‘ಅವತಾರ್’ ಹೀರೋ ಆಫರ್ ನನಗೆ ಬಂದಿತ್ತು, ಶೀರ್ಷಿಕೆ ಕೊಟ್ಟಿದ್ದು ನಾನೇ: ಗೋವಿಂದ
ನಟ ಗೋವಿಂದ ಅವರು ಸಂದರ್ಶನದಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ. ಹಾಲಿವುಡ್ನ ‘ಅವತಾರ್’ ಸಿನಿಮಾದ ಅವಕಾಶವನ್ನು ಅವರು ಕೈಚಲ್ಲಿದ್ದಾಗಿ ಹೇಳಿದ್ದಾರೆ. ಈ ಪಾತ್ರಕ್ಕಾಗಿ 18 ಕೋಟಿ ರೂಪಾಯಿ ಆಫರ್ ಬಂದಿತ್ತಂತೆ. ಅಲ್ಲದೇ ‘ಆ ಚಿತ್ರಕ್ಕೆ ಶೀರ್ಷಿಕೆ ಸೂಚಿಸಿದ್ದು ಕೂಡ ನಾವೇ’ ಎಂದು ಗೋವಿಂದ ಹೇಳಿದ್ದಾರೆ.

ನಟ ಗೋವಿಂದ (Govinda) ಅವರು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ಈ ಮೊದಲು ಗನ್ ಮಿಸ್ ಫೈರ್ ಆಗಿದ್ದಕ್ಕೆ ಗೋವಿಂದ ಸದ್ದಿ ಆಗಿದ್ದರು. ಬಳಿಕ ವಿಚ್ಛೇದನದ ಗಾಸಿಪ್ ಹಬ್ಬಿತು. ಈಗ ಹಾಲಿವುಡ್ನ ‘ಅವತಾರ್’ ಸಿನಿಮಾ ಬಗ್ಗೆ ಗೋವಿಂದ ಮಾತನಾಡಿದ್ದಾರೆ. ‘ಅವತಾರ್’ (Avatar) ಸಿನಿಮಾಗೆ ತಾವೇ ಹೀರೋ ಆಗಬೇಕಿತ್ತು. ಆದರೆ ತಾವು ಆಫರ್ ಒಪ್ಪಿಕೊಳ್ಳಲಿಲ್ಲ ಎಂದು ಗೋವಿಂದ ಹೇಳಿದ್ದಾರೆ. ಅಷ್ಟೇ ಅಲ್ಲದೇ, ನಿರ್ದೇಶಕ ಜೇಮ್ಸ್ ಕ್ಯಾಮರನ್ (James Cameron) ಅವರಿಗೆ ‘ಅವತಾರ್’ ಎಂಬ ಶೀರ್ಷಿಕೆ ಸೂಚಿಸಿದ್ದು ಕೂಡ ತಾವೇ ಎಂದು ಗೋವಿಂದ ಹೇಳಿದ್ದಾರೆ.
ಹಿರಿಯ ನಟ ಮುಖೇಶ್ ಖನ್ನಾ ಅವರ ಯೂಟ್ಯೂಬ್ ಚಾನೆಲ್ಗಾಗಿ ಗೋವಿಂದ ಸಂದರ್ಶನ ನೀಡಿದ್ದಾರೆ. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ಅಮೆರಿಕದಲ್ಲಿ ಸರ್ದಾರ್ಜಿ ಒಬ್ಬರಿಗೆ ಬಿಸ್ನೆಸ್ ಐಡಿಯಾ ಕೊಟ್ಟಿದ್ದೆ. ಅದು ಯಶಸ್ವಿ ಆಗಿತ್ತು. ಹಲವು ವರ್ಷಗಳ ಬಳಿಕ ಅವರು ನನ್ನನ್ನು ಜೇಮ್ಸ್ ಕ್ಯಾಮರನ್ಗೆ ಭೇಟಿ ಮಾಡಿಸಿದರು. ಕ್ಯಾಮರನ್ ಜೊತೆ ಸಿನಿಮಾ ಮಾಡಬೇಕು ಅಂತ ಸಲಹೆ ನೀಡಿದರು’ ಎಂದು ಗೋವಿಂದ ಹೇಳಿದ್ದಾರೆ.
‘ಅವರಿಬ್ಬರನ್ನು ನಾನು ಊಟಕ್ಕೆ ಆಹ್ವಾನಿಸಿ, ಚರ್ಚೆ ಮಾಡಿದೆ. ಅವತಾರ್ ಎಂಬ ಶೀರ್ಷಿಕೆ ಸೂಚಿಸಿದ್ದು ಕೂಡ ನಾನೇ. ಈ ಸಿನಿಮಾದ ಹೀರೋ ಅಂಗವಿಕಲ ಅಂತ ಕ್ಯಾಮರನ್ ಹೇಳಿದರು. ಹಾಗಾಗಿ ನಾನು ಸಿನಿಮಾ ಮಾಡಲ್ಲ ಎಂದೆ. ಈ ಪಾತ್ರಕ್ಕಾಗಿ ಅವರು ನನಗೆ 18 ಕೋಟಿ ರೂಪಾಯಿ ಆಫರ್ ಮಾಡಿದರು. 410 ದಿನ ಶೂಟಿಂಗ್ ಮಾಡಬೇಕು ಎಂದರು. ಹಾಗೆ ದೇಹಕ್ಕೆ ಬಣ್ಣ ಬಳಿದುಕೊಂಡರೆ ನಾನು ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ’ ಎಂದಿದ್ದಾರೆ ಗೋವಿಂದ.
ಇದನ್ನೂ ಓದಿ: 37 ವರ್ಷ ಸಂಸಾರ ಮಾಡಿ ಈಗ ವಿಚ್ಛೇದನ ಪಡೆಯಲು ಮುಂದಾದ ನಟ ಗೋವಿಂದ?
ಗೋವಿಂದ ಅವರು ಒಂದು ಕಾಲದಲ್ಲಿ ಬ್ಯುಸಿ ನಟನಾಗಿದ್ದರು. ಬಾಲಿವುಡ್ನಲ್ಲಿ ಅವರಿಗೆ ಸಖತ್ ಬೇಡಿಕೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಕಡಿಮೆ ಆಗಿದೆ. ಭರ್ಜರಿಯಾಗಿ ಕಮ್ಬ್ಯಾಕ್ ಮಾಡಲು ಅವರು ಸಜ್ಜಾಗುತ್ತಿದ್ದಾರೆ. ಇನ್ನು, ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಪತ್ನಿ ಸುನೀತಾ ಅವರು ಗೋವಿಂದಗೆ ಡಿವೋರ್ಸ್ ನೋಟಿಸ್ ಕಳಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಗೋವಿಂದ ಮತ್ತು ಸುನೀತಾ ಅಹುಜಾ ಅವರು ಬಹಿರಂಗವಾಗಿ ಹೇಳಿಕೆ ನೀಡುವುದು ಬಾಕಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.