ಬಳಸುವಾಗ ಜನರು ತಿಳಿದಿರಬೇಕಾದ ಅಪಾಯಗಳು ಯಾವುವು?
ಆಪ್ ಸ್ಟೋರ್ ಅಥವಾ ಪ್ಲೇ ಸ್ಟೋರ್ ಅಲ್ಲದೆ ಬೇರೆ ಯಾವುದೇ ಮೂಲದಿಂದ ನಿಮ್ಮ ಸಾಧನದಲ್ಲಿ ನೇರವಾಗಿ ಯಾವುದೇ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಡಿ. ನೀವು ಸೈಬರ್ ಸ್ಮಾರ್ಟ್ ಆಗಿರಬೇಕು . ನೀವು ಯಾವುದೇ ಅಪ್ಲಿಕೇಶನ್ ಅಥವಾ ಟೂಲ್ ಅನ್ನು ಇನ್ ಸ್ಟಾಲ್ ಮಾಡುವ ಮೊದಲು ಮೂರು ವಿಷಯಗಳನ್ನು ಪರಿಶೀಲಿಸಿ: ಡೆವಲಪರ್, ರಿವ್ಯೂ ಮತ್ತು ಅನುಮತಿಗಳು. ಇತ್ತೀಚೆಗೆ, ‘Insta Loan’ ಅಪ್ಲಿಕೇಶನ್‌ಗಳ ಅಲೆ ಇತ್ತು. ಇವುಗಳಲ್ಲಿ ಹೆಚ್ಚಿನವು ಚೈನೀಸ್ ಆಗಿದ್ದವು ಮತ್ತು ಯಾವುದೇ ದಾಖಲಾತಿಗಳಿಲ್ಲದೆ ತಕ್ಷಣವೇ ನಿಮಗೆ ಸಾಲದ ಭರವಸೆ ನೀಡಲಾಯಿತು. ಆದರೆ ಈ ಸಾಲಗಳು ಭಾರೀ ಬಡ್ಡಿಯದ್ದಾಗಿತ್ತು. ಹೀಗೆ ಸಾಲ ಪಡೆದುಕೊಂಡ ಜನರು ಮರುಪಾವತಿಸಲು ಸಾಧ್ಯವಾಗದಿದ್ದಾಗ ಸುಲಿಗೆಗೆ ಕಾರಣವಾಯಿತು. ಇನ್ನು ಕೆಟ್ಟ ಸಂಗತಿ ಎಂದರೆ ಈ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ಗಳಲ್ಲಿ ಡೇಟಾವನ್ನು ಪ್ರವೇಶಿಸಬಹುದು ಮತ್ತು ನಿಮ್ಮ ಸಂಪರ್ಕ ಪಟ್ಟಿ ಮತ್ತು ಫೋಟೋಗಳನ್ನು ಕಾಪಿ ಮಾಡಬಹುದು.
ಜನರು ಡೆವಲಪರ್ ಮಾಹಿತಿಯನ್ನು ಪರಿಶೀಲಿಸಿದ್ದರೆ, ಅಪ್ಲಿಕೇಶನ್‌ಗಳು ವಿಶ್ವಾಸಾರ್ಹವಲ್ಲ ಎಂದು ಅವರು ಅರಿತುಕೊಳ್ಳುತ್ತಾರೆ. ಮತ್ತೊಂದು ಪ್ರಮುಖ ವಿಷಯವೆಂದರೆ ಎಲ್ಲಾ ಸಾಧನಗಳಲ್ಲಿ ಪೇರೆಂಟಲ್ ಕಂಟ್ರೋಲ್ ಹೊಂದಿರುವುದು. ಇದು ಅನುಚಿತ ಹುಡುಕಾಟ ಪದಗಳು ಅಥವಾ ವಿಷಯವನ್ನು ಫಿಲ್ಟರ್ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಈ ಮೂಲಕ ನಿಮ್ಮ ಮಕ್ಕಳು ಕೆಲವು ವಿಷಯಗಳಿಗೆ ಪ್ರವೇಶವನ್ನು ನಿಯಂತ್ರಿಸುತ್ತದೆ. ಕಳೆದ ವರ್ಷ, ಮುಂಬೈನಲ್ಲಿ 16 ವರ್ಷದ ಹುಡುಗನೊಬ್ಬ PUBG ಆಡಲು ತನ್ನ ತಾಯಿಯ ಬ್ಯಾಂಕ್ ಖಾತೆಯಿಂದ 10 ಲಕ್ಷ ರೂ ವ್ಯಯಿಸಿದ್ದ. ಅದೇ ಸಮಯದಲ್ಲಿ ಮಧ್ಯ ಪ್ರದೇಶದ ಛತ್ತರ್‌ಪುರದಲ್ಲಿ 13 ವರ್ಷದ ಬಾಲಕ ತನ್ನ ಪೋಷಕರ ಹಣವಾದ ರೂ.40,000 ಆನ್‌ಲೈನ್ ಗೇಮ್‌ಗೆ ಖರ್ಚು ಮಾಡಿದ ನಂತರ ನೇಣಿಗೆ ಶರಣಾಗಿದ್ದಾನೆ . ಪೋಷಕರು ವಿಷಯ ನಿಯಂತ್ರಣವನ್ನು ಹೊಂದಿರಬೇಕು ಮತ್ತು ಮಕ್ಕಳಿಗೆ ಅವರ ಡಿಜಿಟಲ್ ಫೂಟ್ ಪ್ರಿಂಟ್ ಬಗ್ಗೆ ಶಿಕ್ಷಣ ನೀಡಬೇಕು.
ನಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಪರಿಶೀಲಿಸದೆಯೇ ನಾವು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಾಹಿತಿ ಶೇರ್ ಮಾಡುತ್ತಿದ್ದೇವೆ. ಅನುಚಿತವಾದ ವಿಡಿಯೊ ಥಂಬ್‌ನೇಲ್ ಅನ್ನು ರಚಿಸಲು ಯಾರಾದರೂ ನಿಮ್ಮ ಫೋಟೋವನ್ನು ಮಾರ್ಫ್ ಮಾಡಬಹುದು.” Oh my God, how did your video get leaked?” ಎಂದು ಹೇಳಲು ನಿಮಗೆ ಕರೆ ಮಾಡಬಹುದು. ಭಯದಲ್ಲಿ, ನೀವು ಥಂಬ್‌ನೇಲ್ ಅನ್ನು ಕ್ಲಿಕ್ ಮಾಡುತ್ತೀರಿ, ಅದು ನಿಮ್ಮನ್ನು ಫೇಸ್‌ಬುಕ್ ಲಾಗಿನ್ ಪುಟದಂತೆಯೇ ಕಾಣುವ ಪುಟಕ್ಕೆ ಕರೆದೊಯ್ಯುತ್ತದೆ. ಅಲ್ಲಿ ಅದು ನಿಮ್ಮ ಇಮೇಲ್ ಮತ್ತು ನಿಮ್ಮ ಪಾಸ್‌ವರ್ಡ್ ಅನ್ನು ಕೇಳುತ್ತದೆ. ನೀವು ಗಲಿಬಿಲಿಗೊಂಡಿರುವ ಹೊತ್ತಲ್ಲಿ, ನೀವು ಸಣ್ಣ ವಿವರಗಳಿಗೆ ಗಮನ ಕೊಡದಿರಬಹುದು. ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯಿಂದ ನಿಮ್ಮನ್ನು ಲಾಕ್ ಮಾಡಲು ಹ್ಯಾಕರ್ ಈ ಮಾಹಿತಿಯನ್ನು ಬಳಸುತ್ತಾರೆ. ತಕ್ಷಣವೇ ಅವರು ನಿಮ್ಮ ಸ್ನೇಹಿತರಿಗೆ ಸಂದೇಶ ಕಳುಹಿಸಿ ಹಣ ಕೇಳಲು ಶುರು ಮಾಡುತ್ತಾರೆ.
ಮತ್ತೊಂದು ಭಯಾನಕ ಸಂಗತಿಯೆಂದರೆ ಗೂಗಲ್ ಪಾಯಿಸನಿಂಗ್. ನೀವು ಸರ್ಚ್ ಇಂಜಿನ್‌ನಲ್ಲಿ ಏನನ್ನಾದರೂ ಹುಡುಕಲು ಪ್ರಯತ್ನಿಸಿದಾಗ ಇದು ಸಂಭವಿಸುತ್ತದೆ. ಹ್ಯಾಕರ್‌ಗಳು, ‘ಬ್ಲಾಕ್ ಹ್ಯಾಟ್ ಎಸ್‌ಇಒ’ ಎಂಬುದರ ಮೂಲಕ ಹುಡುಕಾಟ ಫಲಿತಾಂಶಗಳ ಮೇಲ್ಭಾಗದಲ್ಲಿ ತಮ್ಮದೇ ಆದ ನಕಲಿ ವೆಬ್‌ಸೈಟ್ ಅನ್ನು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ, ನೀವು ಪಡೆಯುವ ಮೊದಲ ಫಲಿತಾಂಶವು ನಿಜವಾದ ಫಲಿತಾಂಶವಾಗಿರುವುದು ಅನಿವಾರ್ಯವಲ್ಲ. ಇಲ್ಲಿ ಕ್ಲಿಕ್ ಮಾಡಿದಾಗ ನಿಮ್ಮನ್ನು ಯಾವುದೇ ಅಪ್ಲಿಕೇಶನ್ ಅಥವಾ ಟೂವಲ್ ಡೌನ್‌ಲೋಡ್ ಮಾಡಲು ಕೇಳಿದರೆ, ಅನುಮಾನದಿಂದಲೇ ನೋಡಿ.
