ರಾಯ್ ಬರೇಲಿ ಬಿಜೆಪಿ ಟಿಕೆಟ್ ಆಫರ್ ತಿರಸ್ಕರಿಸಿದ ವರುಣ್ ಗಾಂಧಿ; ಅಕ್ಕನ ವಿರುದ್ಧ ನಿಲ್ಲಲು ಹಿಂದೇಟು ಹಾಕಿದರೆ ವರುಣ್?
Varun Gandhi decides not to contest from Rae Bareli: ಉತ್ತರಪ್ರದೇಶದ ಏಕೈಕ ಕಾಂಗ್ರೆಸ್ ಭದ್ರಕೋಟೆಯನ್ನು ಕಬಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ, ಈ ಬಾರಿ ವರುಣ್ ಗಾಂಧಿಗೆ ಟಿಕೆಟ್ ಕೊಡಲು ಯೋಜಿಸಿತ್ತು. ಆದರೆ, ಇಂದಿರಾ ಗಾಂಧಿ ಮೊಮ್ಮಗನಾದ ವರುಣ್ ಗಾಂಧಿ ಈ ಟಿಕೆಟ್ ಆಫರ್ ತಿರಸ್ಕರಿಸಿದ್ದಾರೆ. ಒಂದು ವಾರ ಕಾಲ ಈ ಬಗ್ಗೆ ಯೋಚಿಸಿ ಬಳಿಕ ಟಿಕೆಟ್ ತಿರಸ್ಕರಿಸುವ ನಿರ್ಧಾರಕ್ಕೆ ವರುಣ್ ಗಾಂಧಿ ಬಂದಿದ್ದಾರೆ. ಸೋನಿಯಾ ಗಾಂಧಿ ಈ ಬಾರಿ ರಾಯ್ ಬರೇಲಿಯಲ್ಲಿ ಸ್ಪರ್ಧಿಸುತ್ತಿಲ್ಲ. ಪ್ರಿಯಾಂಕಾ ಗಾಂಧಿಯನ್ನು ಕಾಂಗ್ರೆಸ್ ಕಣಕ್ಕಿಳಿಸಬಹುದು ಎನ್ನಲಾಗುತ್ತಿದೆ. ಹೀಗಾಗಿ, ಅವರ ಎದುರಾಗಿ ವರುಣ್ ಗಾಂಧಿ ಸರಿಯಾದ ಪ್ರತಿಸ್ಪರ್ಧಿ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿತ್ತು.
ನವದೆಹಲಿ, ಏಪ್ರಿಲ್ 26: ಉತ್ತರಪ್ರದೇಶದಲ್ಲಿ ಬಾಕಿ ಉಳಿದಿರುವ ಏಕೈಕ ಕಾಂಗ್ರೆಸ್ ಭದ್ರಕೋಟೆ ಒಂದೆನಿಸಿದ ರಾಯ್ ಬರೇಲಿಯಲ್ಲಿ (Rae Bareli) ಸ್ಪರ್ಧಿಸಲು ಬಿಜೆಪಿ ಕೊಟ್ಟಿರುವ ಟಿಕೆಟ್ ಆಫರ್ ಅನ್ನು ವರುಣ್ ಗಾಂಧಿ (Varun Gandhi) ತಿರಸ್ಕರಿಸಿದ್ದಾರೆ. ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಈ ಬಾರಿ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯಬಹುದು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅದೇ ಕುಟುಂಬಕ್ಕೆ ಸೇರಿದ ವರುಣ್ ಗಾಂಧಿಯನ್ನು ಕಣಕ್ಕಿಳಿಸಿ ರಾಯ್ ಬರೇಲಿಯನ್ನು ವಶಕ್ಕೆ ಪಡೆಯುವ ಪ್ಲಾನ್ ಬಿಜೆಪಿಯದ್ದಾಗಿದೆ. ವಾರದ ಹಿಂದೆಯೇ ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ಆಫರ್ ಕೊಟ್ಟಿತ್ತು. ಅಂತಿಮವಾಗಿ ವರುಣ್ ಗಾಂಧಿ ಈ ಆಫರ್ ಅನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ.
