ನಟ ಆಮಿರ್ ಖಾನ್ ಮೂರನೇ ಮದುವೆ: ಭಾರಿ ಮಳೆಯಲ್ಲೇ ಸಿಂಗಾರಗೊಂಡ ಪಾಲಿ ಹಿಲ್ ನಿವಾಸ
ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಅವರು ಇಂದು (ಜುಲೈ 5) ಮದುವೆ ಆಗುತ್ತಿದ್ದಾರೆ. ಆಮಿರ್ ಸಹೋದರಿ ಸೇರಿದಂತೆ ಆಪ್ತ ಕುಟುಂಬಸ್ಥರು ಈಗಾಗಲೇ ಮನೆಗೆ ಆಗಮಿಸಿದ್ದಾರೆ. ಶನಿವಾರ ಮುಂಬೈನಲ್ಲಿ ಸುರಿದ ಭಾರಿ ಮಳೆಯ ನಡುವೆಯೂ ಕೆಲಸಗಾರರು ಮದುವೆ ಸಿದ್ಧತೆ ನಡೆಸಿದ ವಿಡಿಯೋ ವೈರಲ್ ಆಗಿದೆ.

ಮುಖ್ಯಾಂಶಗಳು
- ಗೌರಿ ಸ್ಪ್ರ್ಯಾಟ್ ಜೊತೆ 3ನೇ ಮದುವೆ ಆಗುತ್ತಿರುವ ಜನಪ್ರಿಯ ನಟ ಆಮಿರ್ ಖಾನ್.
- ಜೋರು ಮಳೆಯ ನಡುವೆಯೂ ಪಾಲಿ ಹಿಲ್ ನಿವಾಸದಲ್ಲಿ ಮದುವೆಗೆ ಸಕಲ ತಯಾರಿ.
- ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬದವರಿಗೆ ಮಾತ್ರ ಈ ಮದುವೆಗೆ ಆಹ್ವಾನ.
ಬಾಲಿವುಡ್ ನಟ ಆಮಿರ್ ಖಾನ್ (Aamir Khan) ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. 60 ವರ್ಷದ ನಟ ಆಮಿರ್ ಖಾನ್ ಅವರು ತಮ್ಮ ಪ್ರೇಯಸಿ ಗೌರಿ ಸ್ಪ್ರ್ಯಾಟ್ (Gauri Spratt) ಅವರೊಂದಿಗೆ ಇಂದು (ಜುಲೈ 5) ಮೂರನೇ ಮದುವೆ ಆಗುತ್ತಿದ್ದಾರೆ. ನಟನ ಮದುವೆಯ ಸಂಭ್ರಮದ ಸಿದ್ಧತೆಗಳು ಶನಿವಾರವೇ ಜೋರಾಗಿ ನಡೆಯಿತು. ಭಾರಿ ಮಳೆಯ ನಡುವೆಯೂ ಮದುವೆ ತಯಾರಿ ನಡೆದ ವಿಡಿಯೋಗಳು ವೈರಲ್ ಆಗಿವೆ.
ಮುಂಬೈನ ಪಾಲಿ ಹಿಲ್‌ನಲ್ಲಿರುವ ಆಮಿರ್ ಖಾನ್ ಅವರ ನಿವಾಸದಲ್ಲಿ ಮದುವೆ ಶಾಸ್ತ್ರಗಳು ನೆರವೇರಲಿದ್ದು, ಇಡೀ ಮನೆಯನ್ನು ವಿದ್ಯುತ್ ದೀಪಗಳಿಂದ ಹಾಗೂ ಸುಂದರವಾದ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗುತ್ತಿದೆ. ಮುಂಬೈನಲ್ಲಿ ಭಾರೀ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ, ಕಾರ್ಮಿಕರು ರೇನ್‌ಕೋಟ್ ಧರಿಸಿ ಮದುವೆಗೆ ಬೇಕಾದ ಪೀಠೋಪಕರಣಗಳು ಹಾಗೂ ಅಲಂಕಾರಿಕ ಸಾಮಗ್ರಿಗಳನ್ನು ಜೋಡಿಸುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮದುವೆ ಬಗ್ಗೆ ಆಮಿರ್ ಖಾನ್ ಹೇಳಿದ್ದೇನು?
