ಎಲ್2: ಎಂಪುರಾನ್: ಬಿಜೆಪಿ ವಿರೋಧಕ್ಕೆ ಮಣಿದ ಮೋಹನ್ಲಾಲ್ 24 ಕಡೆ ಕತ್ತರಿ
L2:Empuraan: ಮೋಹನ್ಲಾಲ್ ನಟಿಸಿ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿರುವ ‘ಎಲ್2 ಎಂಪುರಾನ್’ ಸಿನಿಮಾ ವಿವಾದಕ್ಕೆ ಸಿಲುಕಿದೆ. ಸಿನಿಮಾದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಆಕ್ರೋಶದ ಬೆನ್ನಲ್ಲೆ ನಟ ಮೋಹನ್ಲಾಲ್ ಕ್ಷಮೆ ಕೇಳಿದ್ದು ಮಾತ್ರವೇ ಅಲ್ಲದೆ ಬರೋಬ್ಬರಿ 24 ಕಡೆ ಕತ್ತರಿ ಪ್ರಯೋಗ ಮಾಡಲಾಗಿದೆ.

ಮೋಹನ್ಲಾಲ್ (Mohanlal) ನಟನೆಯ ‘ಎಲ್2 ಎಂಪುರಾನ್’ (L2:Empuraan) ಸಿನಿಮಾ ಕಳೆದ ಶುಕ್ರವಾರವಷ್ಟೆ ಬಿಡುಗಡೆ ಆಗಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿರುವ ಈ ಸಿನಿಮಾಕ್ಕೆ ಕೇರಳ ಮಾತ್ರವಲ್ಲದೆ ಹಲವು ರಾಜ್ಯಗಳಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಕೇರಳದಲ್ಲಂತೂ ಈವರೆಗೆ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಸರು ತೆಗೆದುಕೊಂಡಿದೆ. ಆದರೆ ಸಿನಿಮಾ ಬಿಡುಗಡೆ ಆದ ಮೇಲೆ ಸಿನಿಮಾದ ಬಗ್ಗೆ ಕೆಲ ಬಲಪಂಥೀಯ ಗುಂಪುಗಳು ಮತ್ತು ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಒಬ್ಬ ಬಿಜೆಪಿ ಮುಖಂಡರು ಸಿನಿಮಾದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಸಹ ಏರಿದ್ದಾರೆ. ದೀಗ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳ ಒತ್ತಾಯಕ್ಕೆ ಮಣಿದಿರುವ ಮೋಹನ್ಲಾಲ್ ಸಿನಿಮಾಕ್ಕೆ ಬರೋಬ್ಬರಿ 24 ಕಡೆ ಕತ್ತರಿ ಹಾಕಿದ್ದಾರೆ.
‘ಎಂಪುರಾನ್’ ಸಿನಿಮಾನಲ್ಲಿ ಬಿಜೆಪಿಗೆ ವ್ಯತಿರಿಕ್ತವಾಗಿರುವ ಕೆಲ ದೃಶ್ಯಗಳು, ಸಂಭಾಷಣೆಗಳು ಇವೆ ಎನ್ನಲಾಗುತ್ತಿದೆ. ಅಲ್ಲದೆ ಹಿಂದೂ ತೀವ್ರಗಾಮಿತನವನ್ನು ಟೀಕಿಸುವ ಕೆಲ ದೃಶ್ಯ ಹಾಗೂ ಸನ್ನಿವೇಶಗಳು ಇವೆ ಎನ್ನಲಾಗುತ್ತಿವೆ. ಹಿಂದೂ ವ್ಯಕ್ತಿಯೊಬ್ಬನ್ನು ಮುಸ್ಲಿಂ ವಿರೋಧಿಯನ್ನಾಗಿ ತೋರಿಸಲಾಗಿದೆ. ಬಾಬಾ ಹೆಸರಿನ ವ್ಯಕ್ತಿಯೊಬ್ಬ ಮುಸ್ಲಿಂ ಗರ್ಭಿಣಿ ಮಹಿಳೆಯೊಬ್ಬಾಕೆಯನ್ನು ಕೊಲ್ಲುವ ದೃಶ್ಯವಿದ್ದು, ಇದು ಗೋಧ್ರಾ ಹತ್ಯಾ ಕಾಂಡದ ನಂತರದ ಘಟನೆಯನ್ನು ನೆನಪಿಸುವಂತಿದೆ ಎಂಬ ಆರೋಪಗಳು ಸಿನಿಮಾ ಮೇಲೆ ಕೇಳಿ ಬಂದಿದ್ದವು. ‘ಎಂಪುರಾನ್’ ಸಿನಿಮಾ ಬಿಜೆಪಿಗೆ ವ್ಯತಿರಿಕ್ತವಾಗಿ ಹಾಗೂ ಹಿಂದುತ್ವದ ರಕ್ಷಕರಿಗೆ ವ್ಯತಿರಿಕ್ತವಾಗಿ ಮಾಡಲಾದ ಸಿನಿಮಾ ಎಂಬ ಮಾತುಗಳು ಕೇಳಿ ಬಂದಿದ್ದವು.
