ವಿವಾದ ನಡೆದ ಜಾಗದಲ್ಲೇ ದಾಖಲೆ ಬರೆದ ‘ಪುಷ್ಪ 2’ ಸಿನಿಮಾ
‘ಪುಷ್ಪ 2’ ಚಿತ್ರ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಭಾರಿ ವಿವಾದವನ್ನು ಎದುರಿಸಿದ ನಂತರವೂ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಗಳಿಕೆ ಮಾಡಿದೆ. ಈ ಥಿಯೇಟರ್‌ನಲ್ಲಿ ಚಿತ್ರ 1.59 ಕೋಟಿ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ನಿರ್ಮಿಸಿದೆ. ಪುಷ್ಪ 2ರ ಈ ಯಶಸ್ಸು ವಿವಾದದ ನಡುವೆಯೂ ಸಿನಿಮಾ ಜನಪ್ರಿಯತೆಯನ್ನು ತೋರಿಸುತ್ತದೆ.
‘ಪುಷ್ಪ 2’ ಸಿನಿಮಾ ದಾಖಲೆ ಹಾಗೂ ವಿವಾದ ಎರಡರಿಂದಲೂ ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ಒಂದು ಕಡೆ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ. ಮತ್ತೊಂದು ಕಡೆ ಸಿನಿಮಾ ವಿವಾದವನ್ನು ಹುಟ್ಟುಹಾಕಿದೆ. ಎರಡೂ ವಿಚಾರಗಳು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿವೆ. ಈಗ ‘ಪುಷ್ಪ 2’ ಸಿನಿಮಾ ವಿವಾದ ನಡೆದ ಜಾಗದಲ್ಲೇ ದಾಖಲೆ ಬರೆದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಪುಷ್ಪ 2’ ಸಿನಿಮಾ ವಿವಾದ ಸೃಷ್ಟಿ ಮಾಡಿದ್ದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ. ಇಲ್ಲಿ ‘ಪುಷ್ಪ 2’ ಸಿನಿಮಾ ನೋಡಲು ಅಲ್ಲು ಅರ್ಜುನ್ ಬಂದಾಗ ಕಾಲ್ತುಳಿತ ಉಂಟಾಯಿತು. ಹೀಗಾಗಿ, ಮಹಿಳೆ ಮೃತಪಟ್ಟಳು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಇದಕ್ಕೆ ಅಲ್ಲು ಅರ್ಜುನ್ ಕೂಡ ಕಾರಣ ಎಂದು ಅವರನ್ನು ಬಂಧಿಸಲಾಯಿತು. ಈಗ ಇದೇ ಥಿಯೇಟರ್‌ನಲ್ಲಿ ಸಿನಿಮಾ ದಾಖಲೆ ಬರೆದಿದೆ.
ಡಿಸೆಂಬರ್ 5ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಸಂಧ್ಯಾ ಥಿಯೇಟರ್‌ನಲ್ಲಿ ‘ಪುಷ್ಪ 2’ ಚಿತ್ರವೇ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಈ ಭಾಗದಲ್ಲಿ 1.59 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಒಂದು ತಿಂಗಳಲ್ಲಿ ಈ ಥಿಯೇಟರ್‌ನಲ್ಲಿ ಇಷ್ಟು ದೊಡ್ಡ ಮಟ್ಟದ ಗಳಿಕೆ ಆಗಿದ್ದು ಇದೇ ಮೊದಲು. 2001ರಲ್ಲಿ ಪವನ್ ಕಲ್ಯಾಣ್ ನಟನೆಯ ‘ಖುಷಿ’ ಚಿತ್ರ 1.53 ಕೋಟಿ ರೂಪಾಯಿ ಗಳಿಸಿ ದಾಖಲೆಯನ್ನು ತನ್ನ ಹೆಸರಲ್ಲಿ ಇಟ್ಟುಕೊಂಡಿತ್ತು. ಆದರೆ, ‘ಪುಷ್ಪ 2’ ಚಿತ್ರ ಈ ದಾಖಲೆಯನ್ನು ನುಚ್ಚುನೂರು ಮಾಡಿದೆ.
ಕೆಲವರು ಇದನ್ನು ಬೇರೆ ರೀತಿಯಲ್ಲಿ ಹೇಳುತ್ತಿದ್ದಾರೆ. 2000ನೇ ಇಸ್ವಿಯ ಸಂದರ್ಭದಲ್ಲಿ ಟಿಕೆಟ್ ಬೆಲೆ 5ರಿಂದ 50 ರೂಪಾಯಿ ಮಾತ್ರ ಇತ್ತು. ಆದಾಗ್ಯೂ ‘ಖುಷಿ’ ಚಿತ್ರ 1.53 ಕೋಟಿ ರೂಪಾಯಿ ಗಳಿಸಿತ್ತು. ಅದನ್ನು ಈಗಿನ ಕಾಲದ ಸಿನಿಮಾಗಳ ಗಳಿಕೆ ಜೊತೆ ಹೋಲಿಕೆ ಅಸಾಧ್ಯ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: ‘ಬಾಹುಬಲಿ 2’ ದಾಖಲೆ ಮುರಿಯಲು ರೆಡಿ ಆದ ‘ಪುಷ್ಪ 2’ ಸಿನಿಮಾ
ಸಂಧ್ಯಾ ಥಿಯೇಟರ್‌ನಲ್ಲಿ ಬ್ಲ್ಯಾಕ್ನಲ್ಲಿಯೂ ಟಿಕೆಟ್ಗಳು ಮಾರಾಟ ಆಗುತ್ತಿವೆ. ಆದರೆ, ಅವುಗಳು ಬಾಕ್ಸ್ ಆಫೀಸ್ ಗಳಿಕೆ ಹೆಚ್ಚಲು ಸಹಕಾರಿ ಆಗುವುದಿಲ್ಲ. ಇದರಿಂದ ವೈಯಕ್ತಿಕವಾಗಿ ಲಾಭ ಆಗುತ್ತದೆ ಅಷ್ಟೇ. ಸಂಧ್ಯಾ ಥಿಯೇಟರ್‌ನಲ್ಲಿ ವಿಶೇಷ ಶೋಗಳಿಗೆ 900 ರೂಪಾಯಿ ಹಾಗೂ ಸಾಮಾನ್ಯ ದಿನಗಳಲ್ಲಿ 250 ರೂಪಾಯಿ ಟಿಕೆಟ್ ಬೆಲೆ ಇತ್ತು. ಅದೇನೇ ಇರಲಿ, ವಿವಾದ ಹುಟ್ಟಿದ ಜಾಗದಲ್ಲೇ ‘ಪುಷ್ಪ 2’ ಸಿನಿಮಾ ದಾಖಲೆ ಬರೆದಿರುವುದು ವಿಶೇಷವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.