ವರುಣ್ ಗಾಂಧಿ ಅವರು ಇಂದಿರಾ ಗಾಂಧಿಯವರ ಎರಡನೇ ಮಗ ಸಂಜಯ್ ಗಾಂಧಿಯ ಮಗ. ಮೇನಕಾ ಗಾಂಧಿ ಇವರ ತಾಯಿ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ಇವರು ಚಿಕ್ಕಪ್ಪನ ಮಗನ. 44 ವರ್ಷದ ವರುಣ್ ಗಾಂಧಿ ಪಿಲಿಭಿಟ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಗೆದ್ದು ಸಂಸದರಾಗಿದ್ದರು. ಈ ಬಾರಿ ಅವರಿಗೆ ಆ ಕ್ಷೇತ್ರದ ಟಿಕೆಟ್ ಸಿಕ್ಕಿಲ್ಲ. ಇದಾದ ಬಳಿಕ ಬಿಜೆಪಿಯು ರಾಯ್ ಬರೇಲಿಯಲ್ಲಿ ವರುಣ್ ಗಾಂಧಿಯನ್ನು ಕಣಕ್ಕಿಳಿಸುವ ಪ್ಲಾನ್ ಮಾಡಿತು ಎನ್ನಲಾಗಿದೆ.
ಇದನ್ನೂ ಓದಿ: ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನಲ್ಲಿ ಮೊದಲು ಹಕ್ಕು, ಮೋದಿ ಹೇಳಿದ್ದು ಸತ್ಯ, ಸಾಕ್ಷ್ಯ ಕೊಟ್ಟ ಬಿಜೆಪಿ
ಟಿಕೆಟ್ ಯಾಕೆ ಬೇಡ ಎಂದರು ವರುಣ್?
ಮೂಲಗಳ ಪ್ರಕಾರ ರಾಯ್ ಬರೇಲಿಯಿಂದ ತಾನು ಸ್ಪರ್ಧಿಸಿದರೆ ಕೌಟುಂಬಿಕ ಕಲಹದಂತಾಗುತ್ತದೆ. ಈ ರಾಡಿಯೇ ಬೇಡ ಎಂದು ವರುಣ್ ಗಾಂಧಿ ಈ ಕ್ಷೇತ್ರದ ಟಿಕೆಟ್ ನಿರಾಕರಿಸಲು ಕಾರಣ ಎನ್ನಲಾಗಿದೆ. 1984ರ ಚುನಾವಣೆಯಲ್ಲಿ ರಾಜೀವ್ ಗಾಂಧಿ ವಿರುದ್ಧ ವರುಣ್ ಗಾಂಧಿ ತಾಯಿ ಮೇನಕಾ ಗಾಂಧಿ ಸ್ಪರ್ಧಿಸಿ ಸೋತಿದ್ದರು. ಈ ಹಿನ್ನೆಲೆಯಲ್ಲಿ ಅಮ್ಮನಂತೆ ವರುಣ್ ಕೂಡ ಸ್ಪರ್ಧಿಸಲು ಯತ್ನಿಸಬಹುದು ಎಂಬುದು ಬಿಜೆಪಿಗೆ ತುಸು ವಿಶ್ವಾಸ ಇತ್ತು. ಅಲ್ಲದೇ, 1984ರಲ್ಲಿ ಇದ್ದಂತಹ ಸ್ಥಿತಿ ಈಗ ಇಲ್ಲ. ಆಗ ಕಾಂಗ್ರೆಸ್ ಅಲೆ ಇತ್ತು. ಈಗ ಮೋದಿ ಅಲೆ ಇದೆ. ಹೀಗಾಗಿ, ರಾಯ್ ಬರೇಲಿಯಲ್ಲಿ ವರುಣ್ ಗಾಂಧಿ ಗೆಲ್ಲಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿತ್ತು.
ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ 2019ರ ಚುನಾವಣೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ಪ್ರಿಯಾಂಕಾ ಗಾಂಧಿ ನಿಲ್ಲುವ ಸಾಧ್ಯತೆ ಇದೆ. 2019ರ ಚುನಾವಣೆಯಲ್ಲಿ ಮತ್ತೊಂದು ಕಾಂಗ್ರೆಸ್ ಭದ್ರಕೋಟೆ ಎನಿಸಿದ್ದ ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲನುಭವಿಸಿದ್ದರು. ಬಿಜೆಪಿಯ ಸ್ಮೃತಿ ಇರಾನಿ ಅಮೇಥಿಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