ಯುವ ನಟ ವೀರ್ ಬಗ್ಗೆ ಟೀಕೆ ಮಾಡಿದ ಕಾಮಿಡಿಯನ್ ಮೇಲೆ ಹಲ್ಲೆ; 12 ಜನರ ವಿರುದ್ಧ ಕೇಸ್
ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪ್ರಣಿತ್ ಮೋರೆ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರನ್ನು ಬಂಧಿಸಲಾಗಿದೆ. ವೀರ್ ಪಹಾರಿಯಾ ಬಗ್ಗೆ ತಮಾಷೆ ಮಾಡಿದ್ದಕ್ಕಾಗಿ ಸೊಲ್ಲಾಪುರದಲ್ಲಿ ಫೆಬ್ರವರಿ 2 ರಂದು ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಪ್ರಣಿತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಆರೋಪಿಸಿದ್ದರು.

ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪ್ರಣಿತ್ ಮೋರೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 12 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ, ನಟ ವೀರ್ ಪಹಾರಿಯಾ ಬಗ್ಗೆ ತಮಾಷೆ ಮಾಡಿದ್ದಕ್ಕಾಗಿ ಫೆಬ್ರವರಿ 2 ರಂದು ಸೊಲ್ಲಾಪುರದಲ್ಲಿ ಪ್ರಣಿತ್ ಅವರನ್ನು ಥಳಿಸಲಾಗಿತ್ತು. ಈ ಘಟನೆಯ ನಂತರ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಣಿತ್ ಸಾಮಾಜಿಕ ಮಾಧ್ಯಮದಲ್ಲಿ ದೂರಿದ್ದರು.. ಕೊನೆಗೂ ಅವರ ಮೇಲೆ ಹಲ್ಲೆ ನಡೆಸಿದ ಹನ್ನೆರಡು ಜನರ ವಿರುದ್ಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಣಿತ್ ಅವರ ತಂಡವು ಇನ್‌ಸ್ಟಾಗ್ರಾಮ್‌ನಲ್ಲಿ ಇಡೀ ಘಟನೆಯನ್ನು ವಿವರಿಸುವ ಪೋಸ್ಟ್ ಅನ್ನು ಬರೆದಿದೆ. ‘ಪ್ರಣಿತ್ ಅವರ ಫೆಬ್ರವರಿ 2ರಂದು ಸೊಲ್ಲಾಪುರದ 24K ಕ್ರಾಫ್ಟ್ ಬ್ರೂಸ್‌ನಲ್ಲಿ ಕೊನೆಗೊಂಡಿತು. ನಂತರ ಅವರು ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮತ್ತು ಅವರನ್ನು ಭೇಟಿ ಮಾಡಲು ಎದ್ದು ನಿಂತರು. ಅಭಿಮಾನಿಗಳ ಗುಂಪು ಕಡಿಮೆಯಾದ ನಂತರ, ಅಭಿಮಾನಿಗಳ ವೇಷ ಧರಿಸಿದ 11 ರಿಂದ 12 ಜನರು ಪ್ರಣೀತ್ ಬಳಿಗೆ ಬಂದರು. ಅವರು ಪ್ರಣಿತ್‌ನನ್ನು ಹೊಡೆದು ಬೆದರಿಸಿದರು. ಅವರು ಪ್ರಣಿತ್‌ನನ್ನು ಒದ್ದರು. ತನ್ವೀರ್ ಶೇಖ್ ದಾಳಿಕೋರರ ನಾಯಕ. ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದ ವೀರ್ ಪಹಾರಿಯಾ ಬಗ್ಗೆ ತಮಾಷೆ ಮಾಡಿದ್ದಕ್ಕಾಗಿ ತಮ್ಮನ್ನು ಥಳಿಸಲಾಯಿತು’ ಎಂದು ಪ್ರಣಿತ್ ತಂಡ ಹೇಳಿದೆ.
‘ನೀನು ವೀರ್ ಪಹಾರಿಯಾ ಬಾಬಾ ಬಗ್ಗೆ ತಮಾಷೆ ಮಾಡುವುದನ್ನು ಮುಂದುವರಿಸಿದರೆ, ನೀನು ಇನ್ನೂ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಪ್ರಣಿತ್ ತಂಡಕ್ಕೆ ಎಚ್ಚರಿಕೆ ನಿಡಿ ಹೋಗಿದ್ದರು.
ಇದನ್ನೂ ಓದಿ: ಸಾರಾ ಜೊತೆ ಡೇಟ್ ಮಾಡಿದ್ದ ವೀರ್ ಪಹಾರಿಯಾ; ಆಗಬಾರದ್ದೇ ಆಗಿ ಹೋಯ್ತು
‘ಇನ್ನೂ ಆಘಾತಕಾರಿ ಸಂಗತಿಯೆಂದರೆ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಯಾವುದೇ ಭದ್ರತೆ ಇರಲಿಲ್ಲ. ಪದೇ ಪದೇ ವಿನಂತಿಸಿದರೂ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಲು ನಿರಾಕರಿಸುತ್ತಿದ್ದಾರೆ. ನಾವು ಪೊಲೀಸರಿಂದಲೂ ಸಹಾಯ ಕೇಳಿದೆವು. ಆದರೆ ಅವರೂ ಸಹಾಯ ಮಾಡಲಿಲ್ಲ’ ಎಂದು ತಂಡ ಆರೋಪಿಸಿತ್ತು. ಈಗ ಕೊನೆಗೂ ಅವರ ಬಂಧನ ಆಗಿದೆ.
ವೀರ್ ಪಹಾರಿಯಾ ಸ್ಪಷ್ಟನೆ
ಅಕ್ಷಯ್ ಕುಮಾರ್ ಅವರ ‘ಸ್ಕೈ ಫೋರ್ಸ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ವೀರ್ ಈ ಇಡೀ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಪ್ರಣಿತ್ ಅವರ ಮೇಲೆ ಆದ ಹಲ್ಲೆ ಆಘಾತ ತಂದಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಇದನ್ನು ನಾನು ಖಂಡಿಸುತ್ತೇನೆ. ನಾನು ಟ್ರೋಲ್ನ ಯಾವಾಗಲೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಅದನ್ನು ನೋಡಿ ನಗುತ್ತೇನೆ ಮತ್ತು ನನ್ನ ವಿರೋಧಿಗಳನ್ನು ಪ್ರೀತಿಯಿಂದ ನಡೆಸಿಕೊಳ್ಳುತ್ತೇನೆ. ಆದ್ದರಿಂದ, ನಾನು ಇಂತಹ ಘಟನೆಗಳನ್ನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ . ಅವರ ಬಳಿ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.