777 Charlie: ಭರ್ಜರಿ ಕಲೆಕ್ಷನ್: ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಚಾರ್ಲಿ
777 Charlie Box Office Collection: ಕೇರಳದಲ್ಲಿ ಈ ವಾರ ಮೂರು ಮಲಯಾಳಂ ಚಿತ್ರಗಳು ಬಿಡುಗಡೆಯಾಗಿದ್ದರೂ ಅಲ್ಲಿ 777 ಚಾರ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ತಮಿಳುನಾಡಿನಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಚಿತ್ರಮಂದಿರಗಳಲ್ಲಿ 777 ಚಾರ್ಲಿ (777 Charlie) ಚಿತ್ರದ ಅಬ್ಬರ ಮುಂದುವರೆದಿದೆ. ಧರ್ಮ ಮತ್ತು ಚಾರ್ಲಿಯ ಹೃದಯಸ್ಪರ್ಶಿ ಪ್ರಯಾಣವನ್ನು ವೀಕ್ಷಿಸಲು ದಿನದಿಂದ ದಿನಕ್ಕೆ ಜನರು ಥಿಯೇಟರ್ನತ್ತ ಧಾವಿಸುತ್ತಿದ್ದಾರೆ. ಪರಿಣಾಮ ಬಾಕ್ಸಾಫೀಸ್ನಲ್ಲಿ ಚಾರ್ಲಿ ಸಖತ್ ಕಲೆಕ್ಷನ್ ಮಾಡ್ತಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಚಿತ್ರ ಎಂಬ ಟ್ಯಾಗ್ ಲೈನ್ನೊಂದಿಗೆ ಭರ್ಜರಿ ಓಪನಿಂಗ್ ಪಡೆದಿದ್ದ 777 ಚಾರ್ಲಿ ಚಿತ್ರವು ಇದೀಗ ಚಾರ್ಲಿಯ ಕಾರಣದಿಂದಲೇ ಜನರನ್ನು ಸೆಳೆಯುತ್ತಿದೆ. ಈಗಾಗಲೇ ಚಿತ್ರದ ಕಲೆಕ್ಷನ್ ಎರಡಂಕಿ ಕೋಟಿಯನ್ನು ದಾಟಿದೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ನಿರ್ದೇಶಕ ಕಿರಣ್ ರಾಜ್, ಎಲ್ಲಾ ಭಾಷೆಯ ಪ್ರೇಕ್ಷಕರು ಚಾರ್ಲಿಯನ್ನು ಮೆಚ್ಚಿಕೊಂಡಿದ್ದಾರೆ. ಅದರಂತೆ ಚಿತ್ರದ ಗಳಿಕೆಯಲ್ಲೂ ಏರಿಕೆ ಕಾಣುತ್ತಿದೆ ಎಂದಿದ್ದಾರೆ.
ಐಬಿಟೈಮ್ಸ್ ವರದಿ ಪ್ರಕಾರ, 777 ಚಾರ್ಲಿ ಕೇವಲ 5 ದಿನಗಳಲ್ಲಿ 35 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕರ್ನಾಟಕದಲ್ಲಿ ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಕುಟುಂಬ ಪ್ರೇಕ್ಷಕರಿಂದಾಗಿ ಚಿತ್ರವು ಉತ್ತಮ ಕಲೆಕ್ಷನ್ ಕಾಣುತ್ತಿದೆ. ಅಲ್ಲದೆ, ತೆಲುಗು ವಿತರಕರು 777 ಚಾರ್ಲಿಯ ವಾರಾಂತ್ಯದ ಪ್ರದರ್ಶನದಿಂದ ಫುಲ್ ಖುಷಿಯಾಗಿದ್ದಾರೆ. ಅತ್ತ ಕೇರಳದಲ್ಲೂ ಧರ್ಮ ಹಾಗೂ ಚಾರ್ಲಿಯ ಅಭಿನಯವನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ.
