ಕಾಗಿಣಾ ನದಿಯಲ್ಲಿ ವೃದ್ಧ ದಂಪತಿ ಶವ ಪತ್ತೆ; ಜೂಜು ಅಡ್ಡೆ ಮೇಲೆ ದಾಳಿ 23 ಜನರ ಬಂಧನ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಟ್ಟೂರು ಬಳಿ ಕಾಗಿಣಾ ನದಿಯಲ್ಲಿ ದಂಪತಿ ಶವ ಪತ್ತೆಯಾಗಿದೆ.

ಕಾಗಿಣಾ ನದಿಯಲ್ಲಿ ವೃದ್ಧ ದಂಪತಿ ಶವ ಪತ್ತೆ; ಜೂಜು ಅಡ್ಡೆ ಮೇಲೆ ದಾಳಿ 23 ಜನರ ಬಂಧನ
ಸಾಂಕೇತಿಕ ಚಿತ್ರ
TV9kannada Web Team

| Edited By: Vivek Biradar

Jul 27, 2022 | 6:03 PM

ಕಲಬುರಗಿ: ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ (Chincholi) ತಾಲೂಕಿನ ಜಟ್ಟೂರು ಬಳಿ ಕಾಗಿಣಾ (Kagina River) ನದಿಯಲ್ಲಿ ದಂಪತಿ ಶವ ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನ ಕಾಗಿಣಾ ನದಿಯಲ್ಲಿ ದಂಪತಿ ಶವ ತೇಲಿಕೊಂಡು ಬಂದಿದ್ದವು. ಪೊಲೀಸರು ಮೃತ ದಂಪತಿ ಗುರುತು ಪತ್ತೆ ಮಾಡಿದ್ದು, ಬುಗ್ಗಪ್ಪ(60) ಯಾದಮ್ಮ ಬುಗ್ಗಪ್ಪ(55) ಮೃತ ದಂಪತಿ ಎಂದು ತಿಳಿದು ಬಂದಿದೆ. ಮೃತರು ತೆಲಂಗಾಣ (Telangana) ರಾಜ್ಯದ ಮೆಂತಟ್ಟಿ ಗ್ರಾಮದ ನಿವಾಸಿಗಳಾಗಿದ್ದಾರೆ.

ಬಸೀರಾಬಾದ್​ಗೆ ತರಕಾರಿ ಮಾರಾಟ ಮಾಡಲು ಹೋದಾಗ ಕಾಗಿಣಾ ನದಿ ಪ್ರವಾಹದಲ್ಲಿ ಎರಡು ದಿನದ ಹಿಂದೆ ಪಾಲಾಗಿದ್ದರು. ಮೃತರ ಶವಗಳನ್ನು ಮೃತ ದಂಪತಿ ಪುತ್ರ ಗುರುತಿಸಿದ್ದಾರೆ.  ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜು ಅಡ್ಡೆ ಮೇಲೆ ದಾಳಿ 23 ಜನರ ಬಂಧನ

ಹಾಸನ: ಹಾಸನ ಜಿಲ್ಲೆಯ ಮೂರು ಕಡೆ ಜೂಜು ಅಡ್ಡೆಗಳ ಮೇಲೆ ಆಲೂರು, ಚನ್ನರಾಯಪಟ್ಟಣ, ಗೊರೂರು ಪೊಲೀಸರು ಪ್ರತ್ಯೇಕ ದಾಳಿ ಮಾಡಿದ್ದಾರೆ. ದಾಳಿಯಲ್ಲಿ 27 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆಲೂರಿ ತಾಲ್ಲೂಕಿನ ಸಿಂಗೋಡನಹಳ್ಳಿಯಲ್ಲಿ ದಾಳಿ ನಡೆಸಿ 9 ಜನರ ಬಂಧಿಸಿದ್ದು, 56,200. ರೂ ವಶಕ್ಕೆ ಪಡೆದಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನಡೆದ ದಾಳಿಯಲ್ಲಿ 21430 ರೂ ವಶಕ್ಕೆ ಪಡೆದು,  9 ಜನ ಆರೋಪಿಗಳನ್ನು ಪೊಲೀಸರು ಬಂಧಸಿದ್ದಾರೆ. ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಾಳಿಯಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದು, 8150 ರೂ, ಐದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಒಟ್ಟು ಮೂರು ಕಡೆ ನಡೆದ ದಾಳಿಯಲ್ಲಿ 89,900 ನಗದು, 27 ಆರೋಪಿಗಳು, ನಾಲ್ಕು ಬೈಕ್, ಐದು ಮೊಬೈಲ್​​ಗಳನ್ನು ವಶಕ್ಕೆ ಪಡೆಯಲಾಗಿದೆ. ಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಜೂಜು ಅಡ್ಡೆಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ.

ನಟೋರಿಯಸ್ ಚೈನ್ ಕಳ್ಳರ ಬಂಧನ

ಚಿಕ್ಕಬಳ್ಳಾಪುರ:  ಚಿಕ್ಕಬಳ್ಳಾಪುರ ಪೊಲೀಸರು ಮೂವರು ನಟೋರಿಯಸ್ ಚೈನ್ ಕಳ್ಳರನ್ನು ಬಂಧಿಸಿದ್ದಾರೆ. ನೆಲಮಂಗಲ ಮೂಲದ ಇಮ್ರಾನ್ ಅಲಿಯಾಸ್ ಬೋಡ್ಕಿ, ಸಿಕಂದರ್ ಹಾಗೂ ಜೆ.ಜೆ. ನಗರದ ಶಬರೀಶ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಜೈಲಿನಿಂದ ಇತ್ತಿಚಿಗೆ ಬಿಡುಗಡೆಯಾಗಿ ಮತ್ತೆ ಮತ್ತೆ ಚೈನ್ ಕಳ್ಳತನ ಮಾಡುತ್ತಿದ್ದರು.

