‘ರಾಮಾಯಣ’ ಸಿನಿಮಾಗೆ ಸೂಪರ್ ರೇಟಿಂಗ್ಸ್; ಟೀಕಾಕಾರರ ಬಾಯಿ ಮುಚ್ಚಿಸಿದ ದೃಶ್ಯವೈಭವ
ರಾಮಾಯಣ ಸಿನಿಮಾ ವಿಶ್ವದೆಲ್ಲೆಡೆ ಪಾಸಿಟಿವ್ ವಿಮರ್ಶೆ ಪಡೆಯುತ್ತಿದೆ. ರಾವಣನಾಗಿ ಯಶ್ ನಟನೆ ಸಂಪೂರ್ಣವಾಗಿ ಆವರಿಸಿಕೊಂಡಿದ್ದರೆ, ಸಾಯಿ ಪಲ್ಲವಿ ಹಾಗೂ ರಣಬೀರ್ ಕಪೂರ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ನಿತೇಶ್ ತಿವಾರಿ ನಿರ್ದೇಶನ, ಎಆರ್ ರೆಹಮಾನ್-ಹ್ಯಾನ್ಸ್ ಜಿಮ್ಮರ್ ಸಂಗೀತ ಹಾಗೂ ವಿಎಫ್‌ಎಕ್ಸ್ ಟೀಕಾಕಾರರ ಬಾಯಿ ಮುಚ್ಚಿಸಿ ದೃಶ್ಯವೈಭವ ಸೃಷ್ಟಿಸಿದೆ.

ಮುಖ್ಯಾಂಶಗಳು
- ತೆರೆಮೇಲೆ ರಾವಣನಾಗಿ ಯಶ್ ದಂಡಯಾತ್ರೆ
- ಸೀತೆಯಾಗಿ ಸಾಯಿ ಪಲ್ಲವಿ ದೈವಿಕ ಅಭಿನಯ
- ಟೀಕೆ ಮಾಡಿದವರಿಗೆ ನಟನೆಯ ಮೂಲಕವೇ ಸಿಕ್ಕಿತು ಉತ್ತರ
ಭಾರತೀಯ ಚಿತ್ರರಂಗದ ಅತಿದೊಡ್ಡ ಸಾಹಸ ಎನಿಸಿಕೊಂಡಿರುವ ನಿರ್ದೇಶಕ ನಿತೇಶ್ ತಿವಾರಿ ಅವರ ‘ರಾಮಾಯಣ‘ ಸಿನಿಮಾ ವಿಶ್ವದೆಲ್ಲೆಡೆ ತೆರೆಕಂಡು ಅಭೂತಪೂರ್ವ ಯಶಸ್ಸಿನತ್ತ ಧಾವಿಸುತ್ತಿದೆ. ರಿಲೀಸ್ ಆದ ಪ್ರತಿಯೊಂದು ಕೇಂದ್ರದಲ್ಲೂ ಸಿನಿಮಾಗೆ ಪಾಸಿಟಿವ್ ವಿಮರ್ಶೆಗಳು ಹರಿದುಬರುತ್ತಿದ್ದು, ಬೆಳ್ಳಿಪರದೆಯ ಮೇಲೆ ಈ ಮಹಾಕಾವ್ಯವನ್ನು ಅತ್ಯಂತ ಜವಾಬ್ದಾರಿಯಿಂದ ಕಟ್ಟಿಕೊಟ್ಟ ನಿತೇಶ್ ತಿವಾರಿ ಅವರ ನಿರ್ದೇಶನಕ್ಕೆ ಎಲ್ಲೆಡೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಾವಣನಾಗಿ ಸಂಪೂರ್ಣವಾಗಿ ಆವರಿಸಿಕೊಂಡ ಯಶ್
ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ರಾವಣನ ಪಾತ್ರವೇ ಅತಿ ದೊಡ್ಡ ಹೈಲೈಟ್. ತೆರೆಮೇಲೆ ರಾವಣನಾಗಿ ಯಶ್ ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಿದ್ದು, ಅವರ ರೌದ್ರಾವತಾರ, ಕಣ್ಣಿನ ತೇಜಸ್ಸು ಮತ್ತು ಘರ್ಜನೆಗೆ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದಾರೆ. ಲಂಕಾಧಿಪತಿಯ ಗಾಂಭೀರ್ಯ ಹಾಗೂ ಆತನ ಹಿನ್ನೆಲೆ ಮತ್ತು ದೃಷ್ಟಿಕೋನದ ಬಗ್ಗೆ ನಿರ್ದೇಶಕರು ಹೆಚ್ಚು ಗಮನ ಹರಿಸಿದ್ದು, ಯಶ್ ಅವರ ಅಭಿನಯ ಮತ್ತು ಸ್ಕ್ರೀನ್ ಪ್ರೆಸೆಂಸ್ ಪ್ರತಿಯೊಂದು ಸೀನ್‌ನಲ್ಲೂ ಮೈ ರೋಮಾಂಚನಗೊಳಿಸುವಂತಿದೆ.