ಕೇರಳದಲ್ಲಿ ಈ ವಾರ ಮೂರು ಮಲಯಾಳಂ ಚಿತ್ರಗಳು ಬಿಡುಗಡೆಯಾಗಿದ್ದರೂ ಅಲ್ಲಿ 777 ಚಾರ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ತಮಿಳುನಾಡಿನಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪುಣೆಯಲ್ಲಿ ಕನ್ನಡ ಮತ್ತು ಹಿಂದಿ ಎರಡೂ ಆವೃತ್ತಿಗಳು ಭರ್ಜರಿ ಪ್ರದರ್ಶನ ಕಾಣುತ್ತಿವೆ ಎಂದು ನಿರ್ದೇಶಕ ಕಿರಣ್ ರಾಜ್ ಹೇಳಿದ್ದಾರೆ.
ಇತ್ತ ಕರ್ನಾಟಕದಲ್ಲಿ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಚಿತ್ರವನ್ನು ಬೇರೆ ಲೆವೆಲ್ಗೆ ಕೊಂಡೊಯ್ಯುತ್ತಿದ್ದರೆ, ಪರಭಾಷೆಯಲ್ಲೂ ಚಿತ್ರವು ಭರ್ಜರಿಯಾಗಿ ಓಡುತ್ತಿದೆ. ಇದರ ಫಲವಾಗಿ 777 ಚಾರ್ಲಿ ಕೇವಲ 5 ದಿನಗಳಲ್ಲಿ 35 ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ವಿಶೇಷ ಎಂದರೆ 777 ಚಾರ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರೂ, ಕನ್ನಡ ಹೊರತುಪಡಿಸಿ ಉಳಿದೆಡೆ ಕಡಿಮೆ ಶೋಗಳಲ್ಲಿ ರಿಲೀಸ್ ಮಾಡಲಾಗಿತ್ತು. ಇದೀಗ ಚಿತ್ರಕ್ಕೆ ಸಿಕ್ಕಿರುವ ಭರ್ಜರಿ ಓಪನಿಂಗ್ ನೋಡಿ ಸ್ಕ್ರೀನ್‍ಗಳ ಸಂಖ್ಯೆಗಳನ್ನು ಹೆಚ್ಚಿಸುವಂತೆ ಬೇಡಿಕೆಗಳು ಬರುತ್ತಿದೆಯಂತೆ. ಹೀಗಾಗಿ ಮೊದಲ ವಾರದಲ್ಲೇ ಚಾರ್ಲಿಯ ಗಳಿಕೆ 40 ಕೋಟಿ ದಾಟುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.
ಮತ್ತೊಂದೆಡೆ, ಅನೇಕ ಸೆಲೆಬ್ರಿಟಿಗಳು ಚಾರ್ಲಿ 777 ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮಲ್ಟಿ-ಗ್ರ್ಯಾಮಿ ಪ್ರಶಸ್ತಿ ವಿಜೇತ ಭಾರತೀಯ ಸಂಗೀತ ಸಂಯೋಜಕ ರಿಕಿ ಕೇಜ್ ಟ್ವಿಟರ್‌ನಲ್ಲಿ ಚಿತ್ರವನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಬಾಲಿವುಡ್ ನಟಿ ರಾಕುಲ್ ಪ್ರೀತ್ ಕೂಡ ಈ ಅಧ್ಭುತ ಚಿತ್ರವನ್ನು ವೀಕ್ಷಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಚಾರ್ಲಿಯ ತುಂಟಾಟ, ಧರ್ಮನ ಪ್ರಾಣ ಸಂಕಟವನ್ನು ವೀಕ್ಷಿಸಿ ಪ್ರೇಕ್ಷಕರು ಕಣ್ಣೀರಿನೊಂದಿಗೆ ಥಿಯೇಟರ್ನಿಂದ ಹೊರಬರುತ್ತಿದ್ದಾರೆ. ಹೀಗೆ ಚಿತ್ರದ ಭಾವುಕ ಸನ್ನಿವೇಶಗಳಿಗೆ ಕಣ್ಣೀರಿಡುತ್ತಾ ಪ್ರೇಕ್ಷಕರು ಬಾಕ್ಸಾಫೀಸ್ ತುಂಬಿಸುತ್ತಿರುವುದು ನೋಡಿ ನಿರ್ದೇಶಕ ಕಿರಣ್ ರಾಜ್ ಅ್ಯಂಡ್ ರಕ್ಷಿತ್ ಶೆಟ್ಟಿ ಟೀಮ್ ಫುಲ್ ಖುಷಿಯಾಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:28 pm, Thu, 16 June 22