ಆರೋಪಿಗಳು ಬೇರೆ ಬೇರೆ ಪ್ರದೇಶದಲ್ಲಿ ಕಳತನ ಮಾಡಿದ್ದು, ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲುನಲ್ಲಿ ಕಳ್ಳತನ ಮಾಡಿದ್ದರು. ಚಿಕ್ಕಕಾಡಿಗೇನಹಳ್ಳಿ ಗ್ರಾಮದ ನಿವಾಸಿ ವೆಂಕಲಕ್ಷ್ಮಮ್ಮನವರ ಸರ ಕಿತ್ತುಕೊಂಡು ಪರಾರಿಯಾಗಿದ್ದರು. 60 ಗ್ರಾಮ್ ತೂಕದ ಲಕ್ಷಾಂತರ ರೂಪಾಯಿ ಮೌಲ್ಯದ ಸರ ಕಳ್ಳತನ ಮಾಡಿದ್ದರು.

ಬಂಧಿತ ಆರೋಪಿಗಳು ಚಿಂತಾಮಣಿ, ದೇನಹಳ್ಳಿ, ಶಿಡ್ಲಘಟ್ಟ ಸೇರಿದಂತೆ ಬೆಂಗಳೂರಿನಲ್ಲಿ ಚೈನ್ ಕಳ್ಳತನ ಮಾಡಿರುವ ಮಾಹಿತಿ ಪೊಲೀಸರಿಗೆ ದೊರೆತಿದೆ. ಬೆಂಗಳೂರಿನಲ್ಲಿ ಬಂಧಿತ ಆರೋಪಿಗಳ ಮೇಲೆ ಪೈರಿಂಗ್ ಮಾಡಲಾಗಿತ್ತು. ಈ ಹಿಂದೆ ಬೋಡ್ಕಿ ಹಾಗೂ ಶಬರೀಶ ಮೇಲೆ ಪೈರಿಂಗ್ ಮಾಡಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಜೈಲಿನಿಂದ ಹೊರ ಬಂದ ಮೇಲೆ ಆರೋಪಿಗಳು ಮತ್ತೆ ಚೈನ ಕಳ್ಳತನ ಮಾಡುತ್ತಿದ್ದರು. ಆರೋಪಿಗಳು ಮೋಜು ಮಸ್ತಿಗಾಗಿ ಚೈನ್ ಕಳ್ಳತನ ಮಾಡುತ್ತಿದ್ದರು. ಗ್ಯಾಂಗ್ ರೇಪ್ ಪ್ರಕರಣವೊಂದರಲ್ಲಿ ಆರೋಪಿಗಳು ಜೈಲಿಗೆ ಹೋಗಿ ಬಂದಿರುವ ಬಗ್ಗೆ ಮಾಹಿತಿ ದೊರೆತಿದೆ.

ಬೈಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ

ದಾವಣಗೆರೆ: ಟಿಪ್ಪರ್ ಲಾರಿಯೊಂದು ಬೈಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಕಾಲು ಮುರಿದಿರುವ ಘಟನೆ ದಾವಣಗೆರೆಯ ಪಿಬಿ ರಸ್ತೆಯ ರಾಜನಹಳ್ಳಿ ಕಲ್ಯಾಣ ಮಂಟಪದ ಎದುರು ನಡೆದಿದೆ. ಅಪಘಾತವಾಗುತ್ತಿದ್ದಂತೆ ಟಿಪ್ಪರ್ ಲಾರಿ ಚಾಲಕನಿಗೆ  ಸ್ಥಳಿಯರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಗಾಯಾಳುವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಟಿಪ್ಪರ್ ಲಾರಿ ಚಾಲಕನನ್ನು  ವಶಕ್ಕೆ ಪಡೆದಿದ್ದಾರೆ. ದಾವಣಗೆರೆಯ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್​ಗೆ ಬೊಲೆರೋ ಗೂಡ್ಸ್ ವಾಹನ ಡಿಕ್ಕಿ; ತಾಯಿ ಮತ್ತು ಮಗ ಸ್ಥಳದಲ್ಲೇ ಸಾವು

ಹಾವೇರಿ: ಬೈಕ್​​ಗೆ ಬೊಲೆರೋ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವರ್ದಿ ಕ್ರಾಸ್​ನಲ್ಲಿ ನಡೆದಿದೆ. ತಾಯಿ ಕಮಲವ್ವ ದೇವಗಿರಿ (60) ಮಗ ರುದ್ರಪ್ಪ ದೇವಗಿರಿ (35) ಮೃತ ದುರ್ದೈವಿಗಳು.

ಮೃತರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹರವಿ ಗ್ರಾಮದವರಾಗಿದ್ದು, ಹಾವೇರಿ ಕಡೆಯಿಂದ ಹರವಿ ಗ್ರಾಮಕ್ಕೆ ಹೊರಟಿದ್ದ ವೇಳೆ, ಹಾನಗಲ್ ಕಡೆಯಿಂದ ಬರುತ್ತಿದ್ದ ಬೊಲೆರೋ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದ್ದರಿಂದ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಆಡೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Follow us on

Related Stories

Most Read Stories

Click on your DTH Provider to Add TV9 Kannada