ಖ್ಯಾತ ನಟರ ಚಿತ್ರಗಳಲ್ಲಿ ಮಹಿಳಾ ವಿರೋಧಿ ಸಂಭಾಷಣೆ; ಮುಂಬೈ ಪೊಲೀಸ್ ಹೇಳಿದ್ದೇನು?
ಬಾಲಿವುಡ್ನ ಕೆಲವು ಚಿತ್ರಗಳಲ್ಲಿರುವ ಮಹಿಳಾ ದ್ವೇಷಿ ಸಂಭಾಷಣೆಯನ್ನು ಮುಂಬೈ ಪೊಲೀಸ್ನ ಸಾಮಾಜಿಕ ಜಾಲತಾಣ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಇದರಲ್ಲಿ ಶಾಹಿದ್ ಕಪೂರ್, ಸಲ್ಮಾನ್ ಖಾನ್, ಶಾರುಖ್ ಖಾನ್ ನಟನೆಯ ಸಿನಿಮಾಗಳ ಹೆಸರೂ ಇಲ್ಲಿವೆ. ಹೀಗೆ ಹಂಚಿಕೊಳ್ಳಲು ಕಾರಣವೇನು? ಇಲ್ಲಿದೆ ಮಾಹಿತಿ.
ಮುಂಬೈ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಡೆಸುತ್ತಾರೆ. ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಾಲಿವುಡ್ನ ಕೆಲವು ಖ್ಯಾತ ಚಿತ್ರಗಳು ಮಹಿಳಾ ವಿರೋಧಿ ಧೋರಣೆಯನ್ನು ಢಾಳಾಗಿ ತೋರಿಸಿರುವುದನ್ನು ಬೊಟ್ಟು ಮಾಡಿ ತೋರಿಸಿ, ಅದು ತಪ್ಪು ಎಂದು ತಿಳಿಸಲಾಗಿದೆ. ಅದರಲ್ಲಿ ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ‘ಕಬೀರ್ ಸಿಂಗ್’ ಚಿತ್ರದ ಎರಡು ದೃಶ್ಯಗಳಿವೆ. ಇದಲ್ಲದೇ ಬಾಲಿವುಡ್ನ ಕೆಲವು ಖ್ಯಾತ ನಟರ ಚಿತ್ರಗಳನ್ನೂ ಸೇರಿಸಿ, ಆ ಚಿತ್ರಗಳಲ್ಲಿ ಬರುವ ಆಕ್ಷೇಪಾರ್ಹ ಸಂಭಾಷಣೆಯನ್ನು ಬರೆದು, ಅಂತಹ ಮನಸ್ಥಿತಿ ತಪ್ಪು ಎನ್ನುವ ಎಚ್ಚರಿಕೆಯನ್ನು ಮುಂಬೈ ಪೊಲೀಸ್ ಖಾತೆಯಿಂದ ನೀಡಲಾಗಿದೆ. ಅವರ ಈ ನಡೆ ಜನ ಸಾಮಾನ್ಯರ ಹಾಗೂ ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗಿದೆ.
‘ಸಿನಿಮಾ ನಮ್ಮ ಸಮಾಜದ ಪ್ರತಿಬಿಂಬ’ ಎಂದು ಕ್ಯಾಪ್ಶನ್ನ ಮೊದಲ ಸಾಲಿನಲ್ಲಿ ಬರೆಯಲಾಗಿದೆ. ‘ಹಲವು ಚಿತ್ರಗಳ ಕೆಲವು ಸಂಭಾಷಣೆಗಳನ್ನು ಇಲ್ಲಿ ನೀಡಲಾಗಿದೆ. ಇವು ನಮ್ಮ ಸಮಾಜ ಹಾಗೂ ಸಿನಿಮಾಗಳು ಗಮನಿಸಬೇಕಾದ ವಿಷಯ’ ಎಂದು ಬರೆಯಲಾಗಿದ್ದು, ಇದರೊಂದಿಗೆ, ‘ನಿಮ್ಮ ನಡೆ ಹಾಗೂ ನುಡಿಗಳನ್ನು ಎಚ್ಚರಿಕೆಯಿಂದ ಬಳಸಿ, ಇಲ್ಲವಾದರೆ ಕಾನೂನು ಮಧ್ಯಪ್ರವೇಶಿಸಬಹುದು’ ಎಂದು ಕ್ಯಾಪ್ಶನ್ ನೀಡಲಾಗಿದೆ. ಸಮಾಜದಲ್ಲಿ ಇನ್ನೂ ನೆಲೆನಿಂತಿರುವ ಮಹಿಳಾ ವಿರೋಧಿ ಮನಸ್ಥಿತಿ ಹಾಗೂ ಸಿನಿಮಾದಲ್ಲಿ ಅದನ್ನು ವಿಜೃಂಭಿಸುವುದರ ವಿರುದ್ಧ ಮುಂಬೈ ಪೊಲೀಸ್ ಈ ಮೂಲಕ ಜಾಗೃತಿ ನೀಡಲು ಮುಂದಾಗಿದೆ.
ಜನರಿಂದ ಮೆಚ್ಚುಗೆಗೆ ಪಾತ್ರವಾಗಿದ್ದ ‘ಅರ್ಜುನ್ ರೆಡ್ಡಿ’ ಚಿತ್ರದ ರಿಮೇಕ್ ‘ಕಬೀರ್ ಸಿಂಗ್’ ಚಿತ್ರದ ಎರಡು ಸಂಭಾಷಣೆಗಳನ್ನು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ. ಒಂದು, ‘ನಿನ್ನ ದುಪ್ಪಟ್ಟಾವನ್ನು ಸರಿಪಡಿಸಿಕೊ’ ಎನ್ನುವ ಕಬೀರ್ ಸಿಂಗ್ ಹಾಗೂ ಕೋಪದಲ್ಲಿ ಈಕೆ ತನ್ನ ಬಂಧಿ ಎನ್ನುವ ಸಂಭಾಷಣೆಗಳನ್ನು ಉಲ್ಲೇಖಿಸಲಾಗಿದೆ.
ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಕಬೀರ್ ಸಿಂಗ್’ ಮೊದಲಿನಿಂದಲೂ ಸಾಕಷ್ಟು ಚರ್ಚೆಗೊಳಗಾಗಿತ್ತು. ಈ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಾಹಿದ್ ಕಪೂರ್, ಕಬೀರ್ ಸಿಂಗ್ ‘‘ಪಾತ್ರದ ಒಂದೇ ಸಮಸ್ಯೆಯೆಂದರೆ ಅದು ಅತಿ ಕೋಪ ಮತ್ತು ಅದನ್ನು ನಿರ್ವಹಿಸುವಲ್ಲಿ ಸೋಲುವುದು. ಯಾವಾಗ ಆತ ಕೋಪವನ್ನು ನಿರ್ವಹಿಸುವಲ್ಲಿ ಸೋಲುತ್ತಾನೋ ಆಗ ಅಚಾತುರ್ಯಗಳು ಸಂಭವಿಸುತ್ತವೆ’’ ಎಂದು ಕತೆಯ ಕುರಿತು ನುಡಿದಿದ್ದರು.