ಟೀಕಾಕಾರರಿಗೆ ಕಪಾಳಮೋಕ್ಷ ಮಾಡಿದ ಸಾಯಿ ಪಲ್ಲವಿ ನಟನೆ
ಸೀತಾ ಮಾತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ತಮ್ಮ ದೈವಿಕ ಹಾಗೂ ಅಸಾಧಾರಣ ನಟನೆಯಿಂದ ಎಲ್ಲರ ಮನಸ್ಸನ್ನು ಸೂರೆಗೊಂಡಿದ್ದಾರೆ. ಆರಂಭದಲ್ಲಿ ಸಾಯಿ ಪಲ್ಲವಿ ಆಯ್ಕೆಯ ಬಗ್ಗೆ ಅಪಸ್ವರ ಎತ್ತಿ, ಟೀಕೆ ಮಾಡಿದ್ದವರಿಗೆ ತಮ್ಮ ಅಭಿನಯದ ಮೂಲಕವೇ ಅವರು ತಕ್ಕ ಉತ್ತರ ನೀಡಿದ್ದಾರೆ. ಇನ್ನು ಶ್ರೀರಾಮನಾಗಿ ಅಭಿನಯಿಸಿರುವ ರಣಬೀರ್ ಕಪೂರ್ ತಮ್ಮ ಗಂಭೀರತೆ, ಸೌಮ್ಯತೆ ಹಾಗೂ ಶಾಂತ ಸ್ವರೂಪದ ಅಭಿನಯಕ್ಕೆ ಸೈ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಸಿನಿಮಾನ ಸಂಭ್ರಮಿಸಿದ ಫ್ಯಾನ್ಸ್; ಯಶ್ ನಟನೆಗೆ ಫುಲ್ ಮಾರ್ಕ್ಸ್
ಮ್ಯೂಸಿಕ್, ವಿಎಫ್‌ಎಕ್ಸ್ ಟ್ರೋಲ್ ಮಾಡಿದವರಿಗೆ ಬಿಗ್ ಶಾಕ್
ಟೀಸರ್ ಮತ್ತು ಟ್ರೇಲರ್ ಹಂತದಲ್ಲಿ ವಿಎಫ್‌ಎಕ್ಸ್ ಹಾಗೂ ಮ್ಯೂಸಿಕ್ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಆದರೆ, ಸಿನಿಮಾದಲ್ಲಿ ಮೂಡಿಬಂದಿರುವ ಉತ್ತಮ ಗ್ರಾಫಿಕ್ಸ್ ಮತ್ತು ದೃಶ್ಯ ವೈಭವ ಪ್ರೇಕ್ಷಕರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್ ಹಾಗೂ ಹ್ಯಾನ್ಸ್ ಜಿಮ್ಮರ್ ಅವರ ಹಿನ್ನೆಲೆ ಸಂಗೀತ ಸಿನಿಮಾದ ಜೀವನಾಡಿಯಾಗಿದ್ದು, ಟೀಕೆ ಮಾಡಿದವರ ಬಾಯನ್ನು ಸಂಪೂರ್ಣವಾಗಿ ಮುಚ್ಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




