Ponniyin Selvan: ರಜನಿಕಾಂತ್ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ ಬಚ್ಚನ್; ವಿಡಿಯೋ ವೈರಲ್
Aishwarya Rai Bachchan: ‘ಪೊನ್ನಿಯಿನ್ ಸೆಲ್ವನ್’ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ರಜನಿಕಾಂತ್ ಅತಿಥಿಯಾಗಿ ಬಂದಿದ್ದು ಇಡೀ ಚಿತ್ರತಂಡಕ್ಕೆ ಖುಷಿ ನೀಡಿದೆ. ಅವರನ್ನು ನೋಡುತ್ತಿದ್ದಂತೆಯೇ ಐಶ್ವರ್ಯಾ ರೈ ಅವರು ಕಾಲು ಮುಟ್ಟಿ ನಮಸ್ಕರಿಸಿದರು.
ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಫೇಮಸ್ ಆದವರು ನಟಿ ಐಶ್ವರ್ಯಾ ರೈ ಬಚ್ಚನ್. ತಮಿಳು ಚಿತ್ರರಂಗದ ಜೊತೆಗೆ ಅವರಿಗೆ ಒಳ್ಳೆಯ ನಂಟು ಇದೆ. ಈಗ ಅವರು ನಟಿಸಿರುವ ಕಾಲಿವುಡ್ ಸಿನಿಮಾ ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಬಿಡುಗಡೆಗೆ ಸಿದ್ಧವಾಗಿದೆ. ಮಂಗಳವಾರ (ಸೆ.6) ರಾತ್ರಿ ಈ ಚಿತ್ರದ ಆಡಿಯೋ ಮತ್ತು ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆದಿದೆ. ಅದ್ದೂರಿಯಾಗಿ ಜರುಗಿದ ಈ ಕಾರ್ಯಕ್ರಮಕ್ಕೆ ತಮಿಳು ಚಿತ್ರರಂಗದ ಅನೇಕರು ಹಾಜರಿ ಹಾಕಿದ್ದರು. ‘ಸೂಪರ್ ಸ್ಟಾರ್’ ರಜನಿಕಾಂತ್ (Rajinikanth) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಮಲ್ ಹಾಸನ್ ಕೂಡ ಭಾಗಿ ಆಗಿದ್ದರು. ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿರುವ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರು ರಜನಿಕಾಂತ್ ಕಾಲಿಗೆ ನಮಸ್ಕರಿಸಿದ ವಿಡಿಯೋ ವೈರಲ್ ಆಗಿದೆ.
ರಜನಿಕಾಂತ್ ಅವರಿಗೆ ಎಲ್ಲರೂ ಗೌರವ ನೀಡುತ್ತಾರೆ. ‘ಪೊನ್ನಿಯಿನ್ ಸೆಲ್ವನ್’ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಅವರು ಅತಿಥಿಯಾಗಿ ಬಂದಿದ್ದು ಇಡೀ ಚಿತ್ರತಂಡಕ್ಕೆ ಖುಷಿ ನೀಡಿದೆ. ಅವರನ್ನು ನೋಡುತ್ತಿದ್ದಂತೆಯೇ ಐಶ್ವರ್ಯಾ ರೈ ಅವರು ಕಾಲು ಮುಟ್ಟಿ ನಮಸ್ಕರಿಸಿದರು. ನಂತರ ಚಿತ್ರದ ನಿರ್ದೇಶಕ ಮಣಿ ರತ್ನಂ ಅವರನ್ನು ಐಶ್ವರ್ಯಾ ಓಡೋಡಿ ಬಂದು ತಬ್ಬಿಕೊಂಡಿದ್ದಾರೆ. ಮಣಿರತ್ನಂ ಜೊತೆಗೆ ನಟಿ ಐಶ್ವರ್ಯಾ ರೈ ಬಚ್ಚನ್ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದು. ಈ ಮೊದಲು ‘ಇರುವರ್’, ‘ಗುರು’ ಮತ್ತು ‘ರಾವಣ್’ ಸಿನಿಮಾಗಳಲ್ಲಿ ಅವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದರು.
ಈ ಚಿತ್ರದಲ್ಲಿ ಚಿಯಾನ್ ವಿಕ್ರಮ್, ಕಾರ್ತಿ, ಜಯಂ ರವಿ, ತ್ರಿಷಾ ಕೃಷ್ಣನ್, ಪ್ರಕಾಶ್ ರಾಜ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಎರಡು ಭಾಗದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಸದ್ಯಕ್ಕೆ ಮೊದಲ ಭಾಗದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಕಲ್ಕಿ ಕೃಷ್ಣಮೂರ್ತಿ ಬರೆದ ‘ಪೊನ್ನಿಯಿನ್ ಸೆಲ್ವನ್’ ಕೃತಿಯನ್ನು ಆಧರಿಸಿ ಈ ಚಿತ್ರ ತಯಾರಾಗುತ್ತಿದೆ. ಈ ಮೊದಲು ಅನಾವರಣ ಆಗಿದ್ದ ‘ಪೊನ್ನಿ ನದಿ..’ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಈಗ ಟ್ರೇಲರ್ ಅಬ್ಬರಿಸುತ್ತಿದೆ.
It happened guys. Aishwarya Rai touched Rajinikanth’s feet ?#AishwaryaRaiBachchan #Rajinikanth#PonniyinSelvanpic.twitter.com/FMjj9SIYFJ https://t.co/220rrV1wMj
— Aishwarya as Nandini(PonniyinSelvan)’ll b Historic (@badass_aishfan) September 6, 2022
ಮಣಿರತ್ನಂ ನಿರ್ದೇಶನದ ಸಿನಿಮಾ ಎಂದರೆ ಅಭಿಮಾನಿಗಳು ವಿಶೇಷ ಆಸಕ್ತಿ ತೋರಿಸುತ್ತಾರೆ. ಚೋಳ ಸಾಮ್ರಾಜ್ಯದ ಐತಿಹಾಸಿಕ ಕಥೆಯನ್ನು ಅವರು ತೆರೆಗೆ ತರುತ್ತಿದ್ದು, ಅವರಿಗೆ ಪ್ರತಿಭಾವಂತ ಕಲಾವಿದರು ಸಾಥ್ ನೀಡಿದ್ದಾರೆ. ಎ.ಆರ್. ರೆಹಮಾನ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:14 pm, Wed, 7 September 22