ನಟ ಅಲ್ಲು ಅರ್ಜುನ್ (Allu Arjun) ಅವರು ದೇಶಾದ್ಯಂತ ಜನಪ್ರಿಯತೆ ಹೊಂದಿದ್ದಾರೆ. ಒಂದು ಕಾಲದಲ್ಲಿ ಕೇವಲ ಟಾಲಿವುಡ್ಗೆ ಸೀಮಿತ ಆಗಿದ್ದ ಅವರು ಈಗ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚುತ್ತಿದ್ದಾರೆ. ‘ಪುಷ್ಪ’ ಸಿನಿಮಾ (Pushpa Movie) ಸೂಪರ್ ಹಿಟ್ ಆದ ಬಳಿಕ ಅವರ ಚಾರ್ಮ್ ಹೆಚ್ಚಿತು. ದಕ್ಷಿಣ ಭಾರತದ ಸಿನಿಪ್ರಿಯರು ಮಾತ್ರವಲ್ಲದೇ ಹಿಂದಿ ಪ್ರೇಕ್ಷಕರು ಕೂಡ ‘ಪುಷ್ಪ’ ಸಿನಿಮಾ ನೋಡಿ ಮೆಚ್ಚಿಕೊಂಡರು. ಬಾಲಿವುಡ್ ಸೆಲೆಬ್ರಿಟಿಗಳಿಗೂ ಈ ಚಿತ್ರ ಸಖತ್ ಇಷ್ಟ ಆಯಿತು. ಹಿರಿಯ ನಟಿ ಹೇಮಾ ಮಾಲಿನಿ (Hema Malini) ಕೂಡ ಈ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಹಾಗಾಗಿ ಅವರು ಅಲ್ಲು ಅರ್ಜುನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಲ್ಲು ಅರ್ಜುನ್ ಅವರನ್ನು ಹೊಗಳುವ ಭರದಲ್ಲಿ ಹಿಂದಿ ಹೀರೋಗಳನ್ನು ತೆಗಳಿದ್ದಾರೆ ಎಂದು ಕೆಲವರು ತಕರಾರು ತೆಗೆದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
‘ನಾನು ಪುಷ್ಪ ಸಿನಿಮಾವನ್ನು ನೋಡಿ ತುಂಬ ಎಂಜಾಯ್ ಮಾಡಿದೆ. ಆ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ನಡೆಯುವ ಶೈಲಿಯಲ್ಲಿ ಅನೇಕರು ಡ್ಯಾನ್ಸ್ ಮಾಡಿದ್ದಾರೆ. ನಾನು ಅಲ್ಲು ಅರ್ಜುನ್ ಅವರ ನಟನೆಯನ್ನು ಗಮನಿಸಿದೆ. ಅವರ ಬೇರೆ ಸಿನಿಮಾಗಳನ್ನೂ ನೋಡಿದೆ. ಅವರು ತುಂಬ ಸುಂದರವಾದ ನಟ. ಆದರೆ ಪುಷ್ಪ ಚಿತ್ರಕ್ಕಾಗಿ ಆ ರೀತಿ ರಗಡ್ ಲುಕ್ನಲ್ಲಿ, ಲುಂಗಿ ಧರಿಸಿ ನಟಿಸಿದ್ದಾರೆ. ಅಂಥ ಮಾತ್ರ ಮಾಡಿ ಅವರು ಹೀರೋ ಎನಿಸಿಕೊಂಡಿದ್ದಾರೆ’ ಎಂದು ಹೇಮಾ ಮಾಲಿನಿ ಹೊಗಳಿದ್ದಾರೆ.
ಇದನ್ನೂ ಓದಿ: 2023ರ ಬಹುನಿರೀಕ್ಷಿತ ಹಿಂದಿ ಚಿತ್ರಗಳಲ್ಲಿ ‘ಪುಷ್ಪ 2’ಗೆ ಸ್ಥಾನ; ಶಾರುಖ್ನ ಹಿಂದಿಕ್ಕಿದ ಅಲ್ಲು ಅರ್ಜುನ್
‘ಪಾತ್ರಕ್ಕಾಗಿ ಅವರು ಅಂಥ ಲುಕ್ನಲ್ಲಿ ಕಾಣಿಸಿಕೊಳ್ಳಲು ಒಪ್ಪಿದರು ಎಂಬುದು ಗಮನಾರ್ಹ ವಿಷಯ. ನಮ್ಮ ಹಿಂದಿ ಸಿನಿಮಾದ ಹೀರೋಗಳು ಈ ರೀತಿ ಕಾಣಿಸಿಕೊಳ್ಳಲ್ಲ. ‘ರಜಿಯಾ ಸುಲ್ತಾನ್’ ಸಿನಿಮಾದಲ್ಲಿ ಧರ್ಮೇಂದ್ರ ಅವರು ಆ ರೀತಿ ಕಾಣಿಸಿಕೊಳ್ಳಲು ಹಿಂಜರಿಕೆಪಟ್ಟುಕೊಂಡಿದ್ದು ನನಗೆ ನೆನಪಿದೆ’ ಎಂದು ಹೇಮಾ ಮಾಲಿನಿ ಹೇಳಿದ್ದಾರೆ. ಈ ಮೂಲಕ ಹಿಂದಿ ಚಿತ್ರರಂಗದ ಹೀರೋಗಳನ್ನು ತೆಗಳಿದ್ದಾರೆ ಎಂದು ಅನೇಕರು ತಕರಾರು ತೆಗೆದಿದ್ದಾರೆ.
ಇದನ್ನೂ ಓದಿ: 150 ಮಕ್ಕಳ ದತ್ತು ಪಡೆದು ಶಿಕ್ಷಣ ನೀಡುತ್ತಿರುವ ತಮಿಳು ನಟ, ಭೇಷ್ ಎಂದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಅವರು ಈಗ ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಪ್ರತಿಷ್ಠಿತ ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ಇದಕ್ಕೆ ಬಂಡವಾಳ ಹೂಡುತ್ತಿದೆ. ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಡಾಲಿ ಧನಂಜಯ್, ಫಹಾದ್ ಫಾಸಿಲ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.