‘ವಿದಾಮುಯರ್ಚಿ’ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು? ಕಮಾಲ್ ಮಾಡಲಿಲ್ಲ ಅಜಿತ್ ಸಿನಿಮಾ
ಅಜಿತ್ ಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ ‘ವಿದಾಮುಯರ್ಚಿ’ ಫೆಬ್ರವರಿ 6 ರಂದು ಬಿಡುಗಡೆಯಾಗಿದ್ದು, ಮೊದಲ ದಿನ ಕೇವಲ 22 ಕೋಟಿ ರೂಪಾಯಿ ಗಳಿಕೆ ಮಾಡಿದೆ. 225-300 ಕೋಟಿ ರೂಪಾಯಿ ಬಜೆಟ್‌ನ ಚಿತ್ರ ಇದು. ಈ ಗಳಿಕೆ ನಿರೀಕ್ಷೆಗಿಂತ ಕಡಿಮೆ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ಸಿನಿಮಾ ಗೆಲುವು ಕಂಡಿದೆ ಅಥವಾ ಕಂಡಿಲ್ಲ ಎಂಬುದನ್ನು ಕಲೆಕ್ಷನ್ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಸಿನಿಮಾ ಮೊದಲ ದಿನ 10-20 ಕೋಟಿ ರೂಪಾಯಿ ಗಳಿಕೆ ಮಾಡಿದರೆ ಅದು ದೊಡ್ಡ ಕಲೆಕ್ಷನ್ ಅಲ್ಲ ಎಂಬ ರೀತಿಯ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಿರುವಾಗಲೇ ಅಜಿತ್ ನಟನೆಯ ಬಿಗ್ ಬಜೆಟ್ ಚಿತ್ರ ‘ವಿದಾಮುಯರ್ಚಿ’ ಫೆಬ್ರವರಿ 6ರಂದು ರಿಲೀಸ್ ಆಗಿದ್ದು, ಸಾಧಾರಣ ಗಳಿಕೆ ಮಾಡಿದೆ. ಸಿನಿಮಾಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಲೇಬೇಕಾದ ಅನಿವಾರ್ಯತೆ ಇದೆ.
‘ವಿದಾಮುಯರ್ಚಿ’ ಚಿತ್ರದಲ್ಲಿ ಅಜಿತ್ ಹಾಗೂ ತ್ರಿಷಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ 225-300 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿದೆ ಎಂದು ಊಹಿಸಲಾಗಿದೆ. ಅಂದರೆ ಈ ಚಿತ್ರ ದೊಡ್ಡ ಮಟ್ಟದಲ್ಲೇ ಕಲೆಕ್ಷನ್ ಮಾಡಬೇಕಿತ್ತು. ಮೊದಲ ದಿನ ಈ ಚಿತ್ರ 50 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಗಳಿಕೆ ಮಾಡಿದ್ದರೆ ನಿರ್ಮಾಪಕರ ಮೊಗದಲ್ಲಿ ನಗು ಮೂಡುತ್ತಿತ್ತು. ಆದರೆ, ಅಷ್ಟೊಂದು ದೊಡ್ಡ ಮಟ್ಟದ ಗಳಿಕೆಯನ್ನು ಸಿನಿಮಾ ಮಾಡಿಲ್ಲ.
‘ವಿದಾಮುಯರ್ಚಿ’ ಚಿತ್ರ ಮೊದಲ ದಿನ ಕೇವಲ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬುದಾಗಿ ವರದಿ ಆಗಿದೆ. 22 ಕೋಟಿ ರೂಪಾಯಿ ಎಂದರೆ ಅದು ದೊಡ್ಡ ಮೊತ್ತವೇ. ಆದರೆ, ಅಜಿತ್ ಅವರಿಗೆ ಇರೋ ಸ್ಟಾರ್ಡಂಗೆ ಇದು ಕಡಿಮೆಯೇ ಆಯಿತು ಎನ್ನಬಹುದು. ಈ ಚಿತ್ರ ಇನ್ನೂ ಹೆಚ್ಚಿನ ಗಳಿಕೆ ಮಾಡುವ ನಿರೀಕ್ಷೆ ಅಭಿಮಾನಿಗಳ ವಲಯದಲ್ಲಿ ಇತ್ತು.
ಇದನ್ನೂ ಓದಿ: ‘ಹೆಚ್ಚಿನದ್ದನ್ನು ನಿರೀಕ್ಷಿಸಲಾಗಿತ್ತು’; ಅಜಿತ್ ನಟನೆಯ ‘ವಿದಾಮುಯರ್ಚಿ’ ಸಿನಿಮಾ ನೋಡಿ ಫ್ಯಾನ್ಸ್ ಹೇಳಿದ್ದಿಷ್ಟು
‘ವಿದಾಮುಯರ್ಚಿ’ ಚಿತ್ರದಲ್ಲಿ ದೊಡ್ಡ ಪಾತ್ರವರ್ಗ ಇದೆ. ಅಜಿತ್, ತ್ರಿಷಾ, ಅರ್ಜುನ್ ಸರ್ಜಾ, ರೆಜಿನಾ ಕ್ಯಾಸಂಡ್ರಾ ಮೊದಲಾದವರು ನಟಿಸಿದ್ದಾರೆ. ಮಗಿಳ್ ತಿರುಮನೇನಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ಸುಭಾಸ್ಕರನ್ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ಬುಕ್ ಮೈ ಶೋನಲ್ಲಿ ಸದ್ಯ 8.1 ರೇಟಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಇಳಿಕೆ ಆಗುವ ಭಯ ಅಭಿಮಾನಿಗಳನ್ನು ಕಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:25 am, Fri, 7 February 25




