Besharam Rang: ‘ಬೇಷರಂ ರಂಗ್..’ ಹಾಡಿನ ಪ್ರಸಾರಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್
Shah Rukh Khan | Deepika Padukone: ‘ಬೇಷರಂ ರಂಗ್..’ ಹಾಡಿನಲ್ಲಿ ದೀಪಿಕಾ ಪಡುಕೋಣೆ ತುಂಬ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅವರು ಕೇಸರಿ ಬಿಕಿನಿ ಧರಿಸಿದ್ದಾರೆ ಎಂಬುದು ಕೂಡ ಅನೇಕರ ಅಸಮಾಧಾನಕ್ಕೆ ಕಾರಣ ಆಗಿತ್ತು.

ಬಾಲಿವುಡ್ನಲ್ಲಿ ಈ ವರ್ಷದ ಆರಂಭದಲ್ಲೇ ‘ಪಠಾಣ್’ (Pathaan Movie) ಚಿತ್ರಕ್ಕೆ ಬಹುದೊಡ್ಡ ಗೆಲುವು ಸಿಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 22 ದಿನ ಕಳೆದಿದ್ದರೂ ಕೂಡ ಹವಾ ಹಾಗೆಯೇ ಇದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂಪಾಯಿ ಗಳಿಸಿರುವುದು ‘ಪಠಾಣ್’ ಹೆಗ್ಗಳಿಕೆ. ಇದರ ನಡುವೆ ಒಂದಷ್ಟು ವಿವಾದಗಳು ಕೂಡ ಈ ಚಿತ್ರಕ್ಕೆ ಸುತ್ತಿಕೊಂಡಿದ್ದವು. ಶಾರುಖ್ ಖಾನ್ (Shah Rukh Khan) ಮತ್ತು ದೀಪಿಕಾ ಪಡುಕೋಣೆ ಕಾಣಿಸಿಕೊಂಡಿರುವ ‘ಬೇಷರಂ ರಂಗ್..’ (Besharam Rang) ಹಾಡಿನ ವಿರುದ್ಧ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಗೀತೆಯ ಪ್ರಸಾರಕ್ಕೆ ಸಂಬಂಧಿಸಿದಂತೆ ಕೆಲವರು ಕೋರ್ಟ್ ಮೆಟ್ಟಿಲು ಏರಿದ್ದರು. ಆ ಕೇಸ್ನಲ್ಲಿ ‘ಪಠಾಣ್’ ನಿರ್ಮಾಣ ಸಂಸ್ಥೆಯಾದ ‘ಯಶ್ ರಾಜ್ ಫಿಲ್ಮ್ಸ್’ಗೆ ಜಯ ಸಿಕ್ಕಿದೆ.
ದೀಪಿಕಾ ಪಡುಕೋಣೆ ಅವರು ‘ಬೇಷರಂ ರಂಗ್..’ ಹಾಡಿನಲ್ಲಿ ತುಂಬ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅವರು ಕೇಸರಿ ಬಿಕಿನಿ ಧರಿಸಿದ್ದಾರೆ ಎಂಬುದು ಕೂಡ ಅನೇಕರ ಅಸಮಾಧಾನಕ್ಕೆ ಕಾರಣ ಆಗಿತ್ತು. ‘ಇಷ್ಟು ಬೋಲ್ಡ್ ಆಗಿರುವ ಹಾಡನ್ನು ಯೂಟ್ಯೂಬ್ನಲ್ಲಿ ಪ್ರಸಾರ ಮಾಡುವಾಗ ‘ಯು/ಎ’ ಪ್ರಮಾಣಪತ್ರ ಬಿತ್ತರಿಸಬೇಕು. ಇಲ್ಲದಿದ್ದರೆ ಹಾಡಿನ ಪ್ರಸಾರಕ್ಕೆ ತಡೆ ನೀಡಬೇಕು’ ಎಂದು ಕೋರಿ ಸಾಮಾಜಿಕ ಕಾರ್ಯಕರ್ತರೊಬ್ಬರು ಮಹಾರಾಷ್ಟ್ರದ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿದೆ.
