
‘ಹೇರಾ ಫೇರಿ’ ಹಾಗೂ ‘ಫಿರ್ ಹೇರಾ ಫೇರಿ’ ಚಿತ್ರದಲ್ಲಿ ಅಕ್ಷಯ್ ಕುಮಾರ್ (Akshay Kumar), ಸುನೀಲ್ ಶೆಟ್ಟಿ ಹಾಗೂ ಪರೇಶ್ ರಾವಲ್ ಅವರು ಬಹುವಾಗಿ ನಗಿಸಿದ್ದರು. ಅದರಲ್ಲೂ ಬಾಬು ಭಯ್ಯಾ ಪಾತ್ರದ ಮೂಲಕ ಪರೇಶ್ ರಾವಲ್ ಅವರು ಎಲ್ಲರ ಮೆಚ್ಚುಗೆ ಪಡೆದರು. ಆದರೆ, ಈಗ ‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರ ನಡೆದಿದ್ದಾರೆ. ಈ ಬೆನ್ನಲ್ಲೇ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಅವರು ಪರೇಶ್ ರಾವಲ್ಗೆ ನೋಟಿಸ್ ಕಳುಹಿಸಿದ್ದು, 25 ಕೋಟಿ ರೂಪಾಯಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಈ ಮಧ್ಯೆ ಪರೇಶ್ ಚಿತ್ರದಿಂದ ಹೊರ ನಡೆಯಲು ಅಕ್ಷಯ್ ಕಾರಣ ಇರಬಹುದು ಎನ್ನಲಾಗುತ್ತಿದೆ.
ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಅವರು ಈ ಮೊದಲಿನಿಂದಲೂ ಚಿತ್ರರಂಗದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಇವರ ಮಧ್ಯೆ ಒಳ್ಳೆಯ ಗೆಳೆತನ ಇದೆ ಎಂಬುದು ಮೇಲ್ನೋಟಕ್ಕೆ ಕಾಣಿಸಿದೆ. ಆದರೆ, ಅವರು ಒಬ್ಬ ಸಹೋದ್ಯೋಗಿ ಅಷ್ಟೇ ಎಂದು ಪರೇಶ್ ಕೆಲವೇ ವಾರಗಳ ಹಿಂದೆ ಹೇಳಿದ್ದರು. ಅಲ್ಲದೆ, ಆರಂಭದಲ್ಲಿ ಕೆಲಸ ಮಾಡಿದ ವ್ಯಕ್ತಿಗಳು ಮಾತ್ರ ಗೆಳೆಯರು ಎನ್ನಿಸುತ್ತಾರೆ ಎಂದು ಕೂಡ ಪರೇಶ್ ಅಭಿಪ್ರಾಯಪಟ್ಟಿದ್ದರು.
ಪರೇಶ್ ರಾವಲ್ ಹೇಳಿಕೆ ಬೆನ್ನಲ್ಲೇ ಅನೇಕರಿಗೆ ಈ ಬಗ್ಗೆ ಅನುಮಾನ ಮೂಡಿತ್ತು. ಪರೇಶ್ ಹಾಗೂ ಅಕ್ಷಯ್ ಮಧ್ಯೆ ಯಾವುದೂ ಸರಿ ಇಲ್ಲ ಎಂದು ಅನೇಕರು ಅಂದುಕೊಂಡಿದ್ದರು. ಹೀಗಿರುವಾಗಲೇ ಪರೇಶ್ ಅವರು ಚಿತ್ರದಿಂದ ಹೊರ ನಡೆಯುವುದಾಗಿ ಮಾಧ್ಯಮಗಳ ಮುಂದೆ ಘೋಷಣೆ ಮಾಡಿದ್ದಾರೆ. ಚಿತ್ರತಂಡದ ಗಮನಕ್ಕೆ ತರದೆ ಈ ನಿರ್ಧಾರ ಘೋಷಣೆ ಮಾಡಿದ್ದಾರೆ.
ಆರಂಭದಲ್ಲಿ ಎಲ್ಲರೂ ನಿರ್ದೇಶಕರ ಜೊತೆ ಕಿರಿಕ್ ಆಗಿರಬಹುದು ಎಂದು ಭಾವಿಸಿದ್ದರು. ಆದರೆ, ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದರು. ‘ನಿರ್ದೇಶಕ ಪ್ರಿಯದರ್ಶನ್ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಅವರನ್ನು ಬಹುವಾಗಿ ಗೌರವಿಸುತ್ತೇನೆ. ನಾನು ಆ ಪಾತ್ರದಿಂದ ರಿಟೈರ್ ಆಗುತ್ತಿದ್ದೇನೆ’ ಎಂದು ಕೂಡ ಪರೇಶ್ ರಾವಲ್ ಹೇಳಿದ್ದರು.
ಇದನ್ನೂ ಓದಿ: ಸಿನಿಮಾ ಗೆದ್ದರೆ ಮಾತ್ರ ಸಂಭಾವನೆ ಪಡೆಯುತ್ತಾರೆ ಅಕ್ಷಯ್ ಕುಮಾರ್; ನಟನಿಗೆ ಆದ ನಷ್ಟ ಎಷ್ಟು?
ಈ ಎರಡೂ ಹೇಳಿಕೆ ಬೆನ್ನಲ್ಲೇ ಅಕ್ಷಯ್ ಕುಮಾರ್ ಹಾಗೂ ಪರೇಶ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಪರೇಶ್ಗೆ ಅಕ್ಷಯ್ ಲೀಗಲ್ ನೋಟಿಸ್ ಕಳುಹಿಸಿರುವುದು ಕೂಡ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.