
ಗಾಯಕ, ನಟ ದಿಲ್ಜಿತ್ ದೊಸಾಂಜ್ (Diljit Dosanjh) ಅವರ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ಕಲಾವಿದರ ಜೊತೆ ಅವರು ಕೈ ಜೋಡಿಸಿರುವುದೇ ಇಷ್ಟಕ್ಕೆಲ್ಲ ಕಾರಣ ಆಗುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಎಂಥ ಪರಿಸ್ಥಿತಿ ನಿರ್ಮಾಣ ಆಗಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಪಾಕ್ ಉಗ್ರರು ಪಹಲ್ಗಾಮ್ನಲ್ಲಿ ದಾಳಿ ಮಾಡಿದ ಬಳಿಕ ಪಾಕ್ ಜೊತೆಗೆ ಎಲ್ಲ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಹಾಗಿದ್ದರೂ ಕೂಡ ದಿಲ್ಜಿತ್ ದೊಂಸಾಜ್ ಅವರು ಪಾಕಿಸ್ತಾನದ ನಟಿ ಹಾನಿಯಾ ಆಮಿರ್ (Hania Aamir) ಜೊತೆ ಸಿನಿಮಾ ಪ್ರಚಾರದಲ್ಲಿ ಕೈ ಜೋಡಿಸಿದ್ದಾರೆ. ಇದನ್ನು ‘ಅಖಿಲ ಭಾರತ ಸಿನಿಮಾ ಕಾರ್ಮಿಕರ ಒಕ್ಕೂಟ’ (AICWA) ತೀವ್ರವಾಗಿ ವಿರೋಧಿಸಿದೆ.
‘ಸರ್ದಾರ್ ಜೀ 3’ ಸಿನಿಮಾದಲ್ಲಿ ಹಾನಿಯಾ ಆಮಿರ್ ಮತ್ತು ದಿಲ್ಜಿತ್ ದೊಸಾಂಜ್ ಅವರು ತೆರೆ ಹಂಚಿಕೊಂಡಿದ್ದಾರೆ. ಇದು ಪಂಜಾಬಿ ಸಿನಿಮಾ. ಆದರೆ ಪಾಕ್ ಕಲಾವಿದರು ಈ ಚಿತ್ರದಲ್ಲಿ ನಟಿಸಿರುವುದರಿಂದ ಭಾರತದಲ್ಲಿ ಇದರ ಬಿಡುಗಡೆಗೆ ಅವಕಾಶ ನೀಡಿಲ್ಲ. ಆದರೆ ವಿದೇಶದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ಸಿನಿಮಾದ ಬಗ್ಗೆ ದಿಲ್ಜಿತ್ ದೊಸಾಂಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದಾರೆ.
ಪಾಕಿಸ್ತಾನಕ್ಕೆ ಸಂಬಂಧಿಸಿದ ಯಾವುದೇ ಕಂಟೆಂಟ್ಗಳನ್ನು ಭಾರತದ ಒಟಿಟಿಯಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರವೇ ಎಚ್ಚರಿಕೆ ನೀಡಿತ್ತು. ಆದರೂ ಕೂಡ ದಿಲ್ಜಿತ್ ದೊಸಾಂಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಾನಿಯಾ ಆಮಿರ್ ಇರುವ ಟ್ರೇಲರ್ ಹಂಚಿಕೊಂಡರು. ಇದರಿಂದ ಅವರ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.
📩 All Indian Cine Workers Association ( AICWA) has officially written to Honourable Prime Minister Shri Narendra Modi ji objecting to producer, singer & actor Diljit Dosanjh casting Pakistani Terrorist Country actress Hania Aamir in Sardar Ji 3 movie, despite 26 Indians being… pic.twitter.com/93xMhojraU
— All Indian Cine Workers Association (@AICWAOfficial) June 25, 2025
ಈ ಮೊದಲು ನರೇಂದ್ರ ಮೋದಿ ಅವರನ್ನು ದಿಲ್ಜಿತ್ ದೊಸಾಂಜ್ ಅವರು ಭೇಟಿ ಆಗಿದ್ದರು. ದಿಲ್ಜಿತ್ ಗಾಯನಕ್ಕೆ ಮೋದಿ ಕೂಡ ಮೆಚ್ಚುಗೆ ಸೂಚಿಸಿದ್ದರು. ಆದರೆ ಈಗ ದಿಲ್ಜಿತ್ ಅವರನ್ನು ಬ್ಯಾನ್ ಮಾಡಬೇಕು ಎಂದು ನರೇಂದ್ರ ಮೋದಿಗೆ ಅಖಿಲ ಭಾರತ ಸಿನಿಮಾ ಕಾರ್ಮಿಕರ ಒಕ್ಕೂಟ ಪತ್ರ ಬರೆದಿದೆ. ದಿಲ್ಜಿತ್ ಅವರ ಸಂಗೀತ ಕಾರ್ಯಕ್ರಮಗಳು, ಹಾಡುಗಳು ಹಾಗೂ ಸೋಶಿಯಲ್ ಮೀಡಿಯಾ ಖಾತೆಗಳನ್ನು ಕೂಡ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಸಂವಾದ ನಡೆಸಿದ ಗಾಯಕ ದಿಲ್ಜೀತ್ ದೊಸಾಂಜ್
ಯೂಟ್ಯೂಬ್, ಜಿಯೋ ಸಾವನ್ ಮುಂತಾದ ಕಡೆಗಳಲ್ಲಿ ದಿಲ್ಜಿತ್ ದೊಸಾಂಜ್ ಅವರ ಹಾಡುಗಳು ಪ್ರಸಾರ ಆಗುತ್ತಿವೆ. ಅದನ್ನೆಲ್ಲ ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಅಖಿಲ ಭಾರತ ಸಿನಿಮಾ ಕಾರ್ಮಿಕರ ಒಕ್ಕೂಟ ಮನವಿ ಮಾಡಿದೆ. ಲೈವ್ ಸಂಗೀತ ಕಾರ್ಯಕ್ರಮಗಳನ್ನು ಮಾಡದಂತೆ ಅವರ ಮೇಲೆ ನಿಷೇಧ ವಿಧಿಸಬೇಕು ಎಂದು ಕೂಡ ಒತ್ತಾಯಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.