‘ಹುಲಿ ಬಳಿ ಮದುವೆ ಆಗಿದೆಯಾ ಎಂದು ಕೇಳಲ್ಲ’; ವಿವಾಹ ಆಗದೇ ಮಗು ಪಡೆಯುತ್ತಿರೋ ಬಗ್ಗೆ ಭಾವನಾ ಮಾತು
Bhavana Ramanna: ಪ್ರಸಿದ್ಧ ಕನ್ನಡ ನಟಿ ಭಾವನಾ ಅವರು ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಿಣಿಯಾಗಿದ್ದಾರೆ ಎಂದು ಘೋಷಿಸಿದ್ದಾರೆ. ಮದುವೆಯಾಗದೆ ತಾಯಿಯಾಗುವ ತಮ್ಮ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಹೆಣ್ಣು ಮಕ್ಕಳನ್ನು ಪಡೆಯಲು ಮದುವೆಯಾಗಬೇಕೆಂದೇನೂ ಇಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ತಮ್ಮ ನಿರ್ಧಾರಕ್ಕೆ ತಂದೆಯ ಬೆಂಬಲವಿದೆ ಎಂದೂ ಭಾವನಾ ತಿಳಿಸಿದ್ದಾರೆ.

ಬಣ್ಣದ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿರೋ ಭಾವನಾ ರಾಮಣ್ಣ (Bhavana Ramanna) ಅವರು ಈಗ ಒಂದು ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದಾರೆ. ಅವರಿಗೆ ಇನ್ನೂ ವಿವಾಹ ಆಗಿಲ್ಲ. ಆದರೆ, ಅವರು ಪ್ರೆಗ್ನೆಂಟ್ ಆಗಿದ್ದಾರೆ. ‘ಇನ್ ವಿಟ್ರೊ ಫರ್ಟಿಲೈಸರ್’ (ಐವಿಎಫ್) ತಂತ್ರಜ್ಞಾನದ ಮೂಲಕ ಭಾವನಾ ಅವರು ಮಗು ಪಡೆಯುತ್ತಿದ್ದರೆ. ಈ ಬಗ್ಗೆ ಭಾವನಾ ಮಾತನಾಡಿದ್ದಾರೆ. ಮದುವೆ ಆಗಿಯೇ ಮಗು ಪಡೆಯಬೇಕು ಎಂಬುದು ಎಲ್ಲಿಯೂ ಇಲ್ಲ ಎಂದು ಅವರು ಅಭಿಪ್ರಾಯ ಹೊರಹಾಕಿದ್ದಾರೆ.
‘ಹೆಣ್ಣಿಗೆ ಮಕ್ಕಳು ಪಡೆಯೋಕೆ ಮದುವೆ ಆಗಬೇಕು ಅನ್ನೋದು ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಜೀವನದಲ್ಲಿ ಸಂಗಾತಿ ಬೇಕು ನಿಜ. ಆದರೆ, ಮಕ್ಕಳು ಹೊಂದ ಬೇಕು ಎಂದು ವಿವಾಹ ಆಗಬಾರದು. ನನಗೆ ತಾಯ್ತನ ಅನುಭವಿಸುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಪ್ರಾಕೃತಿಕವಾಗಿ ಅದು ನನಗೆ ಸಿಕ್ಕಿದೆ. ಪ್ರತಿ ಪ್ರಾಣಿಯೂ ಕೂಡ ಮಗುವನ್ನು ಪಡೆಯುವ ಹಕ್ಕನ್ನು ಹೊಂದಿದೆ. ಗುಬ್ಬಚ್ಚಿ ಬಳಿ, ಹುಲಿ-ಸಿಂಹದ ಬಳಿ ಮದುವೆ ಆಗಿದೆಯಾ ಎಂದು ನಾವು ಕೇಳೋದಿಲ್ಲ. ಹಸುಗಳಲ್ಲಿ ಐವಿಎಫ್ ಮೂಲಕ ಕರು ಮಾಡಿಸಲಾಗುತ್ತದೆ’ ಎಂದಿದ್ದಾರೆ ಭಾವನಾ.
‘ನಾನು ಬೆಂಗಳೂರಲ್ಲೇ ಟ್ರೀಟ್ಮೆಂಟ್ ಮಾಡಿಸಿದ್ದೇನೆ. ದೆಹಲಿಗೆ ಹೋಗುವಂತೆ ಕೆಲವರು ಸೂಚಿಸಿದ್ದರು. ಇದನ್ನು ಜನರಿಂದ ಮುಚ್ಚಿಡುವಂತೆ ಸೂಚಿಸಿದ್ದರು. ಆದರೆ, ನಾನು ಆಗು-ಹೋಗುಗಳ ಬಗ್ಗೆ ಅಪ್ಡೇಟ್ ನೀಡಲೇಬೇಕು. ಅಭಿಮಾನಿಗಳು ಪ್ರೀತಿ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳಬೇಕಿದೆ. ನಾನು ಮುಚ್ಚು-ಮರೆ ಮಾಡಬಹುದಿತ್ತು. ಹೆದರಿ ಬದುಕೋ ಅಗತ್ಯ ನನಗೆ ಇಲ್ಲ. ನಮ್ಮ ಸಮಾಜ ಶುರುವಾಗೋದು ಮನೆಯಿಂದ. ತಂದೆಯೇ ಇದಕ್ಕೆ ಒಪ್ಪಿಗೆ ಕೊಟ್ಟಿರುವಾಗ ಭಯ ಪಡೋದು ಏಕೆ’ ಎಂಬುದು ಅವರ ಪ್ರಶ್ನೆ.
‘ಹೆಣ್ಣು ಯಾವಾಗಲೂ ಹೆಣ್ಣಾಗಿಯೇ ಇರುತ್ತಾಳೆ. ಗಂಡಸು ಬಂದ ಬಳಿಕ ಅವಳು ಹೆಣ್ಣಾಗೋದಿಲ್ಲ’ ಎಂದಿದ್ದಾರೆ ಭಾವನಾ. ಈ ಮೂಲಕ ಮದುವೆ ಆಗದೆ ಮಗು ಪಡೆಯೋದು ತಪ್ಪಲ್ಲ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಇದನ್ನೂ ಓದಿ: ನನ್ನ ಮಕ್ಕಳಿಗೆ ತಂದೆ ಇಲ್ಲದೇ ಇರಬಹುದು, ಆದರೆ..: ಪ್ರೆಗ್ನೆನ್ಸಿ ಬಗ್ಗೆ ನಟಿ ಭಾವನಾ ಪ್ರತಿಕ್ರಿಯೆ
‘40ನೇ ವಯಸ್ಸಿಗೆ ಬಂದಿದ್ದೇನೆ ಎಂದರೆ ನನ್ನದೇ ಲೈಫ್ ಅಭ್ಯಾಸ ಆಗಿ ಬಿಟ್ಟಿರುತ್ತದೆ. ಈ ವೇಳೆ ಮತ್ತೊಬ್ಬರು ಜೀವನದಲ್ಲಿ ಬರೋದು ಎಂದರೆ ಬಲು ಕಷ್ಟ. ಅವರಿಗೂ ಅದು ಹಿಂಸೆ. ವಿವಾಹ ಆದ ಬಳಿಕ ಒಂದಷ್ಟು ಕಾಂಪ್ಲಿಕೇಷನ್ ಇರುತ್ತದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:51 pm, Sat, 5 July 25