ಡಿಜಿಟಲ್ ಜಗತ್ತಿನಲ್ಲಿ ಹೆಚ್ಚು ಸುರಕ್ಷಿತವಾಗಿರುವುದು ಹೇಗೆ ?
ಮೊದಲ ನೋಟದಲ್ಲಿ ಇಂಟರ್ನೆಟ್‌ನಲ್ಲಿರುವ ಎಲ್ಲವನ್ನೂ ನಂಬಬೇಡಿ. ನೀವೇ ಸ್ವಲ್ಪ ಪತ್ತೇದಾರಿ ಕೆಲಸ ಮಾಡಬೇಕು. ನಕಲಿ ಪ್ರೊಫೈಲ್ ಮಾಡುವುದು ಸುಲಭ ಆದ್ದರಿಂದ ನೀವು ಮೂಲ OSINT ಅಥವಾ ‘ಓಪನ್ ಸೋರ್ಸ್ ಇಂಟೆಲಿಜೆನ್ಸ್’ ಅನ್ನು ಹೇಗೆ ಬಳಸಬೇಕೆಂದು ತಿಳಿಯಬೇಕು. ಉದಾಹರಣೆಗೆ, ನೀವು ಮ್ಯಾಟ್ರಿಮೋನಿಯಲ್ ಅಥವಾ ಡೇಟಿಂಗ್ ಪ್ರೊಫೈಲ್ ಅನ್ನು ನೋಡಿದಾಗ, ರಿವರ್ಸ್ ಇಮೇಜ್ ಸರ್ಚ್ ಮಾಡುವ ಮೂಲಕ ಆ ವ್ಯಕ್ತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸಿ. ನೀವು ಫೋಟೋವನ್ನು ಅಪ್‌ಲೋಡ್ ಮಾಡಬಹುದು ಅಥವಾ ಸರ್ಚ್ ಇಂಜಿನ್‌ನಲ್ಲಿ ಚಿತ್ರದ URL ಅನ್ನು ಇನ್‌ಪುಟ್ ಮಾಡಬಹುದು, ಉದಾಹರಣೆಗೆ www.google.com/imghp, yandex.com/images/, ಅಥವಾ www.bing.com/visualsearch ನಲ್ಲಿ ಸರ್ಚ್ ಮಾಡಿದರೆ ಅದಕ್ಕೆ ಸಂಬಂಧಿಸಿದ ಚಿತ್ರಗಳು ಅಥವಾ ವ್ಯಕ್ತಿಯ ಚಿತ್ರಗಳು ಕಾಣಿಸಿಕೊಳ್ಳುತ್ತವೆ.
ಸೈಬರ್ ಅಪರಾಧದ ಸಂತ್ರಸ್ತರು ಏನು ಮಾಡಬೇಕು
ಸೈಬರ್ ಅಪರಾಧದ ಸಂತ್ರಸ್ತರು https://www.cybercrime.gov.in/ ನಲ್ಲಿ ದೂರನ್ನು ನೋಂದಾಯಿಸಬಹುದು ಅಥವಾ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಬಹುದು. ಸರ್ಕಾರವು ಬ್ಯಾಂಕ್ ನೋಡಲ್ ಅಧಿಕಾರಿಗಳೊಂದಿಗೆ ನೆಟ್‌ವರ್ಕ್ ಅನ್ನು ನಿರ್ಮಿಸುತ್ತಿದೆ ಮತ್ತು ಅನುಮಾನಾಸ್ಪದ ಖಾತೆಯ ಕುರಿತು ಯಾವುದೇ ಮಾಹಿತಿ ಇದ್ದಾಗ, ಅದನ್ನು ಸ್ಥಗಿತಗೊಳಿಸಲಾಗುತ್ತದೆ . ಆದರೆ ಡಿಜಿಟಲ್ ಹಣವು ವೇಗವಾಗಿ ಚಲಿಸುತ್ತದೆ ಮತ್ತು ಹ್ಯಾಕರ್ ಈಗಾಗಲೇ ಹಣವನ್ನು ವರ್ಗಾಯಿಸಿರಬಹುದು ಎಂಬುದನ್ನು ನೆನಪಿನಲ್ಲಿಡಿ. ಅಲ್ಲದೆ, ಹ್ಯಾಕರ್‌ಗಳು ಸಾಮಾನ್ಯವಾಗಿ ನಕಲಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗಳನ್ನು ಬಳಸಿಕೊಂಡು ಡಮ್ಮಿ ಖಾತೆಗಳನ್ನು ರಚಿಸುತ್ತಾರೆ, ಅದನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ.
ಲೇಖಕರು: ಡಾ. ರಕ್ಷಿತ್ ಟಂಡನ್, ಹ್ಯಾಕರ್ ಶಾಲಾ ನಿರ್ದೇಶಕ, ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾದ ಸಲಹೆಗಾರ
(Source)
Published On - 7:52 pm, Tue, 6 September 22