ಉಡುಪಿ: ನಟ ರಕ್ಷಿತ್ ಶೆಟ್ಟಿ ಕೆಸರು ಗದ್ದೆಗಿಳಿದು ಭತ್ತದ ನಾಟಿ ಮಾಡಿದ್ದಾರೆ. ಉಡುಪಿಯ ಬ್ರಹ್ಮಾವರದಲ್ಲಿ ನಡೆದ ಕೇದಾರೋತ್ಥಾನ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ(Rakshith shetty) ನಾಟಿ ಕಾರ್ಯ ಮಾಡಿದ್ದು, ಭೂಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಾಸಕ ರಘುಪತಿ ಭಟ್ ನೇತೃತ್ವದ ಹಡಿಲು ಭೂಮಿ ನಾಟಿ ಯೋಜನೆ ಕಾರ್ಯಕ್ರಮದಲ್ಲಿ ಇಂದು (ಜುಲೈ 18) ನಟ ರಕ್ಷಿತ್ ಶೆಟ್ಟಿ ಭಾಗಿಯಾಗಿದ್ದು, ಈ ಸಂದರ್ಭದಲ್ಲಿ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಕರಾವಳಿ ಜನರ ಮುಖ್ಯ ಉದ್ದಿಮೆ ಕೃಷಿಯಾಗಿತ್ತು. ಕಣ್ಣು ಹಾಯಿಸಿದಲ್ಲೆಲ್ಲ ಬೇಸಾಯ ಆಗುತ್ತಿತ್ತು.ಕಳೆದ ಹತ್ತು- ಹದಿನೈದು ವರ್ಷಗಳಿಂದ ಬೇಸಾಯ ಕಡಿಮೆಯಾಗುತ್ತಾ ಬಂದಿದೆ. ಕರಾವಳಿಯಲ್ಲಿ ಬೇಸಾಯ ಕೃಷಿ ನಿಂತು ಬಿಡುತ್ತಾ ಎಂಬ ಆತಂಕ ಇತ್ತು. ಆದರೆ ಶಾಸಕ ರಘುಪತಿ ಭಟ್ ಒಂದು ಉತ್ತಮ ಯೋಜನೆ ಹಾಕಿಕೊಂಡಿದ್ದಾರೆ ಎಂದು ನಟ ರಕ್ಷಿತ್ ಶೆಟ್ಟಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಊರು ಬಿಟ್ಟವರು ಮತ್ತೆ ಊರಿಗೆ ವಾಪಸಾಗುತ್ತಿದ್ದಾರೆ. ಯುವಕರು ಮತ್ತೆ ಕೃಷಿ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಮಾಡುವುದು ಕಷ್ಟ ಅಲ್ಲ. ನಾನು ಈ ಯೋಜನೆಗೆ ಬ್ರಾಂಡ್ ಅಂಬಾಸಿಡರ್ ಆಗಲು ಉತ್ಸುಕನಾಗಿದ್ದೇನೆ. ಸಿನಿಮಾ ಮುಖಾಂತರ ಬೇಸಾಯಕ್ಕೆ ಬೆಂಬಲಿಸಲು ಪ್ರಯತ್ನ ಮಾಡುತ್ತೇನೆ. ಯೋಜನೆಗೆ ನನ್ನಿಂದಾಗುವ ಎಲ್ಲಾ ಸಹಾಯ ಮಾಡುತ್ತೇನೆ ಎಂದು ಉಡುಪಿಯ ಬ್ರಹ್ಮಾವರದಲ್ಲಿ ನಟ ರಕ್ಷಿತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ನಟ ರಕ್ಷಿತ್ ಶೆಟ್ಟಿ
ಕನ್ನಡದಲ್ಲೂ ಒಟಿಟಿಗೆ ಅವಕಾಶವಿದೆ: ನಟ ರಕ್ಷಿತ್ ಶೆಟ್ಟಿ ಬಳಿಕ ಸಿನಿಮಾ ವಿಚಾರವಾಗಿ ಮಾತನಾಡಿದ ಅವರು, ಕನ್ನಡದಲ್ಲೂ ಒಟಿಟಿಗೆ ಅವಕಾಶವಿದೆ. ಕನ್ನಡದಲ್ಲೂ ಒಟಿಟಿ ಶುರುವಾಗಿದೆ. ಒಟಿಟಿಗೆ ಬೇರೆತರದ ಸಿನಿಮಾನೇ ಮಾಡಬೇಕು. ಮಲಯಾಳಂನಲ್ಲಿ ಎಂಬತ್ತರ ದಶಕದಿಂದಲೇ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಮಲಯಾಳಂ ಇಂಡಸ್ಟ್ರಿಗೆ ಒಟಿಟಿ ವೇದಿಕೆ ಬಹಳ ಬೇಗ ಸಿಕ್ಕಿದೆ. ಕನ್ನಡದಲ್ಲಿ ಆ ತರಹದ ಸಿನಿಮಾ ಮಾಡುವ ಹತ್ತು- ಹದಿನೈದು ಜನ ಫಿಲಂ ಮೇಕರ್ಸ್ ಬರಬೇಕು. ಆ ಮೂಲಕ ವರ್ಷಕ್ಕೆ ಹತ್ತು-ಹದಿನೈದು ಒಟಿಟಿಯಲ್ಲಿ ಬರುವ ಸಿನಿಮಾ ಮಾಡಬೇಕು. ನಾವು ಕಮರ್ಷಿಯಲ್ ಸಿನಿಮಾ ಜಾಸ್ತಿ ಮಾಡುತ್ತೇವೆ. ನಾವು ಕೂಡ ಒಟಿಟಿಯಲ್ಲಿ ಒಳ್ಳೆಯ ಪ್ಲಾಟ್ಫಾರ್ಮ್ ಸೃಷ್ಟಿ ಮಾಡಬಹುದು ಎಂದು ನಟ ರಕ್ಷಿತ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಗದ್ದೆಗಿಳಿದು ಕೃಷಿಕರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್