Vivek Oberoi: ‘ನೀವೆಲ್ಲ ಭಾರತದವರೇ ತಾನೆ?’: ಬಾಲಿವುಡ್ ಮಂದಿಗೆ ವಿವೇಕ್ ಒಬೆರಾಯ್ ಖಡಕ್ ಪ್ರಶ್ನೆ
Dharavi Bank | Vivek Oberoi: ‘ಕೆಲವರ ಸ್ಕ್ರಿಪ್ಟ್ ನೋಡಿ ನನಗೆ ಆಶ್ಚರ್ಯ ಆಗುತ್ತದೆ. ನೀವೆಲ್ಲ ಭಾರತದವರು ಹೌದಲ್ಲವೇ ಅಂತ ಕೇಳಬೇಕು ಎನಿಸುತ್ತದೆ’ ಎಂದು ವಿವೇಕ್ ಒಬೆರಾಯ್ ಹೇಳಿದ್ದಾರೆ.
![Vivek Oberoi: ‘ನೀವೆಲ್ಲ ಭಾರತದವರೇ ತಾನೆ?’: ಬಾಲಿವುಡ್ ಮಂದಿಗೆ ವಿವೇಕ್ ಒಬೆರಾಯ್ ಖಡಕ್ ಪ್ರಶ್ನೆ](https://images.tv9kannada.com/wp-content/uploads/2022/11/Vivek-Oberoi.jpg?w=1280)
ನಟ ವಿವೇಕ್ ಒಬೆರಾಯ್ (Vivek Oberoi) ಅವರು ಹಲವು ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀರೋ-ವಿಲನ್ ಎಂಬ ಭೇದ ಇಲ್ಲದೇ ಎಲ್ಲ ರೀತಿಯಲ್ಲೂ ಅವರು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅವರಿಗೆ ಸಖತ್ ಬೇಡಿಕೆ ಇದೆ. ಸದ್ಯ ಅವರು ನಟಿಸಿರುವ ‘ಧಾರಾವಿ ಬ್ಯಾಂಕ್’ (Dharavi Bank) ವೆಬ್ ಸಿರೀಸ್ ಬಿಡುಗಡೆ ಆಗಿದೆ. ಎಂಎಕ್ಸ್ ಪ್ಲೇಯರ್ ಒಟಿಟಿಯಲ್ಲಿ ಇದು ಪ್ರಸಾರವಾಗುತ್ತಿದೆ. ಇತ್ತೀಚೆಗೆ ಈ ವೆಬ್ ಸರಣಿಯ ಪ್ರಚಾರದ ವೇಳೆ ಅವರು ಬಾಲಿವುಡ್ (Bollywood) ಸಿನಿಮಾಗಳ ಸೋಲಿನ ಕುರಿತು ಮಾತನಾಡಿದರು. ಹಿಂದಿ ಸಿನಿಮಾ ಮಂದಿ ಹಾಲಿವುಡ್ ಚಿತ್ರಗಳನ್ನು ಅನುಕರಿಸುವ ಬಗ್ಗೆ ವಿವೇಕ್ ಒಬೆರಾಯ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹಿಂದಿ ಚಿತ್ರರಂಗಕ್ಕೆ 2022ರ ವರ್ಷ ನಿರಾಶಾದಾಯಕ ಆಗಿದೆ. ಬಾಲಿವುಡ್ನಲ್ಲಿ ಬೆರಳೆಣಿಕೆಯ ಸಿನಿಮಾಗಳು ಗೆದ್ದಿದ್ದು ಬಿಟ್ಟರೆ ಹೆಚ್ಚಿನ ಸಿನಿಮಾಗಳು ಹೀನಾಯವಾಗಿ ಸೋತವು. ಸ್ಟಾರ್ ನಟರ ಚಿತ್ರಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲು ಸಾಧ್ಯವಾಗದೇ ಕಾಲ್ಕಿತ್ತವು. ಈ ಬೆಳವಣಿಗೆ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಈ ಕುರಿತು ವಿವೇಕ್ ಒಬೆರಾಯ್ ಕೂಡ ಮಾತನಾಡಿದ್ದಾರೆ.
