‘ನಾವು ಸೂಚಿಸಿದ ಬದಲಾವಣೆ ಮಾಡಿ’; ಮುಸ್ಲಿಂ ಸಮುದಾಯದವರಿಂದಲೂ ‘ಪಠಾಣ್’ ಚಿತ್ರಕ್ಕೆ ವಿರೋಧ
‘ಪಠಾಣ್’ ಸಿನಿಮಾ ವಿವಾದ ಮಾಡಿಕೊಂಡಿದೆ. ಚಿತ್ರಕ್ಕೆ ಮುಸ್ಲಿಂ ಧರ್ಮದ ಕೆಲವರು ಕೊಂಕು ತೆಗೆದಿದ್ದಾರೆ. ಇದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ.
ಬಾಲಿವುಡ್ ಚಿತ್ರಗಳು ರಿಲೀಸ್ ಆಗುತ್ತಿವೆ ಎಂದರೆ ಅದಕ್ಕೆ ಬಾಯ್ಕಾಟ್ ಬಿಸಿ ತಾಗೋದು ಸಾಮಾನ್ಯ ಎಂಬಂತಾಗಿದೆ. ಆಮಿರ್ ಖಾನ್ (Aamir Khan), ರಣಬೀರ್ ಕಪೂರ್ ಮೊದಲಾದ ಹೀರೋಗಳ ಸಿನಿಮಾಗಳು ಈ ತೊಂದರೆ ಅನುಭವಿಸಿವೆ. ಈಗ ಶಾರುಖ್ ಖಾನ್ ಅವರ ಸರದಿ. ಅವರ ನಟನೆಯ ‘ಪಠಾಣ್’ ಸಿನಿಮಾಗೆ (Pathan Movie) ಸಾಕಷ್ಟು ವಿರೋಧ ವ್ಯಕ್ತವಾಗಿದೆ. ‘ಬೇಷರಂ ರಂಗ್..’ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದು ವಿರೋಧ ವ್ಯಕ್ತವಾಗಲು ಪ್ರಮುಖ ಕಾರಣ. ಈಗ ‘ಪಠಾಣ್’ ಚಿತ್ರಕ್ಕೆ ಮುಸ್ಲಿಂ ಸಮುದಾಯದವರೂ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಕೆಲ ಬದಲಾವಣೆ ಮಾಡಲು ಸೂಚನೆ ನೀಡಿದ್ದಾರೆ.
2018ರಲ್ಲಿ ತೆರೆಗೆ ಬಂದ ‘ಝೀರೋ’ ಚಿತ್ರ ಹೀನಾಯವಾಗಿ ಸೋತಿತು. ಇದಾದ 4 ವರ್ಷಗಳ ಬಳಿಕ ಶಾರುಖ್ ಖಾನ್ ಅವರು ‘ಪಠಾಣ್’ ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಶಾರುಖ್ ಖಾನ್ ಮಾಸ್ ಆ್ಯಕ್ಷನ್ ಮೂಲಕ ಸದ್ದು ಮಾಡಲು ರೆಡಿ ಆಗಿದ್ದಾರೆ ಎಂಬುದು ಈಗಾಗಲೇ ಸಾಬೀತಾಗಿದೆ. ಅವರ ಕಟ್ಟುಮಸ್ತಾದ ದೇಹ ಕೂಡ ಸಾಕಷ್ಟು ಗಮನ ಸೆಳೆದಿದೆ. ಈ ಮಧ್ಯೆ ಸಿನಿಮಾ ವಿವಾದ ಮಾಡಿಕೊಂಡಿದೆ. ಈಗ ಈ ಚಿತ್ರಕ್ಕೆ ಮುಸ್ಲಿಂ ಧರ್ಮದ ಕೆಲವರು ಕೊಂಕು ತೆಗೆದಿದ್ದಾರೆ.
‘ಪಠಾಣ್’ ಚಿತ್ರ ಟೈಟಲ್ ಮೂಲಕ ಸಾಕಷ್ಟು ಗಮನ ಸೆಳೆದಿತ್ತು. ಆದರೆ, ಮಧ್ಯಪ್ರದೇಶದ ಉಲಾಮಾ ಹೆಸರಿನ ಮುಸ್ಲಿಂ ಮಂಡಳಿ ಈ ಟೈಟಲ್ ಬಗ್ಗೆ ಅಪಸ್ವರ ತೆಗೆದಿದೆ. ‘ಮುಸ್ಲಿಂ ಸಮುದಾಯದಲ್ಲಿ ಪಠಾಣರು ಅತ್ಯಂತ ಗೌರವಾನ್ವಿತರು. ಈ ಸಿನಿಮಾದಲ್ಲಿ ಪಠಾಣರಷ್ಟೇ ಅಲ್ಲ, ಇಡೀ ಮುಸ್ಲಿಂ ಸಮುದಾಯಕ್ಕೆ ಮಾನಹಾನಿ ಮಾಡಲಾಗುತ್ತಿದೆ. ಚಿತ್ರಕ್ಕೆ ಪಠಾಣ್ ಎಂದು ಹೆಸರು ಇಡಲಾಗಿದೆ ಮತ್ತು ಈ ಚಿತ್ರದ ಹಾಡಿನಲ್ಲಿ ಮಹಿಳೆಯರು ಅಶ್ಲೀಲವಾಗಿ ಡಾನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ಪಠಾಣರನ್ನು ತಪ್ಪಾಗಿ ಚಿತ್ರಿಸಲಾಗಿದೆ’ ಎಂದು ಮಂಡಳಿ ಹೇಳಿದೆ.
ಇದನ್ನೂ ಓದಿ: ‘ಪಠಾಣ್’ ಚಿತ್ರ ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್ ಮಾಡಲಿದೆ? ಶಾರುಖ್ ಖಾನ್ಗೆ ನೇರ ಪ್ರಶ್ನೆ
‘ನಾವು ಹೇಳಿದ ಬದಲಾವಣೆಗಳನ್ನು ಮಾಡಬೇಕು. ಒಂದೊಮ್ಮೆ ಅದು ಆಗದೇ ಇದ್ದರೆ ಈ ಸಿನಿಮಾ ಮಧ್ಯ ಪ್ರದೇಶದಲ್ಲಿ ರಿಲೀಸ್ ಆಗಬೇಕೋ ಅಥವಾ ಬೇಡವೋ ಎನ್ನುವ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತೇವೆ’ ಎಂದು ಮಂಡಳಿ ಎಚ್ಚರಿಕೆ ನೀಡಿದೆ. ಸಿನಿಮಾ ಬಗ್ಗೆ ಹರಡುತ್ತಿರುವ ನೆಗೆಟಿವಿಟಿ ಬಗ್ಗೆ ಶಾರುಖ್ ಖಾನ್ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಫ್ಯಾನ್ಸ್ ಸಿನಿಮಾ ಗೆಲ್ಲಿಸುತ್ತಾರೆ ಎಂಬ ಭರವಸೆಯಲ್ಲಿ ಅವರಿದ್ದಾರೆ. ಈ ಮಧ್ಯೆ ಮುಸ್ಲಿಂ ಮಂಡಳಿ ಕೂಡ ಚಿತ್ರದ ಬಗ್ಗೆ ವಿರೋಧ ವ್ಯಕ್ತಪಡಿಸಿರುವುದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:47 am, Mon, 19 December 22