‘ಪಠಾಣ್’ ಗೆದ್ದಿದ್ದಕ್ಕೆ ಬಾಲಿವುಡ್ ಮಂದಿಗೆ ಬಂತು ಧೈರ್ಯ; ದೊಡ್ಡ ಓಪನಿಂಗ್ಗಾಗಿ ನಡೆದಿದೆ ಪ್ಲ್ಯಾನ್
ಸಾರ್ವಜನಿಕವಾಗಿ ಪ್ರದರ್ಶನವಾಗುವ ಸಿನಿಮಾ, ಕಿರುಚಿತ್ರ, ಜಾಹೀರಾತು ಇತ್ಯಾದಿಗಳಿಗೆ ಸೆನ್ಸಾರ್ ಮಂಡಳಿಯು ಪ್ರಮಾಣ ಪತ್ರ ನೀಡುತ್ತದೆ. 12 ವರ್ಷ ವಯಸ್ಸಿಗಿಂತ ಕಿರಿಯ ಪ್ರೇಕ್ಷಕರು ತಮ್ಮ ಪಾಲಕರ ಮಾರ್ಗದರ್ಶನದಲ್ಲಿ ಮಾತ್ರ ನೋಡಬಹುದಾದ ಚಿತ್ರಗಳಿಗೆ ‘ಯು/ಎ’ ಪ್ರಮಾಣಪತ್ರ ನೀಡಲಾಗುತ್ತದೆ. ‘ಬೇಷರಂ ರಂಗ್..’ ಹಾಡು ಮತ್ತು ‘ಪಠಾಣ್’ ಚಿತ್ರದ ಟೀಸರ್ ಯೂಟ್ಯೂಬ್ನಲ್ಲಿ ಪ್ರಸಾರ ಆಗುವುದಕ್ಕೂ ಮುನ್ನ ‘ಯು/ಎ’ ಪ್ರಮಾಣಪತ್ರ ಬಿತ್ತರ ಆಗಬೇಕು ಎಂಬುದು ಅರ್ಜಿದಾರರ ವಾದವಾಗಿತ್ತು. ಇದನ್ನು ಕೋರ್ಟ್ ತಳ್ಳಿಹಾಕಿದೆ.
ಪ್ರಸ್ತುತ ಇರುವ ನಿಯಮದ ಪ್ರಕಾರ, ಸಾರ್ವಜನಿಕವಾಗಿ ಚಿತ್ರಮಂದಿರ ಮುಂತಾದ ಸ್ಥಳಗಳಲ್ಲಿ ಪ್ರದರ್ಶನವಾಗುವ ಕಂಟೆಂಟ್ಗಳಿಗೆ ಮಾತ್ರ ಪ್ರಮಾಣಪತ್ರದ ಅಗತ್ಯ ಇದೆ. ಇಂಟರ್ನೆಟ್ನಲ್ಲಿ ಯೂಟ್ಯೂಬ್, ಒಟಿಟಿ ಮುಂತಾದ ಕಡೆಗಳಲ್ಲಿ ಪ್ರಸಾರ ಮಾಡಲು ಸೆನ್ಸಾರ್ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ‘ಯಶ್ ರಾಜ್ ಫಿಲ್ಮ್ಸ್’ ವಾದ ಮಂಡಿಸಿದೆ. ಇದನ್ನು ಆಧರಿಸಿ ಕೋರ್ಟ್ ತೀರ್ಪು ನೀಡಿದೆ.
Pathaan Movie: ಪಾಕಿಸ್ತಾನದಲ್ಲಿ ‘ಪಠಾಣ್’ ಚಿತ್ರದ ಅಕ್ರಮ ಪ್ರದರ್ಶನ; ಕಾನೂನು ಕ್ರಮ ಕೈಗೊಂಡ ಸೆನ್ಸಾರ್ ಮಂಡಳಿ
ಆರಂಭದಲ್ಲಿ ‘ಪಠಾಣ್’ ಚಿತ್ರಕ್ಕೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿತ್ತು. ‘ಬೇಷರಂ ರಂಗ್..’ ಹಾಡು ಬಿಡುಗಡೆ ಆದಾಗ ಕೆಲವು ಕಡೆ ದಾಂಧಲೆ ಕೂಡ ಆಗಿತ್ತು. ಆದರೆ ಈ ಸಿನಿಮಾದಲ್ಲಿ ದೇಶಭಕ್ತಿ ಕಥಾವಸ್ತು ಇದ್ದಿದ್ದರಿಂದ ವಿರೋಧ ಮಾಡುವವರು ಸೈಲೆಂಟ್ ಆದರು. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:51 pm, Wed, 15 February 23