‘ದೃಶ್ಯಂ 3’ ಕಲೆಕ್ಷನ್ 500 ಕೋಟಿ ರೂಪಾಯಿ; 4ನೇ ಭಾಗ ಮಾಡಲ್ಲ: ಚಿತ್ರತಂಡದ ಸ್ಪಷ್ಟನೆ
ದೃಶ್ಯಂ ಕಥೆ ಇಲ್ಲಿಗೆ ಮುಕ್ತಾಯಗೊಂಡಿದೆ. ಇದರ ಅಂತ್ಯವು ಬಹಳ ಸೂಕ್ತವಾಗಿದ್ದು, ಈ ಫ್ರಾಂಚೈಸಿಗೆ ಜನರು ನೀಡಿದ ಪ್ರತಿಕ್ರಿಯೆಗೆ ಚಿತ್ರತಂಡ ಖುಷಿಯಾಗಿದೆ. ‘ದೃಶ್ಯಂ 3’ ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದರೂ ಕೂಡ ನಾಲ್ಕನೇ ಭಾಗವನ್ನು ಮಾಡುವುದಿಲ್ಲ ಎಂದು ನಿರ್ದೇಶಕರು ಖಡಾಖಂಡಿತವಾಗಿ ಹೇಳಿದ್ದಾರೆ.

ಅಭಿಷೇಕ್ ಪಾಠಕ್ ನಿರ್ದೇಶನದ, ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆಗಳನ್ನು ಬರೆಯುತ್ತಿದೆ. ವಿಶ್ವಾದ್ಯಂತ ಬಿಡುಗಡೆಯಾದ ಕೇವಲ 12 ದಿನಗಳಲ್ಲಿ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಬರೋಬ್ಬರಿ 500 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್ ಮಾಡಿ ಸತತ ಯಶಸ್ಸಿನ ಹೆಜ್ಜೆ ಇಡುತ್ತಿದೆ. ಸಿನಿಮಾ ಪಡೆದಿರುವ ಈ ಅಭೂತಪೂರ್ವ ಯಶಸ್ಸಿನ ನಡುವೆಯೂ, ನಿರ್ದೇಶಕ ಅಭಿಷೇಕ್ ಪಾಠಕ್ ಅವರು ‘ದೃಶ್ಯಂ’ ಫ್ರಾಂಚೈಸಿಯ ನಾಲ್ಕನೇ ಭಾಗದ (ದೃಶ್ಯಂ 4) ಬಗ್ಗೆ ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
ಸ್ಯಾಕ್ನಿಲ್ಕ್ ವರದಿ ಪ್ರಕಾರ, ‘ದೃಶ್ಯಂ 3’ ಚಿತ್ರವು ಜಾಗತಿಕವಾಗಿ 501.80 ಕೋಟಿ ರೂ. ಗಳಿಸಿದ್ದರೆ, ಭಾರತದಲ್ಲೇ 323.50 ಕೋಟಿ ರೂ. ನೆಟ್ ಕಲೆಕ್ಷನ್ ದಾಖಲಿಸಿದೆ. ಮೊದಲ ದಿನವೇ 62 ಕೋಟಿ ರೂ.ಗಳ ಭರ್ಜರಿ ಓಪನಿಂಗ್ ಪಡೆದಿದ್ದ ಚಿತ್ರ, ಮೊದಲ ವಾರದಲ್ಲೇ 245.50 ಕೋಟಿ ರೂ. ಬಾಚಿಕೊಂಡಿತ್ತು. ಇನ್ನು ಎರಡನೇ ವಿಕೆಂಡ್ನಲ್ಲೂ 60 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಾಣುವ ಮೂಲಕ ಅಜಯ್ ದೇವಗನ್ ವೃತ್ತಿಜೀವನದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರಹೊಮ್ಮಿದೆ. ಅಲ್ಲದೆ, 2026ರ ಸಾಲಿನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರಗಳ ಪೈಕಿ ಇದು ಎರಡನೇ ಸ್ಥಾನದಲ್ಲಿದೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಿರ್ದೇಶಕ ಅಭಿಷೇಕ್ ಪಾಠಕ್ ಅವರು, ಈ ಫ್ರಾಂಚೈಸಿಯು ತನ್ನ ಸಹಜ ಅಂತ್ಯವನ್ನು ತಲುಪಿದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ 2ರ ದಿನವನ್ನು ‘ದೃಶ್ಯಂ ದಿನ’ವನ್ನಾಗಿ ಆಚರಿಸುವುದನ್ನು ಮುಂದುವರಿಸಲಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು. ಪ್ರೇಕ್ಷಕರಿಂದ ಸಿಗುತ್ತಿರುವ ಅಪಾರ ಪ್ರೀತಿ ಮತ್ತು ಮೆಚ್ಚುಗೆಯನ್ನು ಒಪ್ಪಿಕೊಳ್ಳುತ್ತಲೇ, ಕಥೆಯ ದೃಷ್ಟಿಯಿಂದ ಇದುವೇ ಸರಣಿಯ ಕೊನೆಯ ಭಾಗ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚಿತ್ರದ ಅಂತ್ಯವನ್ನು ಅತ್ಯಂತ ಸುಂದರವಾಗಿ ರೂಪಿಸಿರುವುದೇ ಜನರಿಗೆ ಹೆಚ್ಚು ಇಷ್ಟವಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಮುಂದುವರಿದು ಮಾತನಾಡಿರುವ ಅವರು, ‘ಒಂದು ವೇಳೆ ಪ್ರಯತ್ನಿಸಿದರೆ ಕಥೆಯನ್ನು ವಿಸ್ತರಿಸಲು ಸಾಕಷ್ಟು ಅವಕಾಶಗಳಿರಬಹುದು, ಆದರೆ ಅದರಲ್ಲಿ ಯಾವುದೇ ಅರ್ಥವಿಲ್ಲ. ನಾವು ಎಲ್ಲೋ ಒಂದು ಕಡೆ ಅದನ್ನು ನಿಲ್ಲಿಸಲೇಬೇಕಿತ್ತು ಮತ್ತು ಇದು ಫ್ರಾಂಚೈಸಿಗೆ ಅತ್ಯಂತ ಸುಂದರವಾದ ಮುಕ್ತಾಯವಾಗಿದೆ’ ಎಂದಿದ್ದಾರೆ ಅಭಿಷೇಕ್ ಪಾಠಕ್.
ಇದನ್ನೂ ಓದಿ: ಹಿಂದಿಯ ‘ದೃಶ್ಯಂ 3’ ಸಿನಿಮಾ ನೋಡಿ ಫಿದಾ ಆದ ನಟ ಮೋಹನ್ಲಾಲ್
‘ದೃಶ್ಯಂ 3’ ಇನ್ನೂ ತನ್ನ ಎರಡನೇ ವಾರದಲ್ಲಿದ್ದು, ಪ್ರೇಕ್ಷಕರು ಇಂದಿಗೂ ದೊಡ್ಡ ಸಂಖ್ಯೆಯಲ್ಲಿ ಥಿಯೇಟರ್ಗಳಿಗೆ ಬರುತ್ತಿದ್ದಾರೆ. ಎರಡನೇ ವಿಕೆಂಡ್ನ ಕಲೆಕ್ಷನ್ ಹಲವು ಸಿನಿಮಾಗಳ ಲೈಫ್ಟೈಮ್ ಗಳಿಕೆಗಿಂತ ಹೆಚ್ಚಿದೆ. ಹಾಗಾಗಿ, ಈ ಸುಂದರವಾದ ಅನುಭವವನ್ನು ಹಾಳು ಮಾಡಲು ನಾವು ಬಯಸುವುದಿಲ್ಲ’ ಎಂದು ಅಭಿಷೇಕ್ ಪಾಠಕ್ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




