‘15 ಲಕ್ಷ ಸಂಬಳ ಕೊಡಬೇಕು’; ಪ್ರವಾಹ ಸಂತ್ರಸ್ತರ ಬಳಿ ಕಷ್ಟ ಹೇಳಿಕೊಂಡ ಕಂಗನಾ
ಕುಲು-ಮನಾಲಿ ಪ್ರವಾಹದಿಂದಾಗಿ ಸಂತ್ರಸ್ತರಾದ ಜನರಿಗೆ ಕಂಗನಾ ರಣಾವತ್ ಅವರ ಪ್ರತಿಕ್ರಿಯೆ ತೀವ್ರ ಟೀಕೆಗೆ ಗುರಿಯಾಗಿದೆ. ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದಾಗ ಅವರು ತಮ್ಮ ವ್ಯಾಪಾರದಲ್ಲಿನ ನಷ್ಟದ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದು ವಿವಾದ ಸೃಷ್ಟಿಸಿದೆ. ಜುಲೈನಲ್ಲಿಯೂ ಇದೇ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

ಕುಲು ಮನಾಲಿ ಭಾಗದಲ್ಲಿ ಮಳೆಯಿಂದ ಸಾಕಷ್ಟು ಅವಾಂತರಗಳು ನಡೆದಿವೆ. ಆ ಭಾಗದ ನದಿ ಉಕ್ಕಿ ಹರಿದಿದ್ದು, ನದಿ ತಟದ ಮನೆಗಳು ನಾಶವಾಗಿವೆ. ಜನರು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಹೀಗಿರುವಾಗಲೇ ಬಿಜೆಪಿ ಪಕ್ಷದ ಮಂಡಿ ಸಂಸದೆ ಕಂಗನಾ (Kangana Ranaut) ಅವರು ಜನರಿಂದ ಸಾಕಷ್ಟು ಟೀಕೆ ಎದುರಿಸಿದ್ದಾರೆ. ಅವರು ಪ್ರವಾಹ ಪೀಡಿತ ಭಾಗ ಆಗಮಿಸುತ್ತಿದ್ದಂತೆ ‘ಹೊರಟು ಹೋಗಿ’ ಎಂಬ ಕೂಗನ್ನು ಕೇಳಬೇಕಾಯಿತು. ಈ ವೇಳೆ ತಮಗೂ ನಷ್ಟ ಆಗಿದೆ ಎಂಬುದನ್ನು ಕಂಗನಾ ವಿವರಿಸಿದರು.
ಕಂಗನಾ ಬಳಿ ಮಾಧ್ಯಮದವರು ಸ್ವಲ್ಪ ಏರು ಧ್ವನಿಯಲ್ಲೇ ಪ್ರಶ್ನೆ ಮಾಡಿದರು. ಇದರಿಂದ ಕಂಗನಾ ಭಯಗೊಂಡರು. ‘ನೀವು ನನ್ನ ಮೇಲೆ ಅಟ್ಯಾಕ್ ಮಾಡೋಕೆ ಬಂದಿದ್ದೀರಾ ಅಥವಾ ಪ್ರಶ್ನೆ ಮಾಡುತ್ತಿದ್ದೀರಾ’ ಎಂದು ಕಂಗನಾ ಅವರು ಕೇಳಿದರು. ಆ ಬಳಿಕ ಅವರು ತಮ್ಮ ಕಷ್ಟ ಹೇಳಿಕೊಂಡರು.
‘ನೀವು ನನ್ನ ನೋವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಕೂಡ ಮನುಷ್ಯ. ನನಗೂ ಇಲ್ಲಿ ಮನೆ ಇದೆ, ರೆಸ್ಟೋರೆಂಟ್ ಇದೆ. ನಿನ್ನೆ ನನ್ನ ರೆಸ್ಟೋರೆಂಟ್ 50 ರೂಪಾಯಿ ಬಿಸ್ನೆಸ್ ಮಾಡಿದೆ. ನಾನು ತಿಂಗಳಿಗೆ ಸಿಬ್ಬಂದಿಗೆ 15 ಲಕ್ಷ ಸಂಬಳ ಕೊಡಬೇಕು. ನಾನು ಒಂಟಿ ಮಹಿಳೆ’ ಎಂದು ಕಂಗನಾ ಬೇಸರ ಮಾಡಿಕೊಂಡರು.
‘ನಾನು ಇಂಗ್ಲೆಂಡ್ನ ಕ್ವೀನ್, ಇಲ್ಲಿನ ಸಂತ್ರಸ್ತರಿಗೆ ಏನೂ ಮಾಡುತ್ತಿಲ್ಲ ಎಂಬ ರೀತಿಯಲ್ಲಿ ನನ್ನ ಮೇಲೆ ಅಟ್ಯಾಕ್ ಮಾಡಬೇಡಿ. ನಾನು ಕೂಡ ನಿಮ್ಮಂತೆಯೇ’ ಎಂದು ಕಂಗನಾ ಅವರು ಹೇಳಿದರು. ಇದು ಅಲ್ಲಿನ ಜನರನ್ನು ಮತ್ತಷ್ಟು ಕೆರಳಿಸಿದೆ.
ಇದನ್ನೂ ಓದಿ: ಈಗ ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಪ್ರವಾಹ ಸಂತ್ರಸ್ತೆಯ ಪ್ರಶ್ನೆಗೆ ಮಳೆಯಲ್ಲೂ ಬೆವರಿದ ಕಂಗನಾ ರಣಾವತ್
ಜುಲೈ ತಿಂಗಳಲ್ಲೂ ಕಂಗನಾ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು. ಸಹಾಯಕ್ಕಾಗಿ ಜನರು ಇವರ ಬಳಿ ಬಂದಾಗ, ‘ನನಗೆ ಹಣ ಬಿಡುಗಡೆ ಮಾಡಲು ಮಂತ್ರಿ ಹುದ್ದೆ ಇಲ್ಲ ಎಂದು ಹೇಳಿದ್ದರು. ಅಲ್ಲದೆ, ತಾವು ರಾಜಕೀಯ ಅಂದರೆ ಅಂದುಕೊಂಡಿದ್ದೇ ಬೇರೆ ಮತ್ತು ಇಲ್ಲಾಗುತ್ತಿರುವುದೇ ಬೇರೆ ಎಂಬ ಪರಿಸ್ಥಿತಿ ಇದೆ ಎಂದು ಕಂಗನಾ ಅವರು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








