ಅಲ್ಲು ಅರ್ಜುನ್-ತ್ರಿವಿಕ್ರಮ್ ಸಿನಿಮಾದ ಕತೆ ಏನು? ನಿರ್ಮಾಪಕ ಕೊಟ್ಟರು ಸುಳಿವು
Allu Arjun: ‘ಪುಷ್ಪ 2’ ಸಿನಿಮಾ ಮೂಲಕ ಐತಿಹಾಸಿಕ ಹಿಟ್ ಸಿನಿಮಾ ನೀಡಿರುವ ಅಲ್ಲು ಅರ್ಜುನ್ ಇದೀಗ ಮುಂದಿನ ಸಿನಿಮಾಗಳನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳುತ್ತಿದ್ದಾರೆ. ಇದೀಗ ಅಲ್ಲು ಅರ್ಜುನ್, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ನಟಿಸಲಿದ್ದಾರೆ. ಅಲ್ಲು ಅರ್ಜುನ್-ತ್ರಿವಿಕ್ರಮ್ ಕಾಂಬಿನೇಷನ್ನ ನಾಲ್ಕನೇ ಸಿನಿಮಾ ಇದಾಗಿದೆ. ಆದರೆ ಈ ಸಿನಿಮಾದ ಕತೆ ಬಹಳ ಭಿನ್ನವಾಗಿರಲಿದೆ.

ಅಲ್ಲು ಅರ್ಜುನ್ (Allu Arjun) ‘ಪುಷ್ಪ’ ಸಿನಿಮಾ ಸರಣಿಗಾಗಿ ಬರೋಬ್ಬರಿ ಐದು ವರ್ಷ ಮುಡಿಪಾಗಿಟ್ಟರು. 2020 ರಿಂದಲೂ ಅವರು ಪುಷ್ಪ ಹೊರತಾಗಿ ಇನ್ಯಾವ ಪಾತ್ರವನ್ನೂ ಉಸಿರಾಡಿರಲಿಲ್ಲ. ಇದೀಗ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಹೊಸ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ಅಲ್ಲು ಅರ್ಜುನ್, ತಮ್ಮ ಮುಂದಿನ ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶನದಲ್ಲಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ತ್ರಿವಿಕ್ರಮ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ನಲ್ಲಿ ಮೂರು ಸಿನಿಮಾಗಳು ಬಂದಿದ್ದು, ಮೂರು ಸಹ ಬ್ಲಾಕ್ ಬಸ್ಟರ್ಗಳಾಗಿವೆ. ಇದೀಗ ಮೂರನೇ ಬಾರಿ ಈ ಜೋಡಿ ಒಂದಾಗುತ್ತಿದೆ. ಆದರೆ ಈ ಬಾರಿ ಬಹಳ ಭಿನ್ನವಾದ ಕತೆಯನ್ನು ಇವರು ಕೈಗೆತ್ತಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್ ಕಾಂಬಿನೇಷನ್ ಸಿನಿಮಾಕ್ಕೆ ಬಂಡವಾಳ ತೊಡಗಿಸುತ್ತಿರುವ ಸಹ ನಿರ್ಮಾಪಕ ನಾಗ ವಂಶಿ ಇತ್ತೀಚೆಗೆ ಬೇರೊಂದು ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲು ಅರ್ಜುನ್-ತ್ರಿವಿಕ್ರಮ್ ಸಿನಿಮಾ ಬಗ್ಗೆ ಮಾತನಾಡಿ, ಅದೊಂದು ಬಹಳ ದೊಡ್ಡ ಪ್ರಾಜೆಕ್ಟ್ ಈ ಬಾರಿ ಮೈಥಾಲಜಿ ಕತೆಯುಳ್ಳ ಸಿನಿಮಾ ಅನ್ನು ಕೈಗೆತ್ತಿಕೊಂಡಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಜಾರಿಯಲ್ಲಿದೆ’ ಎಂದಿದ್ದಾರೆ.
ತ್ರಿವಿಕ್ರಮ್ಗೆ ಪೌರಾಣಿಕ ಕತೆಗಳು, ಮಹಾಭಾರತ, ರಾಮಾಯಣ ಕತೆಗಳ ಮೇಲೆ ಅತೀವ ಪ್ರೀತಿ, ಗೌರವ ಮತ್ತು ಹಿಡಿತವೂ ಇದೆ. ತಮ್ಮ ಈವರೆಗಿನ ಸಿನಿಮಾಗಳಲ್ಲಿ ಹಲವು ಕಡೆಗಳಲ್ಲಿ ಅವರು ಪೌರಾಣಿಕ ಪಾತ್ರಗಳ ಸಂಭಾಷಣೆಗಳನ್ನು, ಉಲ್ಲೇಖಗಳನ್ನು ಎಳೆದು ತಂದಿದ್ದಾರೆ. ಇದೀಗ ಮೊದಲ ಬಾರಿಗೆ ನೇರವಾಗಿ ಪೌರಾಣಿಕ ಕತೆಯೊಂದನ್ನೇ ಸಿನಿಮಾ ಮಾಡಲು ತ್ರಿವಿಕ್ರಮ್ ಮುಂದಾಗಿದ್ದಾರೆ. ಅಲ್ಲು ಅರ್ಜುನ್ ಪಾಲಿಗೆ ಇದು ಎರಡನೇ ಪೌರಾಣಿಕ ಸಿನಿಮಾ. ಈ ಹಿಂದೆ ಅನುಷ್ಕಾ ಶೆಟ್ಟಿ ನಟಿಸಿದ್ದ ‘ರುದ್ರಮ್ಮದೇವಿ’ ಪೌರಾಣಿಕ ಸಿನಿಮಾದ ಅತಿಥಿ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸಿದ್ದರು.
ಇದನ್ನೂ ಓದಿ:ಬಾಲಿವುಡ್ ನಟರಿಗೂ ಅಲ್ಲು ಅರ್ಜುನ್ಗೂ ಏನು ವ್ಯತ್ಯಾಸ? ತಿಳಿಸಿದ ಗಣೇಶ್ ಆಚಾರ್ಯ
ಆದರೆ ಪೌರಾಣಿಕ ಸಿನಿಮಾ ಒಂದರಲ್ಲಿ ನಾಯಕ ನಟನಾಗಿ ಇದು ಅಲ್ಲು ಅರ್ಜುನ್ಗೆ ಮೊದಲ ಸಿನಿಮಾ. ಈ ಸಿನಿಮಾದ ಪಾತ್ರಕ್ಕಾಗಿ ಅಲ್ಲು ಅರ್ಜುನ್ ವಿಶೇಷ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ‘ಪುಷ್ಪ’ ರೀತಿ ಅಲ್ಲದೆ ಸಿನಿಮಾ ಅನ್ನು ಒಂದು ವರ್ಷದಲ್ಲಿ ಮುಗಿಸಿ ಒಂದೇ ವರ್ಷದಲ್ಲಿ ಬಿಡುಗಡೆ ಸಹ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ತ್ರಿವಿಕ್ರಮ್ ಜೊತೆಗಿನ ಸಿನಿಮಾದ ಬಳಿಕ ಅಲ್ಲು ಅರ್ಜುನ್ ಒಂದು ಹಿಂದಿ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:13 am, Wed, 26 March 25