Jacqueline Fernandez: 200 ಕೋಟಿ ರೂ. ವಂಚನೆ ಕೇಸ್; ‘ರಕ್ಕಮ್ಮ’ ಜಾಕ್ವೆಲಿನ್ ಫರ್ನಾಂಡಿಸ್ಗೆ ಸಿಕ್ತು ಮಧ್ಯಂತರ ಜಾಮೀನು
Jacqueline Fernandez Gets Interim Bail: ಸುಕೇಶ್ ಚಂದ್ರಶೇಖರ್ ಸಹವಾಸ ಮಾಡಿದ್ದರಿಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಆರೋಪಿ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಈ ಕೇಸ್ನಲ್ಲಿ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ.
ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರು ವಂಚನೆ ಕೇಸ್ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಬಂಧನ ಭೀತಿಯಲ್ಲಿ ಇರುವ ಅವರು ಸದ್ಯಕ್ಕೆ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದಿದ್ದಾರೆ. ಉದ್ಯಮಿಗಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪವನ್ನು ಸುಕೇಶ್ ಚಂದ್ರಶೇಖರ್ (Sukesh Chandrashekar) ಎದುರಿಸುತ್ತಿದ್ದಾರೆ. ಅವರ ಜೊತೆ ಸಂಪರ್ಕ ಹೊಂದಿದ್ದ ಕಾರಣದಿಂದ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ಅನೇಕ ಬಾರಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ಮಧ್ಯಂತರ ಜಾಮೀನು (Interim Bail) ಪಡೆದುಕೊಂಡಿದ್ದಾರೆ. ಈ ಪ್ರಕರಣದ ಸಂಬಂಧ ಅಕ್ಟೋಬರ್ 22ರಂದು ಮುಂದಿನ ವಿಚಾರಣೆ ನಡೆಯಲಿದೆ.
200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಆರೋಪಿ ಎಂದು ಚಾರ್ಜ್ಶೀಟ್ನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಅಧಿಕಾರಿಗಳು ಸತತ 7 ಗಂಟೆಗಳ ಕಾಲ ವಿಚಾರಣೆ ಮಾಡಿದ್ದರು. ಇಡಿ ಸಮನ್ಸ್ ನೀಡಿರುವುದನ್ನು ಜಾಕ್ವೆಲಿನ್ ಪ್ರಶ್ನಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡುವಂತೆ ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸುಕೇಶ್ ಚಂದ್ರಶೇಖರ್ ಅನೇಕ ದುಬಾರಿ ಗಿಫ್ಟ್ಗಳನ್ನು ನೀಡಿದ್ದರು. ಹಾಗಾಗಿ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಇಬ್ಬರೂ ತುಂಬ ಕ್ಲೋಸ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ವೈರಲ್ ಆದವು. ‘ಸುಕೇಶ್ ಚಂದ್ರಶೇಖರ್ ತನ್ನ ಕನಸಿನ ಹುಡುಗ ಎಂದು ಜಾಕ್ವೆಲಿನ್ ಅಂದುಕೊಂಡಿದ್ದರು. ಹಾಗಾಗಿ ಅವರನ್ನೇ ಮದುವೆ ಮಾಡಿಕೊಳ್ಳುವುದಾಗಿಯೂ ಅವರು ನಿರ್ಧರಿಸಿದ್ದರು’ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿರುವುದಾಗಿ ಇತ್ತೀಚೆಗೆ ವರದಿ ಪ್ರಕಟ ಆಗಿತ್ತು.
‘ಸುಕೇಶ್ ಚಂದ್ರಶೇಖರ್ ನಡೆಸುತ್ತಿದ್ದ ಅಕ್ರಮಗಳ ಬಗ್ಗೆ ಜಾಕ್ವೆಲಿನ್ಗೆ ತಿಳಿದಿತ್ತು. ಆದಾಗ್ಯೂ ಅವರು ಸುಕೇಶ್ನಿಂದ ಆರ್ಥಿಕ ಸಹಾಯವನ್ನು ಪಡೆದುಕೊಳ್ಳುತ್ತಿದ್ದರು. ಜಾಕ್ವೆಲಿನ್ ಅವರ ಕೇಶ ವಿನ್ಯಾಸಕ ಶಾನ್ ಅವರು ಸುಕೇಶ್ ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಜಾಕ್ವೆಲಿನ್ ಅವರು ಈ ವಿಚಾರವನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಸುಕೇಶ್ ಜತೆ ರಿಲೇಶನ್ಶಿಪ್ ಮುಂದುವರಿಸಿದ್ದರು’ ಎಂದು ಇಡಿ ತನ್ನ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದೆ. ಜಾಕ್ವೆಲಿನ್ ಮ್ಯಾನೇಜರ್ಗೆ ಸುಕೇಶ್ ನೀಡಿದ್ದ 8 ಲಕ್ಷ ರೂಪಾಯಿ ಬೆಲೆಯ ಬೈಕ್ ಅನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:02 am, Mon, 26 September 22