ಆರೋಪಗಳು ಕೇಳಿ ಬರುತ್ತಿದ್ದಂತೆ ನಟ ಮೋಹನ್ಲಾಲ್ ಕ್ಷಮೆ ಕೇಳಿದರು. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿದ ಮೋಹನ್ಲಾಲ್ ಯಾರ ಮನಸ್ಸಿಗೂ ಘಾಸಿ ಮಾಡುವುದು ಉದ್ದೇಶವಲ್ಲ ಎಂದಿದ್ದರು. ಅಲ್ಲದೆ ಅಗತ್ಯವಾದುದನ್ನು ಮಾಡುತ್ತೇನೆ ಎಂದಿದ್ದರು. ಆ ಮೂಲಕ ಆಕ್ಷೇಪಾರ್ಹ ದೃಶ್ಯಗಳನ್ನು ಕತ್ತರಿಸುತ್ತೇವೆ ಎಂದು ಸುಳಿವು ನೀಡಿದ್ದರು. ಇದೀಗ ಸಿನಿಮಾದ ಬರೋಬ್ಬರಿ 24 ದೃಶ್ಯಗಳಿಗೆ ಕತ್ತರಿ ಆಡಿಸಲಾಗಿದೆ.
ಇದನ್ನೂ ಓದಿ:‘ಮುಸ್ಲಿಮರ ಬಳಿ ಮೋಹನ್ಲಾಲ್ ಕ್ಷಮೆ ಕೇಳಬೇಕು’; ಮಾಡಿದ ತಪ್ಪೇನು?
ಸಿನಿಮಾದ ಹಲವು ದೃಶ್ಯಗಳನ್ನು ಕತ್ತರಿಸಲಾಗಿದೆ. ಕೆಲವು ಪಾತ್ರಗಳ ಹೆಸರು ಬದಲಾವಣೆ ಮಾಡಲಾಗಿದೆ. ಸಂಭಾಷಣೆಗಳನ್ನು ಕೆಲವು ಕಡೆ ಮ್ಯೂಟ್ ಮಾಡಲಾಗಿದೆ. ಹಿನ್ನೆಲೆ ಸಂಗೀತ ಕೆಲವೆಡೆ ಬದಲಿಸಲಾಗಿದೆ ಹೀಗೆ ಒಟ್ಟು 24 ಬದಲಾವಣೆಗಳನ್ನು ಸಿನಿಮಾಕ್ಕೆ ಮಾಡಲಾಗಿದೆ. ಸಿನಿಮಾದ ನಿರ್ಮಾಪಕ ಆಂಟೊನಿ ಪೆರಂಬೂರು, ಮೋಹನ್ಲಾಲ್ಗೆ ಬಹಳ ಆಪ್ತರಾಗಿದ್ದು, ಮೋಹನ್ಲಾಲ್ ಅವರೇ ಮುಂದೆನಿಂತು ದೃಶ್ಯಗಳಿಗೆ ಕತ್ತರಿ ಹಾಕಿಸಿದ್ದಾರೆ ಎನ್ನಲಾಗುತ್ತಿದೆ.
‘ಎಂಪುರಾನ್’ ಸಿನಿಮಾದಲ್ಲಿ ಹಿಂದೂ ವಿರೋಧಿ ಧ್ವನಿ ಮೂಡಲು ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಕಾರಣ ಎಂಬ ಆರೋಪ ಕೇಳಿ ಬರುತ್ತಿದ್ದು ಬಿಜೆಪಿಯ ಕಾರಯಕರ್ತರು, ಮುಖಂಡರು ಪೃಥ್ವಿರಾಜ್ ಸುಕುಮಾರನ್ ಅವರನ್ನು ಗುರಿ ಮಾಡಿಕೊಂಡು ನಿಂದನೆ ಮಾಡಿದ್ದಾ. ಆದರೆ ಪೃಥ್ವಿರಾಜ್ ಸುಕುಮಾರನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರ ತಾಯಿ ಮಾಧ್ಯಮಗಳೊಟ್ಟಿಗೆ ಮಾತನಾಡಿ, ‘ಯಾರನ್ನೂ ದಾರಿ ತಪ್ಪಿಸುವ ಕಾರ್ಯವನ್ನು ನನ್ನ ಮಗ ಮಾಡಿಲ್ಲ. ಮೋಹನ್ಲಾಲ್ ಸೇರಿದಂತೆ ಎಲ್ಲರಿಗೂ ಸಿನಿಮಾದ ಕತೆ, ಸಂಭಾಷಣೆ ಗೊತ್ತಿತ್ತು’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