‘ಹುಡುಗಿಯರೂ ಅಸಹ್ಯವಾಗಿ ಮುಟ್ಟುತ್ತಾರೆ’: ಕೆಟ್ಟ ಘಟನೆ ವಿವರಿಸಿದ ‘ಹೀರಾಮಂಡಿ’ ನಟಿ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಹೀರಾಮಂಡಿ’ ವೆಬ್ ಸಿರೀಸ್ನಲ್ಲಿ ಸಂಜೀದಾ ಶೇಖ್ ನಟಿಸಿದ್ದಾರೆ. ಇದರಲ್ಲಿ ಅವರು ವಹೀದಾ ಎಂಬ ಪಾತ್ರ ಮಾಡಿದ್ದಾರೆ. ಅವರ ನಟನೆಗೆ ಜನರಿಂದ ಮೆಚ್ಚುಗೆ ಸಿಕ್ಕಿದೆ. ಈ ನಡುವೆ ಸಂಜೀದಾ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ತಮ್ಮ ಜೀವನದಲ್ಲಿ ನಡೆದ ಒಂದು ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ.
ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆದ ‘ಹೀರಾಮಂಡಿ’ (Heeramandi) ವೆಬ್ ಸರಣಿಯಲ್ಲಿ ಅನೇಕ ಕಲಾವಿದರು ನಟಿಸಿದ್ದಾರೆ. ಪ್ರಮುಖವಾಗಿ ನಟಿಯರಿಗೆ ಈ ವೆಬ್ ಸಿರೀಸ್ನಲ್ಲಿ ಪ್ರಾಮುಖ್ಯತೆ ಸಿಕ್ಕಿದೆ. ಒಂದು ಮುಖ್ಯವಾದ ಪಾತ್ರದಲ್ಲಿ ನಟಿ ಸಂಜೀದಾ ಶೇಖ್ (Sanjeeda Shaikh) ಅವರು ಅಭಿನಯಿಸಿದ್ದಾರೆ. ‘ಹೀರಾಮಂಡಿ’ ಬಿಡುಗಡೆ ಆದ ಬಳಿಕ ಅವರ ಖ್ಯಾತಿ ಹೆಚ್ಚಾಗಿದೆ. ಇತ್ತೀಚೆಗೆ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಒಂದು ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. ಯುವತಿಯೊಬ್ಬಳಿಂದ ತಮಗೆ ಕೆಟ್ಟ ಅನುಭವ ಆಗಿತ್ತು ಎಂದು ಸಂಜೀದಾ ಶೇಖ್ ಹೇಳಿದ್ದಾರೆ.
‘ಹುಡುಗಿಯೊಬ್ಬಳು ತುಂಬ ಅಶ್ಲೀಲವಾಗಿ ನಡೆದುಕೊಂಡ ಘಟನೆ ನನಗೆ ನೆನಪಿದೆ. ನಾನು ಒಂದು ನೈಟ್ ಕ್ಲಬ್ನಲ್ಲಿದ್ದೆ. ನನ್ನ ಬಳಿ ಬಂದ ಯುವತಿಯೊಬ್ಬಳು ನನ್ನ ಸ್ತನಗಳನ್ನು ಮುಟ್ಟಿ ಮುಂದಕ್ಕೆ ಸಾಗಿದಳು. ಅದರಿಂದ ನನಗೆ ಶಾಕ್ ಆಯಿತು. ಏನಾಯಿತು ಎಂಬುದೇ ತಿಳಿಯಲಿಲ್ಲ. ಗಂಡಸರು ಕೆಟ್ಟದಾಗಿ ವರ್ತಿಸುತ್ತಾರೆ ಎಂಬುದನ್ನು ನಾವು ಕೇಳಿದ್ದೇವೆ. ಆ ವಿಚಾರದಲ್ಲಿ ಹುಡುಗಿಯರೂ ಕಡಿಮೆ ಏನಿಲ್ಲ’ ಎಂದು ಸಂಜೀದಾ ಶೇಖ್ ಹೇಳಿದ್ದಾರೆ.
‘ನೀವು ತಪ್ಪು ಹಾದಿಯಲ್ಲಿ ಹೋಗಿದ್ದರೆ ಅದರಲ್ಲಿ ಗಂಡು-ಹೆಣ್ಣು ಎಂಬ ಭೇದ ಇಲ್ಲ. ತಪ್ಪು ತಪ್ಪೇ. ನಿಮ್ಮ ಜೊತೆ ಮಹಿಳೆ ತಪ್ಪಾಗಿ ನಡೆದುಕೊಂಡಿದ್ದರೂ ಆಕೆಗೆ ಹೇಳಿ’ ಎಂದಿದ್ದಾರೆ ಸಂಜೀದಾ ಶೇಖ್. ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಸಂಜೀದಾ ಫೇಮಸ್ ಆಗಿದ್ದಾರೆ. ‘ಹೀರಾಮಂಡಿ’ ವೆಬ್ ಸರಣಿಯ ಯಶಸ್ಸಿನಿಂದ ಅವರಿಗೆ ಅವಕಾಶಗಳು ಹೆಚ್ಚಾಗಿವೆ.
ಇದನ್ನೂ ಓದಿ: ‘ಹೀರಾಮಂಡಿ’ ಸೂಪರ್ ಹಿಟ್ ಆದ್ರೂ ಶರ್ಮಿನ್ಗೆ ತಪ್ಪಲಿಲ್ಲ ಟ್ರೋಲ್ ಕಾಟ
2012ರಲ್ಲಿ ಸಂಜೀದಾ ಶೇಖ್ ಅವರು ಆಮಿರ್ ಅಲಿ ಜೊತೆ ಮದುವೆ ಆಗಿದ್ದರು. ಆದರೆ 2021ರಲ್ಲಿ ಅವರು ವಿಚ್ಛೇದನ ನೀಡಿದರು. ಬಳಿಕ ನಟ ಹರ್ಷವರ್ಧನ್ ರಾಣೆ ಜೊತೆ ಸಂಜೀದಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಹರಡಿತ್ತು. ಇಬ್ಬರೂ ಜೊತೆಯಾಗಿ ಪ್ರವಾಸಕ್ಕೆ ತೆರಳಿದ್ದಾರೆ ಎಂದು ವರದಿ ಆಗಿತ್ತು. ಡೇಟಿಂಗ್ ವಿಚಾರವನ್ನು ಹರ್ಷವರ್ಧನ್ ರಾಣೆ ಅವರು ತಳ್ಳಿ ಹಾಕಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.