‘ಇನ್ಸೈಡ್ ಎಡ್ಜ್ ಗೆಲುವಿನ ಬಳಿಕ ನನಗೆ ಪ್ರತಿ 10 ದಿನಕ್ಕೊಮ್ಮೆ ಹೊಸ ಆಫರ್ ಬರಲು ಶುರುವಾಯಿತು. ಇಷ್ಟು ಪ್ಯಾಕೇಜ್ ಇದೆ, ಈ ಶೋ ಅನ್ನು ನಾವು ಹೀಗೆ ಮಾಡುತ್ತೇವೆ ಎಂದೆಲ್ಲ ಹೇಳುತ್ತಾರೆ. ಆದರೆ ನಾನು ಅವುಗಳ ಬೆನ್ನು ಹತ್ತಿ ಹೋಗಿಲ್ಲ. ಈ ಮಾಧ್ಯಮದ ಬಗ್ಗೆ ನನಗೆ ಸಾಕಷ್ಟು ಗೌರವ ಇದೆ. ಪ್ರತಿಭೆ ಇದ್ದವರು ಮಾತ್ರ ಇಲ್ಲಿ ಮಿಂಚುತ್ತಾರೆ’ ಎಂದು ವಿವೇಕ್ ಒಬೆರಾಯ್ ಹೇಳಿದ್ದಾರೆ.
‘ಕಂಟೆಂಟ್ ಚೆನ್ನಾಗಿ ಇಲ್ಲ ಅಂದರೆ ದೊಡ್ಡ ಸ್ಟಾರ್ ನಟರ ಸಿನಿಮಾವನ್ನೂ ಜನರು ತಿರಸ್ಕರಿಸುತ್ತಾರೆ. ಒಳ್ಳೆಯ ಕೆಲಸ ಮಾಡಿದ್ದಕ್ಕೆ ಹೊಸ ನಟರು ಕೂಡ ಭಾರಿ ಗೆಲುವು ಪಡೆಯಬಹುದು. ‘ಇನ್ಸೈಡ್ ಎಡ್ಜ್’ ಬಳಿಕ ನಾನು ಸಹಿ ಮಾಡಿದ್ದು ‘ಧಾರಾವಿ ಬ್ಯಾಂಕ್’ ಮತ್ತು ‘ಇಂಡಿಯನ್ ಪೊಲೀಸ್ ಫೋರ್ಸ್’ಗೆ ಮಾತ್ರ. ಇವುಗಳ ಸ್ಕ್ರಿಪ್ಟ್ ಚೆನ್ನಾಗಿತ್ತು ಎಂಬುದೇ ಅದಕ್ಕೆ ಕಾರಣ. ಕೆಲವರ ಸ್ಕ್ರಿಪ್ಟ್ ನೋಡಿ ನನಗೆ ಆಶ್ಚರ್ಯ ಆಗುತ್ತದೆ. ನೀವೆಲ್ಲ ಭಾರತದವರು ಹೌದಲ್ಲವೇ ಅಂತ ಕೇಳಬೇಕು ಎನಿಸುತ್ತದೆ. ಅಮೆರಿಕಾ ಅಥವಾ ಕೊರಿಯಾದಿಂದ ಸ್ಫೂರ್ತಿ ಪಡೆದು ಕಥೆ ಬರೆಯುತ್ತಾರೆ’ ಎಂದಿದ್ದಾರೆ ವಿವೇಕ್ ಒಬೆರಾಯ್.
ಇತ್ತೀಚೆಗೆ ನಟ ರಿಷಬ್ ಶೆಟ್ಟಿ ಅವರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದುಂಟು. ನಮ್ಮ ನೆಲೆದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತದೆ ಎಂಬುದು ರಿಷಬ್ ಶೆಟ್ಟಿ ಅಭಿಪ್ರಾಯ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.