‘ನಾನಂತೂ ನಿವೃತ್ತಿ ಪಡೆಯಲ್ಲ, ಅವರೇ ಹೊರದಬ್ಬಬೇಕು’; ನೇರವಾಗಿ ಹೇಳಿದ ಶಾರುಖ್ ಖಾನ್
ಶಾರುಖ್ ಖಾನ್ ಅವರು ಅಭಿಮಾನಿಗಳ ಮಧ್ಯೆ ತೆರಳಿ ಪ್ರಚಾರ ಮಾಡಿದ್ದು ಕಡಿಮೆ. ಬದಲಿಗೆ ಸೋಶಿಯಲ್ ಮೀಡಿಯಾ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರ ಮೂಲಕ ಪ್ರಮೋಷನ್ ಮಾಡುತ್ತಿದ್ದಾರೆ.
ಶಾರುಖ್ ಖಾನ್ (Shah Rukh Khan) ಅವರು ಚಿತ್ರರಂಗದಲ್ಲಿ ಹಲವು ದಶಕಗಳಿಂದ ಶ್ರಮಿಸುತ್ತಿದ್ದಾರೆ. ವೃತ್ತಿಜೀವನದಲ್ಲಿ ಅವರು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ದೇಶ-ವಿದೇಶದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಲವು ಕಲಾವಿದರು ಹಣ ಮಾಡಿಕೊಂಡು ನಟನೆಯಿಂದ ನಿವೃತ್ತಿ ಪಡೆಯುತ್ತಾರೆ. ಅದೇ ರೀತಿ ಸಾಯುವವರೆಗೂ ಬಣ್ಣ ಹಚ್ಚುವವರಿದ್ದಾರೆ. ಶಾರುಖ್ ಖಾನ್ ಅವರು ಎರಡನೇ ಸಾಲಿಗೆ ಸೇರುತ್ತಾರೆ. ಅವರು ನಟನೆಯಿಂದ ನಿವೃತ್ತಿ ಪಡೆಯಲ್ಲ ಎಂಬುದನ್ನು ಪುನರುಚ್ಛರಿಸಿದ್ದಾರೆ.
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಶಾರುಖ್ ಒಳ್ಳೆಯ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾದ ಒಟ್ಟೂ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ಸಮೀಪಿಸುವುದರಲ್ಲಿದೆ. ಶಾರುಖ್ ಖಾನ್ ಅವರು ಅಭಿಮಾನಿಗಳ ಮಧ್ಯೆ ತೆರಳಿ ಪ್ರಚಾರ ಮಾಡಿದ್ದು ಕಡಿಮೆ. ಬದಲಿಗೆ ಸೋಶಿಯಲ್ ಮೀಡಿಯಾ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರ ಮೂಲಕ ಪ್ರಮೋಷನ್ ಮಾಡುತ್ತಿದ್ದಾರೆ. ಟ್ವಿಟರ್ನಲ್ಲಿ ಅವರು ಪ್ರಶ್ನೋತ್ತರ ನಡೆಸುತ್ತಾರೆ. ಈ ವೇಳೆ ನಿವೃತ್ತಿ ಬಗ್ಗೆ ಕೇಳಲಾಗಿದೆ.
‘ನೀವು ನಿವೃತ್ತಿ ಪಡೆದ ನಂತರ ಬಾಲಿವುಡ್ನಲ್ಲಿ ದೊಡ್ಡ ವ್ಯಕ್ತಿ ಯಾರು’ ಎಂದು ಶಾರುಖ್ ಖಾನ್ಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಶಾರುಖ್ ಖಾನ್, ‘ನಾನು ನಟನೆಯಿಂದ ನಿವೃತ್ತಿ ಪಡೆಯುವ ಮಾತೇ ಇಲ್ಲ. ನನ್ನನ್ನು ಹೊರದಬ್ಬಬೇಕು. ಬಹುಶಃ ಆಗಲೂ ನಾನು ಮತ್ತಷ್ಟು ಹಾಟ್ ಆಗಿ ಕಂಬ್ಯಾಕ್ ಮಾಡುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: Pathaan Sequel: ಬರಲಿದೆ ‘ಪಠಾಣ್ 2’; ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಶಾರುಖ್ ಖಾನ್
‘ಪಠಾಣ್’ ಸಿನಿಮಾದಲ್ಲೂ ನಿವೃತ್ತಿಯ ಮಾತು ಬರುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ರೈಲ್ವೇ ಸೇತುವೆ ಮೇಲೆ ಕುಳಿತಿರುವ ದೃಶ್ಯವನ್ನು ತೋರಿಸಲಾಗುತ್ತದೆ. ‘ಚಿತ್ರರಂಗಕ್ಕೆ ಬಂದು 30 ವರ್ಷವಾಯಿತು. ಹೀಗಾಗಿ, ನಿವೃತ್ತಿ ಪಡೆಯಬೇಕು’ ಎಂದು ಶಾರುಖ್-ಸಲ್ಮಾನ್ ಖಾನ್ ಅಂದುಕೊಳ್ಳುತ್ತಾರೆ. ಅವರು ಹೋದ ಬಳಿಕ ಬಾಲಿವುಡ್ ಮುನ್ನಡೆಸುವವರು ಯಾರು ಎನ್ನುವ ಪ್ರಶ್ನೆ ಬರುತ್ತದೆ. ಅವರಿಗೆ ಯಾವ ಹೆಸರೂ ಸೂಕ್ತ ಎನಿಸುವುದಿಲ್ಲ. ಹೀಗಾಗಿ, ತಾವೇ ಚಿತ್ರರಂಗವನ್ನು ಮುನ್ನಡೆಸಬೇಕು ಎಂದು ಅವರಿಗೆ ಅನಿಸುತ್ತದೆ. ಈ ಮೂಲಕ ತಾವು ಇನ್ನಷ್ಟು ವರ್ಷ ಚಿತ್ರರಂಗದಲ್ಲಿ ಇರುವ ಬಗ್ಗೆ ಅವರು ಪರೋಕ್ಷವಾಗಿ ಮಾಹಿತಿ ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:07 am, Tue, 21 February 23