UPSC Free Coaching: UPSC ಆಕಾಂಕ್ಷಿಗಳಿಗೆ ಗುಡ್ನ್ಯೂಸ್; ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳ ತಯಾರಿಗಾಗಿ ಉಚಿತ ವಸತಿ ಸಹಿತ ತರಬೇತಿ
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು 2027ರ ಯುಪಿಎಸ್‌ಸಿ ಪರೀಕ್ಷೆಗೆ ಉಚಿತ ವಸತಿ ಸಹಿತ ತರಬೇತಿ ನೀಡುತ್ತಿದೆ. ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಇದು ಸಂಪೂರ್ಣ ಉಚಿತ. ಬೆಂಗಳೂರು ಸೇರಿದಂತೆ 13 ನಗರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದ್ದು, ಹಾಸ್ಟೆಲ್, ಗ್ರಂಥಾಲಯ ಸೌಲಭ್ಯ ಲಭ್ಯ.

ನಾಗರಿಕ ಸೇವಾ ಪರೀಕ್ಷೆಗಳ (UPSC) ತಯಾರಿಯಲ್ಲಿ ತೊಡಗಿರುವ ಅಭ್ಯರ್ಥಿಗಳಿಗೆ ದೆಹಲಿಯ ಪ್ರತಿಷ್ಠಿತ ಜಾಮಿಯಾ ಮಿಲಿಯಾ ಇಸ್ಲಾಮಿಯಾ (JMI) ವಿಶ್ವವಿದ್ಯಾಲಯವು ಒಂದು ಅದ್ಭುತ ಅವಕಾಶವನ್ನು ಹೊತ್ತು ತಂದಿದೆ. 2027ರ ಯುಪಿಎಸ್‌ಸಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳ ತಯಾರಿಗಾಗಿ ಉಚಿತ ವಸತಿ ಸಹಿತ ತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕದ ಅಭ್ಯರ್ಥಿಗಳಿಗೆ ಗಮನಾರ್ಹ ಅಂಶ:
ಈ ತರಬೇತಿ ಕಾರ್ಯಕ್ರಮದ ಪ್ರವೇಶ ಪರೀಕ್ಷೆಯು ದೇಶದ ಪ್ರಮುಖ 13 ನಗರಗಳಲ್ಲಿ ನಡೆಯಲಿದ್ದು, ನಮ್ಮ ಬೆಂಗಳೂರಿನಲ್ಲಿಯೂ ಪರೀಕ್ಷಾ ಕೇಂದ್ರವಿರಲಿದೆ. ಇದರಿಂದಾಗಿ ಕರ್ನಾಟಕದ ವಿದ್ಯಾರ್ಥಿಗಳು ದೆಹಲಿ ಅಥವಾ ಇತರ ರಾಜ್ಯಗಳಿಗೆ ಪ್ರಯಾಣಿಸದೆ ಸುಲಭವಾಗಿ ಪರೀಕ್ಷೆ ಬರೆಯಬಹುದಾಗಿದೆ.
ಯಾರಿಗೆ ಈ ಸೌಲಭ್ಯ ಉಚಿತ?
ಈ ವಿಶೇಷ ತರಬೇತಿ ಕಾರ್ಯಕ್ರಮವು ಮುಖ್ಯವಾಗಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಂಪೂರ್ಣವಾಗಿ ಉಚಿತವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿಯ ಜೊತೆಗೆ ಹಾಸ್ಟೆಲ್ ಸೌಲಭ್ಯ ಮತ್ತು 24×7 ಕಾರ್ಯನಿರ್ವಹಿಸುವ ಸುಸಜ್ಜಿತ ಗ್ರಂಥಾಲಯದ ಸೌಲಭ್ಯವೂ ದೊರೆಯಲಿದೆ.
ಪ್ರಮುಖ ದಿನಾಂಕಗಳು:
ಒಂದು ವೇಳೆ ನೀವು ಈ ಅವಕಾಶವನ್ನು ಬಳಸಿಕೊಳ್ಳಲು ಬಯಸಿದರೆ, ಈ ಕೆಳಗಿನ ದಿನಾಂಕಗಳನ್ನು ಡೈರಿಯಲ್ಲಿ ನೋಟ್ ಮಾಡಿಕೊಳ್ಳಿ:
- ಅರ್ಜಿ ಸಲ್ಲಿಸಲು ಆರಂಭ: ಏಪ್ರಿಲ್ 1, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 26, 2026
- ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ: ಜೂನ್ 6, 2026
- ಅಂತಿಮ ಫಲಿತಾಂಶ ಪ್ರಕಟಣೆ: ಆಗಸ್ಟ್ 7, 2026
- ತರಗತಿಗಳ ಪ್ರಾರಂಭ: ಸೆಪ್ಟೆಂಬರ್ 1, 2026
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿ:
ಒಟ್ಟು 100 ಸೀಟುಗಳಿಗಾಗಿ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಪರೀಕ್ಷೆಯು ಯುಪಿಎಸ್‌ಸಿ ಮಾದರಿಯನ್ನೇ ಹೊಂದಿರುತ್ತದೆ.
- ಪತ್ರಿಕೆ-1 (ಸಾಮಾನ್ಯ ಅಧ್ಯಯನ): 60 ವಸ್ತುನಿಷ್ಠ (Objective) ಪ್ರಶ್ನೆಗಳಿರುತ್ತವೆ. ತಪ್ಪು ಉತ್ತರಕ್ಕೆ ನಕಾರಾತ್ಮಕ ಅಂಕಗಳಿರುತ್ತವೆ (1/3rd Negative Marking).
- ಪತ್ರಿಕೆ-2 (ಪ್ರಬಂಧ): ಇಲ್ಲಿ ಅಭ್ಯರ್ಥಿಗಳು ಎರಡು ಪ್ರಬಂಧಗಳನ್ನು ಬರೆಯಬೇಕು. ಮೊದಲ ಪತ್ರಿಕೆಯಲ್ಲಿ ಅಗ್ರ 900 ಸ್ಥಾನ ಪಡೆದವರ ಪ್ರಬಂಧಗಳನ್ನು ಮಾತ್ರ ಮೌಲ್ಯಮಾಪನ ಮಾಡಲಾಗುತ್ತದೆ.
- ಸಂದರ್ಶನ: ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ 30 ಅಂಕಗಳ ಸಂದರ್ಶನವಿರುತ್ತದೆ.
ಅಭ್ಯರ್ಥಿಗಳು ಇಂಗ್ಲಿಷ್, ಹಿಂದಿ ಅಥವಾ ಉರ್ದು ಈ ಮೂರರಲ್ಲಿ ತಮಗೆ ಇಷ್ಟವಾದ ಭಾಷೆಯಲ್ಲಿ ಪರೀಕ್ಷೆ ಬರೆಯುವ ಆಯ್ಕೆಯನ್ನು ಹೊಂದಿರುತ್ತಾರೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಅಧಿಕೃತ ಪ್ರವೇಶ ಪೋರ್ಟಲ್ admission.jmi.ac.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಉನ್ನತ ಮಟ್ಟದ ತರಬೇತಿ ಮತ್ತು ಉತ್ತಮ ಕಲಿಕಾ ಪರಿಸರವನ್ನು ಹೊಂದಿರುವ ಈ ಅಕಾಡೆಮಿಯು ದೇಶಕ್ಕೆ ಹಲವಾರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ನೀಡಿದ ಹೆಗ್ಗಳಿಕೆ ಹೊಂದಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
