Bhool Bhulaiyaa 2: ಕೊನೆಗೂ ಬಾಲಿವುಡ್​​ ಚಿತ್ರವೊಂದರ ಕೈಹಿಡಿದ ಹಿಂದಿ ಪ್ರೇಕ್ಷಕರು; ‘ಭೂಲ್ ಭುಲಯ್ಯ 2’ ಕಲೆಕ್ಷನ್ ಎಷ್ಟು?

Bhool Bhulaiyaa 2: ಕೊನೆಗೂ ಬಾಲಿವುಡ್​​ ಚಿತ್ರವೊಂದರ ಕೈಹಿಡಿದ ಹಿಂದಿ ಪ್ರೇಕ್ಷಕರು; ‘ಭೂಲ್ ಭುಲಯ್ಯ 2’ ಕಲೆಕ್ಷನ್ ಎಷ್ಟು?
‘ಭೂಲ್ ಭುಲಯ್ಯ 2’ ಪೋಸ್ಟರ್​

Bhool Bhulaiyaa 2 Box Office Collection: ಹಿಂದಿ ಚಿತ್ರರಂಗಕ್ಕೆ ಭರವಸೆಯಂತೆ ‘ಭೂಲ್ ಭುಲಯ್ಯ 2’ (Bhool Bhulaiyaa 2) ತೆರೆಕಂಡಿದೆ. ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾನಿ ನಟನೆಯ ಈ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಪರಿಣಾಮವಾಗಿ ಬಾಕ್ಸಾಫೀಸ್ ಕಲೆಕ್ಷನ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

TV9kannada Web Team

| Edited By: shivaprasad.hs

May 22, 2022 | 3:21 PM

ಸಾಲುಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್ ಚಿತ್ರರಂಗಕ್ಕೆ ಕಮರ್ಷಿಯಲ್ ಚಿತ್ರವೊಂದು ಕೊನೆಗೂ ಆಸರೆ ನೀಡಿದೆ. ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ 2021ರ ನವೆಂಬರ್ ಸಮಯದಲ್ಲಿ ತೆರೆಕಂಡಿತ್ತು. ಅದರ ನಂತರ ಬಾಲಿವುಡ್​ನ ಯಾವ ಕಮರ್ಷಿಯಲ್ ಚಿತ್ರಗಳೂ ಉತ್ತಮವಾಗಿ ಗಳಿಕೆ ಮಾಡಿರಲಿಲ್ಲ. ಈ ನಡುವೆ ರಿಲೀಸ್ ಆಗಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಮೊದಲ ದಿನ ಕಡಿಮೆ ಗಳಿಸಿದ್ದರೂ ನಂತರ ಅದ್ಭುತವಾಗಿ ಕಲೆಕ್ಷನ್ ಮಾಡಿತ್ತು. ಆದರೆ ಸ್ಟಾರ್​ಗಳು ನಟಿಸಿದ್ದ ಯಾವ ಚಿತ್ರಗಳೂ ಪ್ರೇಕ್ಷಕರ ಮನಗೆದ್ದಿರಲಿಲ್ಲ. ಸಲ್ಮಾನ್ ಖಾನ್, ರಣವೀರ್ ಸಿಂಗ್, ಶಾಹಿದ್ ಕಪೂರ್, ಅಕ್ಷಯ್ ಕುಮಾರ್ ಸೇರಿದಂತೆ ಸ್ಟಾರ್ ನಟರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದೇ ಬದಿಗೆ ಸರಿದಿದ್ದವು. ದಕ್ಷಿಣ ಭಾರತದ ಚಿತ್ರಗಳು ಹಿಂದಿ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದ್ದು ಇದಕ್ಕೆ ಪ್ರಮುಖ ಕಾರಣವಾಗಿದ್ದರೆ, ಬಾಲಿವುಡ್ ಚಿತ್ರಗಳಲ್ಲಿ ಜನರು ಇಷ್ಟಪಡುವ ಅಂಶಗಳಿಲ್ಲದೇ ಇದ್ದದ್ದು ಚಿತ್ರಗಳ ಸೋಲಿಗೆ ಮತ್ತೊಂದು ಕಾರಣವಾಗಿತ್ತು. ಇದೀಗ ಹಿಂದಿ ಚಿತ್ರರಂಗಕ್ಕೆ ಭರವಸೆಯಂತೆ ‘ಭೂಲ್ ಭುಲಯ್ಯ 2’ (Bhool Bhulaiyaa 2) ತೆರೆಕಂಡಿದೆ. ಹಾರರ್ ಕಾಮಿಡಿ ಮಾದರಿಯ ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ (Kartik Aaryan), ಕಿಯಾರಾ ಅಡ್ವಾನಿ (Kiara Advani)  ಮೊದಲಾದವರು ನಟಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಪರಿಣಾಮವಾಗಿ ಬಾಕ್ಸಾಫೀಸ್ ಕಲೆಕ್ಷನ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಶುಕ್ರವಾರ ತೆರೆಕಂಡಿದ್ದ ‘ಭೂಲ್ ಭುಲಯ್ಯ 2’ ಮೊದಲ ದಿನವೇ ನಿರೀಕ್ಷೆಗೂ ಮೀರಿ 14 ಕೋಟಿ ರೂ ಗಳಿಸಿತ್ತು. ಎರಡನೇ ದಿನ 18 ಕೋಟಿ ರೂ ಬಾಚಿಕೊಂಡಿದ್ದು, ಮೊದಲ ದಿನಕ್ಕಿಂತ ಕಲೆಕ್ಷನ್ ಮತ್ತಷ್ಟು ಏರಿದೆ. ಇದರಿಂದ ಒಟ್ಟಾರೆ 32.45 ಕೋಟಿ ರೂಗಳನ್ನು ಚಿತ್ರ ಗಳಿಸಿದಂತಾಗಿದೆ. ಚಿತ್ರಕ್ಕೆ ಪ್ರತಿಕ್ರಿಯೆ ಉತ್ತಮವಾಗಿರುವುದರಿಂದ ಭಾನುವಾರ ಕೂಡ ಗಳಿಕೆ ಏರುವ ಸಾಧ್ಯತೆ ಇದೆ.