ಕಬೀರ್ ಸಿಂಗ್ ಚಿತ್ರವಲ್ಲದೆ, ‘ದಬಾಂಗ್’ ಚಿತ್ರದಲ್ಲಿ ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾಗೆ ಹೊಡೆಯುತ್ತೇನೆ ಎಂಬ ಬೆದರಿಕೆ ಹಾಕುವುದು, ಶಾರುಖ್ ಖಾನ್ ‘ಹಮ್ ತುಮ್ಹಾರೆ ಹೇ ಸನಮ್’ನಲ್ಲಿ ಮಾಧುರಿನ ದೀಕ್ಷಿತ್ಗೆ ಪತ್ನಿಯ ಕರ್ತವ್ಯಗಳ ಕುರಿತು ಸಲಹೆ ನೀಡುವುದು ಮೊದಲಾದವುಗಳನ್ನೂ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ಮುಂಬೈ ಪೊಲೀಸರು ಹಂಚಿಕೊಂಡ ಪೋಸ್ಟ್ ಇಲ್ಲಿದೆ:
View this post on Instagram
ಈ ಪೋಸ್ಟ್ನ ಕಾಮೆಂಟ್ ಬಾಕ್ಸ್ನಲ್ಲಿ ಕೆಲವು ಉತ್ತಮ ಚರ್ಚೆಗಳೂ ನಡೆದಿವೆ. ಅಭಿಮಾನಿಯೊಬ್ಬ ಇಮ್ತಿಯಾಜ್ ಅಲಿ ನಿರ್ದೇಶನದ ಕರೀನಾ ಕಪೂರ್ ನಿರ್ದೇಶನದ ‘ಜಬ್ ವಿ ಮೆಟ್’ ಚಿತ್ರದಲ್ಲಿ ಆಕೆಯ ವಿರುದ್ಧ ಸಂಭಾಷಣೆಯೊಂದನ್ನು ಬಳಸಲಾಗಿತ್ತು. ಅದು ಮಹಿಳೆಯ ಗೌರವಕ್ಕೆ ವಿರುದ್ಧವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮತ್ತೋರ್ವರು, ‘ಇಲ್ಲ. ಒಂದು ಚಿತ್ರದಲ್ಲಿ ಮಹಿಳೆಯ ವಿರುದ್ಧ ಆಕ್ಷೇಪಾರ್ಹ ಸಂಭಾಷಣೆ ಇದೆ ಎಂದ ಮಾತ್ರಕ್ಕೆ ಅದನ್ನು ವಿರೋಧಿಸುವುದಲ್ಲ. ಉದಾಹರಣೆಗೆ ಜಬ್ ವಿ ಮೆಟ್ ಚಿತ್ರದಲ್ಲಿ ಕರೀನಾ ವಿರುದ್ಧ ಏನು ಪದ ಬಳಸಲಾಗಿತ್ತೋ, ಅದನ್ನು ಕರೀನಾ ಚಿತ್ರದಲ್ಲಿಯೇ ವಿರೋಧಿಸುತ್ತಾರೆ. ಮತ್ತು ಅದರ ವಿರುದ್ಧ ಹೋರಾಡುತ್ತಾರೆ. ಆದರೆ ಕಬೀರ್ ಸಿಂಗ್ ಚಿತ್ರದಲ್ಲಿ, ಮಹಿಳೆಯ ವಿರುದ್ಧ ಆಕ್ಷೇಪಾರ್ಹ ಸಂಭಾಷಣೆಗಳಿವೆ. ಆದರೆ ಅದನ್ನು ತಪ್ಪೆಂದು ಚಿತ್ರದಲ್ಲಿ ಎಲ್ಲೂ ಹೇಳಿಲ್ಲ’’ ಎಂದು ಬರೆದಿದ್ದಾರೆ.
ಮತ್ತೆ ಕೆಲವು ಕಾಮೆಂಟ್ಗಳಲ್ಲಿ ಪೊಲೀಸರು ಮಹಿಳೆಯರನ್ನು ನಡೆಸಿಕೊಳ್ಳುವದರ ಕುರಿತೂ ದನಿಯೆತ್ತಿ ಎಂದು ಬರೆದಿದ್ದಾರೆ.
ಇದನ್ನೂ ಓದಿ:
‘ನೋ ಟೈಮ್ ಟು ಡೈ’ ಪ್ರೇಕ್ಷಕರ ವಿಮರ್ಶೆ: ಬಾಂಡ್ ಸರಣಿಯ 25ನೇ ಚಿತ್ರ ನೋಡಿ ಸಿನಿಪ್ರಿಯರು ಏನಂದ್ರು?