ಇತ್ತೀಚೆಗೆ ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರ ‘ಪ್ರೀತಮ್ ಆ್ಯಂಡ್ ಪೆಡ್ರೋ’ ಚಿತ್ರದ ಪ್ರದರ್ಶನದಲ್ಲಿ ಭಾಗವಹಿಸಿದ್ದ ಆಮಿರ್ ಖಾನ್, ಮಾಧ್ಯಮಗಳೊಂದಿಗೆ ಮಾತನಾಡುವಾಗ ತಮ್ಮ ಮದುವೆಯ ಸುದ್ದಿಯನ್ನು ಅಧಿಕೃತಪಡಿಸಿದ್ದರು. ‘ಹೌದು, ಜುಲೈ 5ರಂದು ನನ್ನ ಮದುವೆ ನಡೆಯುತ್ತಿದೆ. ಇದು ಅತ್ಯಂತ ಸರಳ ಮತ್ತು ಆಪ್ತರ ಸಮ್ಮುಖದಲ್ಲಿ ನಡೆಯಲಿರುವ ಮದುವೆಯಾಗಿದ್ದು, ಮನೆಯಲ್ಲೇ ಆಯೋಜಿಸಿದ್ದೇವೆ. ಜುಲೈ 5 ನಮ್ಮಿಬ್ಬರ ಜೀವನದಲ್ಲಿ ಅತ್ಯಂತ ವಿಶೇಷವಾದ ದಿನ. ಕೇವಲ ಎರಡು ಕುಟುಂಬದ ಸದಸ್ಯರು ಮತ್ತು ಕೆಲವು ಆಪ್ತ ಸ್ನೇಹಿತರು ಮಾತ್ರ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ನಮ್ಮ ಹೊಸ ಜೀವನಕ್ಕೆ ಎಲ್ಲರ ಹಾರೈಕೆ ಇರಲಿ’ ಎಂದು ಆಮಿರ್ ಖಾನ್ ಹೇಳಿದ್ದಾರೆ.
View this post on Instagram
ಆಮಿರ್ ಖಾನ್ ಅವರ ಹಿಂದಿನ ದಾಂಪತ್ಯ ಜೀವನ:
ಇದು ಆಮಿರ್ ಖಾನ್ ಅವರಿಗೆ ಮೂರನೇ ಮದುವೆಯಾಗಿದೆ. 1986ರಲ್ಲಿ ಆಮಿರ್ ಖಾನ್ ಅವರು ಮೊದಲ ಬಾರಿಗೆ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. 2002ರಲ್ಲಿ ಇವರು ವಿಚ್ಛೇದನ ಪಡೆದರು. ನಂತರ 2005ರಲ್ಲಿ ನಿರ್ಮಾಪಕಿ, ನಿರ್ದೇಶಕಿ ಕಿರಣ್ ರಾವ್ ಅವರನ್ನು ಆಮಿರ್ ಮದುವೆಯಾದರು. 16 ವರ್ಷಗಳ ದಾಂಪತ್ಯದ ನಂತರ 2021ರಲ್ಲಿ ಅವರು ಬೇರ್ಪಟ್ಟರು. ಅವರಿಗೆ ಆಜಾದ್ ರಾವ್ ಖಾನ್ ಎಂಬ ಮಗನಿದ್ದು, ಇಬ್ಬರೂ ಜೊತೆಯಾಗಿಯೇ ಮಗನ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಆಮಿರ್ ಖಾನ್ ಮದುವೆಗೂ ಮುನ್ನ ಕ್ಷಮೆಯಾಚಿಸಿದ ಸಹೋದರ ಫೈಸಲ್ ಖಾನ್: ಹಳೆಯ ವಿವಾದಕ್ಕೆ ತೆರೆ
25 ವರ್ಷಗಳ ಪರಿಚಯ ಪ್ರೀತಿಯಾಗಿದ್ದು ಹೇಗೆ?
ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಸುಮಾರು 25 ವರ್ಷಗಳ ಹಿಂದೆಯೇ ಮೊದಲ ಬಾರಿಗೆ ಭೇಟಿಯಾಗಿದ್ದರು. ಆದರೆ ದಿನಕಳೆದಂತೆ ಇಬ್ಬರ ನಡುವಿನ ಸಂಪರ್ಕ ಇರಲಿಲ್ಲ. ಕೆಲವು ವರ್ಷಗಳ ನಂತರ ಮತ್ತೆ ಇಬ್ಬರು ಭೇಟಿಯಾದಾಗ ಇವರ ಸ್ನೇಹ ಗಟ್ಟಿಯಾಗಿ, ಅದು ಪ್ರೀತಿಗೆ ತಿರುಗಿದೆ. ಇದೇ ವರ್ಷದ ಆರಂಭದಲ್ಲಿ ನಡೆದ ತಮ್ಮ 60ನೇ ವರ್ಷದ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಆಮಿರ್ ಖಾನ್ ಅವರು ಗೌರಿ ಸ್ಪ್ರ್ಯಾಟ್ ಅವರನ್ನು ಮೊದಲ ಬಾರಿಗೆ ಮಾಧ್ಯಮಗಳಿಗೆ ಪರಿಚಯಿಸಿದ್ದರು. ಸದ್ಯ ಈ ಜೋಡಿಯ ಹೊಸ ಜೀವನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




