
ತೆಲಂಗಾಣ ರಾಜ್ಯ ಸರ್ಕಾರ ‘ಗದ್ದರ್ ಸಿನಿಮಾ ಪ್ರಶಸ್ತಿ’ (Gaddar Film Awards) ಘೋಷಣೆ ಮಾಡಿದೆ. ಬರೋಬ್ಬರಿ 14 ವರ್ಷಗಳ ಬಳಿಕ ತೆಲುಗಿನಲ್ಲಿ ರಾಜ್ಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಮೊದಲು ಅವಿಭಜಿತ ಆಂಧ್ರ ಪ್ರದೇಶ ನೀಡುತ್ತಿದ್ದ ನಂದಿ ಪ್ರಶಸ್ತಿಯನ್ನು ಈಗ ತೆಲಂಗಾಣ ಸರ್ಕಾರ ‘ಗದ್ದರ್ ಅವಾರ್ಡ್’ ಎಂದು ಮರು ನಾಮಕರಣ ಮಾಡಿದೆ. 2024ರ ಸಾಲಿನಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಗದ್ದರ್ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ‘ಪುಷ್ಪ 2’ (Pushpa 2) ಸಿನಿಮಾದಲ್ಲಿನ ನಟನೆಗಾಗಿ ಅಲ್ಲು ಅರ್ಜುನ್ (Allu Arjun) ಅವರು ‘ಅತ್ಯುತ್ತಮ ನಟ’ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಹಿರಿಯ ನಟಿ ಜಯಸುಧಾ ಅವರು ಜ್ಯೂರಿ ಸಮಿತಿಯ ಅಧ್ಯಕ್ಷರಾಗಿದ್ದರು. 15 ಜ್ಯೂರಿ ಸದಸ್ಯರು ಈ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದಾರೆ. ಫೀಚರ್ ಫಿಲ್ಮ್, ಸಾಕ್ಷ್ಯಚಿತ್ರ, ಮಕ್ಕಳ ಸಿನಿಮಾ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಸಿನಿಮಾಗೆ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ನೀಡಲಾಗಿದೆ. ಈ ಚಿತ್ರದ ನಿರ್ದೇಶನಕ್ಕಾಗಿ ನಾಗ್ ಅಶ್ವಿನ್ ಅವರು ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಲಕ್ಕಿ ಭಾಸ್ಕರ್’ ಸಿನಿಮಾದ ನಟನೆಗಾಗಿ ದುಲ್ಕರ್ ಸಲ್ಮಾನ್ ಅವರು ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದಿದ್ದಾರೆ. ‘ಸರಿಪೋದ ಸನಿವಾರಂ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಎಸ್.ಜೆ. ಸೂರ್ಯ ಅವರು ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಪಡೆದಿದ್ದಾರೆ. ‘ದೇವರ’ ಚಿತ್ರಕ್ಕಾಗಿ ಗಣೇಶ್ ಆಚಾರ್ಯ ಅವರು ‘ಅತ್ಯುತ್ತಮ ನೃತ್ಯ ನಿರ್ದೇಶನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
I am truly honoured to receive the first Best Actor award for #Pushpa2 at the #GaddarTelanganaFilmAwards 2024.
Heartfelt thanks to the Government of Telangana for this prestigious honour .
All credit goes to my director Sukumar garu, my producers, and the entire Pushpa team.
I…
— Allu Arjun (@alluarjun) May 29, 2025
ಹಲವು ವರ್ಷಗಳ ಬಳಿಕ ಪುನಃ ಸಿನಿಮಾ ಪ್ರಶಸ್ತಿಗಳನ್ನು ನೀಡಲು ಆರಂಭಿಸಿದ್ದಕ್ಕಾಗಿ ತೆಲಂಗಾಣ ಸರ್ಕಾರಕ್ಕೆ ಸೆಲೆಬ್ರಿಟಿಗಳು ಧನ್ಯವಾದ ಅರ್ಪಿಸಿದ್ದಾರೆ. ಈ ಬಗ್ಗೆ ಜೂನಿಯರ್ ಎನ್ಟಿಆರ್, ಅಲ್ಲು ಅರ್ಜುನ್ ಮುಂತಾದ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪ್ರಶಸ್ತಿಗಳಿಂದ ತೆಲುಗು ಚಿತ್ರರಂಗಕ್ಕೆ ಪ್ರೋತ್ಸಾಹ ಸಿಕ್ಕಂತೆ ಆಗಿದೆ.
‘ಈ ಮಟ್ಟಕ್ಕೆ ಬರಲು ನಾನೊಬ್ಬನೇ ಕಾರಣ ಅಲ್ಲ’; ಹಲವರಿಗೆ ಕ್ರೆಡಿಟ್ ಕೊಟ್ಟ ಅಲ್ಲು ಅರ್ಜುನ್
‘ಪುಷ್ಪ 2’ ಸಿನಿಮಾದ ನಟನೆಗೆ ‘ಬೆಸ್ಟ್ ಆ್ಯಕ್ಟರ್’ ಅವಾರ್ಡ್ ಘೋಷಣೆ ಆದ ಕೂಡಲೇ ಅಲ್ಲು ಅರ್ಜುನ್ ಅವರು ಧನ್ಯವಾದ ಅರ್ಪಿಸಿದ್ದಾರೆ. ‘ಈ ಪ್ರಶಸ್ತಿ ಸಿಕ್ಕಿರುವುದು ನನಗೆ ಗೌರವ ತಂದಿದೆ. ಈ ಪ್ರತಿಷ್ಠಿತ ಗೌರವಕ್ಕಾಗಿ ತೆಲಂಗಾಣ ಸರ್ಕಾರಕ್ಕೆ ಧನ್ಯವಾದಗಳು. ನಿರ್ದೇಶಕ ಸುಕುಮಾರ್, ನಿರ್ಮಾಪಕರು ಹಾಗೂ ಇಡೀ ಪುಷ್ಪ 2 ಸಿನಿಮಾ ತಂಡಕ್ಕೆ ಈ ಕ್ರೆಡಿಟ್ ಸಲ್ಲುತ್ತದೆ. ಅಭಿಮಾನಿಗಳಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ. ನಿಮ್ಮ ಬೆಂಬಲ ನನಗೆ ಸ್ಫೂರ್ತಿ ತುಂಬುತ್ತದೆ’ ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.