2022ರ ಐದು ತಿಂಗಳ ಅವಧಿಯಲ್ಲಿ ಯಾವ ಹಿಂದಿ ಚಿತ್ರವೂ ಪಡೆಯದ ದಾಖಲೆಯ ಓಪನಿಂಗ್​ ‘ಭೂಲ್​ ಭುಲಯ್ಯ 2’ಗೆ ಸಿಕ್ಕಿದೆ.  ಇದರಿಂದಲೇ ನೀವು ‘ಭೂಲ್ ಭುಲಯ್ಯ 2’ ಯಶಸ್ಸನ್ನು ಊಹಿಸಬಹುದು. ಅನೀಸ್ ಬಜ್ಮಿ ನಿರ್ದೇಶನದ ಈ ಚಿತ್ರ 2007ರಲ್ಲಿ ತೆರೆಕಂಡಿದ್ದ ‘ಭೂಲ್ ಭುಲಯ್ಯ’ ಚಿತ್ರದ ಸೀಕ್ವೆಲ್ ಆಗಿದೆ. ಪ್ರಿಯದರ್ಶನ್ ನಿರ್ದೇಶಿಸಿದ್ದ ಆ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದರು.

ಕಂಗನಾ ನಟನೆಯ ‘ಧಾಕಡ್’ ಕೂಡ ಶುಕ್ರವಾರ ತೆರೆಕಂಡಿತ್ತು. ಆದರೆ ಪ್ರೇಕ್ಷಕರು ಅದರ ಕೈಹಿಡಿದಿಲ್ಲ. ಎರಡು ದಿನಗಳಲ್ಲಿ ಚಿತ್ರದ ಗಳಿಕೆ ಒಂದು ಕೋಟಿ ರೂಗಳ ಆಸುಪಾಸಿನಲ್ಲಿದೆ. ಸುಮಾರು 100 ಕೋಟಿ ರೂ ಬಜೆಟ್​ನ ಚಿತ್ರ ದಾರುಣವಾಗಿ ಸೋಲು ಕಂಡಿದ್ದು, ಕಂಗನಾ ಚಿಂತೆ ಹೆಚ್ಚಿಸಿದೆ. ಅದಾಗ್ಯೂ ನಟಿ ‘ಭೂಲ್ ಭುಲಯ್ಯ 2’ ಯಶಸ್ಸಿಗೆ ಚಿತ್ರತಂಡಕ್ಕೆ ಅಭಿನಂದನೆ ಹೇಳಿದ್ಧಾರೆ. ಇತರ ಬಾಲಿವುಡ್ ತಾರೆಯರು ಕೂಡ ಕಾರ್ತಿಕ್ ನಟನೆಯ ಈ ಚಿತ್ರದ ಯಶಸ್ಸಿನ ಪ್ರಾಮುಖ್ಯತೆಯನ್ನು ಅರಿತುಕೊಂಡಿದ್ದು, ಶುಭಾಶಯ ಹೇಳುತ್ತಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್​’ ಒಟ್ಟಾರೆ 340 ಕೋಟಿ ರೂ ಬಾಚಿಕೊಂಡಿತ್ತು. ಅದರ ಹೊರತಾಗಿ ಮತ್ಯಾವ ಹಿಂದಿ ಚಿತ್ರಗಳು ಅದರಲ್ಲೂ ಕಮರ್ಷಿಯಲ್ ಚಿತ್ರಗಳು ಇತ್ತೀಚೆಗೆ ಯಶಸ್ವಿಯಾಗಿಲ್ಲ. ‘ಆರ್​ಆರ್​ಆರ್’, ‘ಕೆಜಿಎಫ್ ಚಾಪ್ಟರ್ 2’, ‘ಪುಷ್ಪ: ದಿ ರೈಸ್’ ಮೊದಲಾದ ಚಿತ್ರಗಳು ಹಿಂದಿ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿ ಬಾಕ್ಸಾಫೀಸ್ ಕೊಳ್ಳೆಹೊಡೆದಿದ್ದವು. ಇದರಿಂದ ನಿರಾಶೆಯಲ್ಲಿದ್ದ ಬಾಲಿವುಡ್​ಗೆ ‘ಭೂಲ್ ಭುಲಯ್ಯ 2’ ತುಸು ಸಮಾಧಾನ ನೀಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada