ಬೆಂಗಳೂರು: ನಗರದಲ್ಲಿ ಖಾಕಿ ಪಡೆಯ ಡ್ರಗ್ಸ್ ಜಾಲದ ಬೇಟೆ ಮುಂದುವರೆದಿದೆ. ಇತ್ತೀಚೆಗೆ ಹೆಚ್ಚುತ್ತಿರುವ ಡ್ರಗ್ಸ್ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪೊಲಿಸ್ ಪಡೆ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಅದರ ಪರಿಣಾಮವಾಗಿ ದಿನವೂ ನಗರದಲ್ಲಿ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಪೊಲೀಸರು ಮಾದಕ ವಸ್ತುಗಳ ಸಮೇತ ಆರೋಪಿಗಳನ್ನು ಸೆರೆಹಿಡಿಯುತ್ತಿದ್ದಾರೆ. ಇದೇ ಮಾದರಿಯಲ್ಲಿ ಇಂದು ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಐಷಾರಾಮಿ ಜೀವನಕ್ಕಾಗಿ ಅಡ್ಡದಾರಿ ಹಿಡಿದಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಡ್ರಗ್ಸ್ ತರಿಸಿ ವಿದ್ಯಾರ್ಥಿಗಳು ಮಾರಾಟ ಮಾಡುತ್ತಿದ್ದರು. ವಿದ್ಯಾರ್ಥಿಗಳು ಕೇರಳ ಮೂಲದವರಾಗಿದ್ದು, ಅವರನ್ನು ಮೊಹಮ್ಮದ್ ಇರ್ಫಾನ್ ಹಾಗೂ ಥಾರಿ ಅಜೀಮ್ ಎಂದು ಗುರುತಿಸಲಾಗಿದೆ. ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ನಡೆಸಿದ ಈ ಕಾರ್ಯಾಚರಣೆಯಲ್ಲಿ ವಿದ್ಯಾರ್ಥಿಗಳಿಂದ 2 ಕೋಟಿ ರೂ. ಮೌಲ್ಯದ 4 ಕೆಜಿ ಹಾಷಿಷ್ ಆಯಿಲ್(ಒಂದು ಮಾದರಿಯ ಮಾದಕ ದ್ರವ್ಯ) ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಟೆಕ್ಕಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರು ನಗರದ ಆಗ್ನೇಯದ ಮೈಕೊ ಲೇಔಟ್ ಉಪ ವಿಭಾಗದ ಪೊಲೀಸರು ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಆರೋಪಿಗಳಾದ ಮೊಹಮ್ಮದ್ ಇರ್ಫಾನ್ 24 ಹಾಗೂ ಥಾರಿ ಅಜೀಮ್ 26 ವರ್ಷದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ 11 ಜನ ವಿದ್ಯಾರ್ಥಿಗಳ ಬಂಧನ; ಉತ್ತರ ವಿಭಾಗದ ಪೊಲೀಸರಿಂದ ವಿಚಾರಣೆ
(Police seized 4kg hash oil worth 2Cr in Bengaluru)