ಇನ್ಮುಂದೆ ಒಟಿಟಿಗೆ ಬರಲ್ಲ ಆಮಿರ್ ಖಾನ್ ಸಿನಿಮಾಗಳು? ಕಾರಣವೇನು?
Aamir Khan: ಬಾಲಿವುಡ್ ಖ್ಯಾತ ನಟ, ನಿರ್ಮಾಪಕ ಆಮಿರ್ ಖಾನ್ ಇನ್ನು ಮುಂದೆ ತಮ್ಮ ಸಿನಿಮಾಗಳನ್ನು ಒಟಿಟಿಗೆ ಮಾರದೇ ಇರುವ ಬಗ್ಗೆ ಚಿಂತಿಸುತ್ತಿದ್ದಾರೆ. ಚಿತ್ರಮಂದಿರದ ಅನುಭಕ್ಕೆ ಹೆಚ್ಚು ಒತ್ತು ನೀಡುವ ಕಾರಣ ಈ ನಿರ್ಧಾರ ಮಾಡಿದ್ದಾರೆ.
ಸದ್ಯ ಸಿನಿಮಾಗಳು ಥಿಯೇಟರ್ನಲ್ಲಿ ಮಿಂಚುವುದಕ್ಕಿಂತ ಹೆಚ್ಚು ಒಟಿಟಿಯಲ್ಲಿ ಗಮನ ಸೆಳೆಯುತ್ತಿವೆ. ಜನರು ಒಟಿಟಿಯಲ್ಲಿ ಸಿನಿಮಾ ನೋಡಲು ಒತ್ತು ನೀಡುತ್ತಿದ್ದಾರೆ. ಯಾವುದೇ ಸಿನಿಮಾ ರಿಲೀಸ್ ಆದರೂ ಅದನ್ನು ಒಟಿಟಿಯಲ್ಲಿ ನೋಡಿದರಾಯಿತು ಬಿಡಿ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಇದನ್ನು ತಪ್ಪಿಸಲು ಆಮಿರ್ ಖಾನ್ ಅವರು ಪ್ಲ್ಯಾನ್ ಒಂದನ್ನು ಮಾಡಿದ್ದಾರೆ. ತಮಗೆ ನಷ್ಟ ಆಗುವ ಭಯವಿದ್ದರೂ ಅವರು ದೊಡ್ಡ ನಿರ್ಧಾರ ಒಂದಕ್ಕೆ ಬಂದಿದ್ದಾರೆ.
ಸಿನಿಮಾ ಚೆನ್ನಾಗಿದ್ದರೆ ಎರಡು ತಿಂಗಳ ಬಳಿಕ ಸಿನಿಮಾ ಒಟಿಟಿಗೆ ಬರುತ್ತದೆ. ಸಿನಿಮಾ ಬಗ್ಗೆ ಸ್ವಲ್ಪ ನೆಗೆಟಿವ್ ಟಾಕ್ ಶುರುವಾದರೂ ಒಂದೇ ತಿಂಗಳ ಒಳಗೆ ಚಿತ್ರ ಒಟಿಟಿಗೆ ಬರುತ್ತದೆ. ಈ ಕಾರಣಕ್ಕೆ ಬಹುತೇಕರು ‘ಒಟಿಟಿಗೆ ಬಂದಮೇಲೆ ಸಿನಿಮಾ ನೋಡಿದರಾಯಿತು ಬಿಡಿ’ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಇದನ್ನು ತಪ್ಪಿಸಲು ಆಮಿರ್ ಖಾನ್ ಅವರು ಪ್ಲ್ಯಾನ್ ಒಂದನ್ನು ಮಾಡಿದ್ದಾರಂತೆ. ಅವರು ತಮ್ಮ ಸಿನಿಮಾದ ಹಕ್ಕನ್ನು ಒಟಿಟಿಗೆ ಮಾರದೇ ಇರಲು ನಿರ್ಧರಿಸಿದ್ದಾರೆ.
ಆಮಿರ್ ಖಾನ್ ಅವರು ಕೇವಲ ಹೀರೋ ಮಾತ್ರ ಅಲ್ಲ, ನಿರ್ಮಾಪಕರೂ ಹೌದು. ಅವರ ನಟನೆಯ ಸಿನಿಮಾಗಳಲ್ಲೂ ಅವರ ಹೂಡಿಕೆ ಇರುತ್ತದೆ. ಈ ಕಾರಣಕ್ಕೆ ಅವರು ತಮ್ಮ ಸಿನಿಮಾದ ಡಿಜಿಟಲ್ ಹಕ್ಕನ್ನು ಮೊದಲೇ ಮಾರದಿರಲು ನಿರ್ಧರಿಸಿದ್ದಾರೆ. ಸಿನಿಮಾ ರಿಲೀಸ್ ಆಗಿ 12 ವಾರ ಅಂದರೆ ಮೂರು ತಿಂಗಳು ಇದರ ಹಕ್ಕನ್ನು ಮಾರದಿರಲು ಅವರು ನಿರ್ಧರಿಸಿದ್ದಾರೆ. ಈ ಮೂಲಕ ಚಿತ್ರಮಂದಿರದಲ್ಲಿ ಜನರನ್ನು ಹೆಚ್ಚಿಸುವ ಆಲೋಚನೆ ಅವರಿಗೆ ಬಂದಿದೆ.
ಇದನ್ನೂ ಓದಿ:30 ವರ್ಷದ ಬಳಿಕ ‘ಕೂಲಿ’ ಸಿನಿಮಾಗಾಗಿ ಒಂದಾದ ಆಮಿರ್ ಖಾನ್-ರಜನಿಕಾಂತ್?
ಸಿನಿಮಾ ಹಾಲ್ನಲ್ಲಿ ಚಿತ್ರ ಬಂದ ಮೂರು ತಿಂಗಳ ಬಳಿಕವೇ ಡಿಜಿಟಲ್ ಹಕ್ಕನ್ನು ಆಮಿರ್ ಮಾರಲಿದ್ದಾರೆ. ಈ ಮೂಲಕ ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚು ಮಾಡುವ ಆಲೋಚನೆಯಲ್ಲಿ ಇದ್ದಾರೆ. ಒಂದೊಮ್ಮೆ ಸಿನಿಮಾ ಉತ್ತಮವಾಗಿಲ್ಲ ಎಂದರೆ ಒಟಿಟಿಯವರು ಕಡಿಮೆ ಮೊತ್ತಕ್ಕೆ ಕೇಳುತ್ತಾರೆ. ಆದಾಗ್ಯೂ ಈ ಬಗ್ಗೆ ಅವರಿಗೆ ಹೆಚ್ಚು ಚಿಂತೆ ಇಲ್ಲ. ಇದು ಯಶಸ್ಸು ಕಂಡರೆ ಎಲ್ಲರೂ ಇದೇ ತಂತ್ರ ಉಪಯೋಗಿಸಬಹುದು.
ಸದ್ಯ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಡಿಸೆಂಬರ್ 20ರಂದು ಈ ಚಿತ್ರ ರಿಲೀಸ್ ಆಗಲಿದೆ. ‘ಲಾಲ್ ಸಿಂಗ್ ಛಡ್ಡಾ’ ಬಳಿಕ ಆಮಿರ್ ಖಾನ್ ಬ್ರೇಕ್ ಪಡೆದಿದ್ದರು. ಇದಾದ ಬಳಿಕ ಒಪ್ಪಿಕೊಂಡ ಸಿನಿಮಾ ಇದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